Fact Check: ರಾಹುಲ್ ಗಾಂಧಿ ಮತದಾರ ಅಧಿಕಾರ ಯಾತ್ರೆಯಲ್ಲಿ ಡಿಕೆ ಶಿವಕುಮಾರ್ ಸೈಡ್ ಲೈನ್?, ವೈರಲ್ ವೀಡಿಯೊದ ಸತ್ಯ ತಿಳಿಯಿರಿ
ಬಿಹಾರದಲ್ಲಿ ಮತದಾರ ಅಧಿಕಾರ ಯಾತ್ರೆ ವೇಳೆ ಡಿಕೆ ಶಿವಕುಮಾರ್ ಅವರನ್ನು ಕಡೆಗಣಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಕ್ಲಿಪ್ ಮಾಡಲಾಗಿದೆ.
By Vinay Bhat
Claim:ಮತದಾರ ಅಧಿಕಾರ ಯಾತ್ರೆಯಲ್ಲಿ ಡಿಕೆ ಶಿವಕುಮಾರ್ ಅವರನ್ನು ಕಡೆಗಣಿಸಿರುವುದು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಡಿಕೆ ಶಿವಕುಮಾರ್ ಅವರನ್ನು ಇಲ್ಲಿ ಕಡೆಗಣಿಸಲಾಗಿಲ್ಲ, ಅವರು ಜೀಪು ಏರಿ ರಾಹುಲ್ ಗಾಂಧಿ ಬಳಿ ನಿಂತಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಸೇರಿದಂತೆ ಕಾಂಗ್ರೆಸ್ನ ಅನೇಕ ನಾಯಕರು ಪ್ರಸ್ತುತ ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಹಕ್ಕುಗಳ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ಮತ ಕಳ್ಳತನ ಮತ್ತು ವಿಶೇಷ ತೀವ್ರ ಪರಿಷ್ಕರಣೆ (SIR) ವಿರುದ್ಧದ ಪ್ರತಿಪಕ್ಷಗಳ ಯಾತ್ರೆಯಲ್ಲಿ ಇದಾಗಿದೆ. ಇದರಲ್ಲಿ ಕರ್ನಾಟಕದ ಪ್ರಸಿದ್ಧ ಕಾಂಗ್ರೆಸ್ ನಾಯಕರು ಕೂಡ ಹಾಜರಾಗಿದ್ದಾರೆ. ಆಗಸ್ಟ್ 24 ರಂದು ಬಿಹಾರದ ಅರಾರಿಯಲ್ಲಿ ನಡೆದ ಯಾತ್ರೆಯಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಭಾಗಿಯಾಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಶಿವಕುಮಾರ್ ಜೀಪಿನ ಕೆಳಗೆ ನಿಂತಿರುವುದನ್ನು ಕಾಣಬಹುದು. ರಾಹುಲ್ ಗಾಂಧಿ ಸೇರಿದಂತೆ ಇನ್ನೂ ಕೆಲ ನಾಯಕರು ಜೀಪಿನ ಒಳಗೆ ಇದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಯಾರಿಗಾದ್ರೂ ನಮ್ಮ ಡಿಸಿಎಮ್ ಡಿ ಕೆ ಶಿವಕುಮಾರ್ ಕಾಣ್ತಾರೆನ್ರೋ? ಕೆಲಸಕ್ಕೆ ಬಾರದವೆಲ್ಲ ಗಾಡಿ ಮೇಲೆ ನಮ್ಮ ಚಾಣಕ್ಯ ಬಂಡೆ..’’ ಎಂದು ಬರೆದು ಅಳುವ ಎಮೋಜಿ ಹಾಕಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಡಿಕೆ ಶಿವಕುಮಾರ್ ಅವರನ್ನು ಇಲ್ಲಿ ಕಡೆಗಣಿಸಲಾಗಿಲ್ಲ, ಅವರು ಜೀಪು ಏರಿ ರಾಹುಲ್ ಗಾಂಧಿ ಬಳಿ ನಿಂತಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ "ಡಿಕೆ ಶಿವಕುಮಾರ್-ರಾಹುಲ್ ಗಾಂಧಿ ಮತದಾರರ ಅಧಿಕಾರ ಯಾತ್ರೆ" ಎಂಬ ಕೀವರ್ಡ್ ಅನ್ನು ಗೂಗಲ್ನಲ್ಲಿ ಹುಡುಕಿದೆವು. ಈ ಸಂದರ್ಭ ಆಗಸ್ಟ್ 25, 2025 ರಂದು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರು ಇತ್ತೀಚೆಗೆ ಮತದಾರರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ರ್ಯಾಲಿಯಲ್ಲಿ ಸೇರಿಕೊಂಡ ಬಗ್ಗೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಕಂಡಿತು. ಸುದ್ದಿ ವರದಿಯಲ್ಲಿ ಹಂಚಿಕೊಂಡಿರುವ ಛಾಯಾಚಿತ್ರದಲ್ಲಿ ರಾಹುಲ್ ಗಾಂಧಿಯವರೊಂದಿಗೆ ಶಿವಕುಮಾರ್ ಜೀಪಿನಲ್ಲಿ ನಿಂತಿರುವುದನ್ನು ಸ್ಪಷ್ಟವಾಗಿ ನೋಡಬಹುದು.
"ಬಿಹಾರದಲ್ಲಿ ನಡೆದ ಯಾತ್ರೆ ದೇಶದಲ್ಲಿ ದೊಡ್ಡ ಬದಲಾವಣೆ ತಂದಿದೆ. ರಾಹುಲ್ ಗಾಂಧಿ ಕರ್ನಾಟಕದಿಂದ ಬಿಹಾರಕ್ಕೆ ಎತ್ತಿರುವ ವಿಷಯ (ಮತ ಕಳ್ಳತನ) ದೇಶದಾದ್ಯಂತ ಚರ್ಚೆಯಾಗಿದೆ. ಅವರು ತನಗಾಗಿ ಹೋರಾಡುತ್ತಿಲ್ಲ... ಸಂವಿಧಾನವು ಖಾತರಿಪಡಿಸಿದಂತೆ ಸಾಮಾನ್ಯ ಮನುಷ್ಯನಿಗೆ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ" ಎಂದು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಬಿಹಾರದ ಅರಾರಿಯಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂಬ ಮಾಹಿತಿ ಇದರಲ್ಲಿದೆ.
ಇದರಿಂದ ಸುಳಿವು ಪಡೆದು, ಆಗಸ್ಟ್ 24, 2025 ರಂದು ರಾಹುಲ್ ಗಾಂಧಿಯವರ ಅಧಿಕೃತಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರವಾದ ಅರಾರಿಯಾದಲ್ಲಿ ನಡೆದ ರ್ಯಾಲಿಯ ವೀಡಿಯೊವನ್ನು ನಾವು ನೋಡಿದ್ದೇವೆ. ಇದರಲ್ಲಿ ವೈರಲ್ ವೀಡಿಯೊದ ಭಾಗ ಪ್ರಾರಂಭವಾಗುವ ಮೊದಲು ಡಿಕೆ ಶಿವಕುಮಾರ್ ಜೀಪಿನ ಬಳಿ ಬರುತ್ತಿದ್ದರು. ಇದನ್ನು 15:54 ಟೈಮ್ಲೈನ್ನಲ್ಲಿ ನೋಡಬಹುದು.
ಇನ್ನು ನಾವು ಡಿಕೆ ಶಿವಕುಮಾರ್ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಎಕ್ಸ್ನಲ್ಲಿ ಮತದಾರ ಅಧಿಕಾರ ಯಾತ್ರೆ ಕುರಿತು ಪೋಸ್ಟ್ ಹುಡುಕಿದ್ದೇವೆ. ಆಗ ಆಗಸ್ಟ್ 24, 2025 ರಂದು ವೈರಲ್ ಆಗುತ್ತಿರುವ ಹೇಳಿಕೆಗೆ ಇವರು ಪ್ರತಿಕ್ರಿಯಿಸಿರುವುದನ್ನು ನಾವು ಕಂಡುಕೊಂಡೆವು. ‘‘ಬಲಪಂಥೀಯರು ಮತ್ತೊಮ್ಮೆ ಕಠಿಣ ಕೆಲಸ ಮಾಡುತ್ತಿದೆ, ದಾರಿತಪ್ಪಿಸುವ ಚಿತ್ರಗಳನ್ನು ಹಂಚಿಕೊಳ್ಳುತ್ತಿವೆ ಮತ್ತು ಮತದಾರರ ಅಧಿಕಾರ ಯಾತ್ರೆಯ ಸಮಯದಲ್ಲಿ ನನ್ನನ್ನು ಜೀಪಿನ ಹೊರಗೆ ನಿಲ್ಲಿಸುವಂತೆ ಮಾಡಲಾಯಿತು ಎಂದು ಸುಳ್ಳು ಹೇಳಲಾಗುತ್ತಿದೆ.’’ ಎಂದು ಬರೆದು ಜೀಪಿನ ಮೇಲೆ ರಾಹುಲ್ ಗಾಂಧಿ ಜೊತೆ ನಿಂತಿರುವ ಫೋಟೋ, ವೀಡಿಯೊವನ್ನು ಹಂಚಿಕೊಂಡಿದ್ದಾರೆ.
The right-wing ecosystem is once again hard at work, circulating misleading images and falsely claiming that I was made to stand outside the jeep during the Voter Adhikar Yatra.Let’s set the record straight - with facts:1.First, thank you for your undivided attention to the… pic.twitter.com/vsV3PbYG64
— DK Shivakumar (@DKShivakumar) August 24, 2025
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬಿಹಾರದಲ್ಲಿ ಮತದಾರ ಅಧಿಕಾರ ಯಾತ್ರೆ ವೇಳೆ ಡಿಕೆ ಶಿವಕುಮಾರ್ ಅವರನ್ನು ಕಡೆಗಣಿಸಲಾಗಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಕ್ಲಿಪ್ ಮಾಡಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.