Fact Check: ರೈಲು ಹತ್ತುವಾಗ ಹಳಿ ಮೇಲೆ ಬಿದ್ದ ನಾಯಿ ಸಾವನ್ನಪ್ಪಿದೆಯೇ?
ನಾಯಿ ಲಯ ಕಳೆದುಕೊಂಡು ಚಲಿಸುವ ರೈಲಿನ ಅಡಿಗೆ ಬೀಳತ್ತದೆ. ಈ ವೀಡಿಯೊವನ್ನು ಅನೇಕರು ಹಂಚಿಕೊಳ್ಳುತ್ತಿದ್ದು, ನಾಯಿ ತನ್ನ ಮಾಲೀಕರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
By Vinay Bhat
Claim:ರೈಲು ಹತ್ತುವಾಗ ಹಳಿ ಮೇಲೆ ಬಂದ ನಾಯಿ ಸಾವನ್ನಪ್ಪಿದೆ.
Fact:ಈ ಅಪಘಾತದಲ್ಲಿ ನಾಯಿ ಸಾವನ್ನಪಿಲ್ಲ, ಸಣ್ಣಪುಟ್ಟ ಗಾಯಗಳಾಗಿವೆ.
ಕಳೆದ ಎರಡು-ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ನೀಲಿ ಟಿ-ಶರ್ಟ್ ಧರಿಸಿದ ವ್ಯಕ್ತಿಯೊಬ್ಬರು ತಮ್ಮ ಸಾಕು ನಾಯಿಯೊಂದಿಗೆ ಚಲಿಸುವ ರೈಲಿನ ಕೋಚ್‌ಗೆ ಓಡಿಕೊಂಡು ಹತ್ತಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ಸಂದರ್ಭ ನಾಯಿ ಲಯ ಕಳೆದುಕೊಂಡು ಚಲಿಸುವ ರೈಲಿನ ಅಡಿಗೆ ಬೀಳತ್ತದೆ. ಈ ವೀಡಿಯೊವನ್ನು ಅನೇಕರು ಹಂಚಿಕೊಳ್ಳುತ್ತಿದ್ದು, ನಾಯಿ ತನ್ನ ಮಾಲೀಕರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಏಪ್ರಿಲ್ 2, 2025 ರಂದು ಹಂಚಿಕೊಂಡು, ‘‘ಮನುಷ್ಯನ ಅವಸರಕ್ಕೆ ಅಮಾಯಕ ನಾಯಿ ಬಲಿ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಝಾನ್ಸಿ ರೈಲು ನಿಲ್ದಾಣದಲ್ಲಿ. ಈ ಅಪಘಾತದಲ್ಲಿ ನಾಯಿ ಸಾವನ್ನಪ್ಪಿಲ್ಲ.
ನಿಜಾಂಶವನ್ನು ತಿಳಿಯಲು ನಾವು ‘Dog Train Died’ ಎಂಬ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಸರ್ಚ್ ಮಾಡಿದ್ದೇವೆ. ಆಗ ಈ ಘಟನೆಗೆ ಸಂಬಂಧಿಸಿದ ಅನೇಕ ವರದಿಗಳು ನಮಗೆ ಸಿಕ್ಕಿದೆ. ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ನ್ಯೂಸ್ 18 ಏಪ್ರಿಲ್ 2, 2025 ರಂದು ಪ್ರಕಟಿಸಿದ ಸುದ್ದಿಯ ಪ್ರಕಾರ, ಈ ಘಟನೆಯು ಝಾನ್ಸಿಯ ವೀರಾಂಗಣ ಲಕ್ಷ್ಮಿಬಾಯಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 3 ರಲ್ಲಿ ನಡೆದಿದೆ. ಇದು ಮುಂಬೈ ರಾಜಧಾನಿ ಎಕ್ಸ್‌ಪ್ರೆಸ್ ರೈಲಾಗಿದೆ. ಮಹಿಳಾ ಪ್ರಯಾಣಿಕ ಉಪಾಸನಾ ರೈಲಿನಲ್ಲಿ ಮುಂಬೈಗೆ ಪ್ರಯಾಣಿಸುತ್ತಿದ್ದರು. ಅವರು ತನ್ನ ನಾಯಿಗೂ ಟಿಕೆಟ್ ಬುಕ್ ಮಾಡಿ ಅದರೊಂದಿಗೆ ಪ್ರಯಾಣಿಸುತ್ತಿದ್ದರು. ರೈಲು ಹಜರತ್ ನಿಜಾಮುದ್ದೀನ್ ನಿಂದ ಹೊರಟು ಝಾನ್ಸಿ ತಲುಪಿದಾಗ ನಾಯಿ ರೈಲಿನಿಂದ ಹೊರಗೆ ಹೋಯಿತು. ಆಗ ರೈಲು ಚಲಿಸಲು ಪ್ರಾರಂಭಿಸಿದಾಗ ನಾಯಿಯನ್ನು ರೈಲಿನ ಒಳಗೆ ಹಾಕುವ ಪ್ರಯತ್ನ ಮಾಡಲಾಯಿತು. ಈ ಸಮಯದಲ್ಲಿ ನಾಯಿಯ ಕುತ್ತಿಗೆಯಿಂದ ಬೆಲ್ಟ್ ಕಳಚಿದೆ. ಆಗ ನಾಯಿ ರೈಲಿನ ಅಡಿಗೆ ಬಿದ್ದಿದೆ. ಅದೃಷ್ಟವಶಾತ್, ಕೂಡಲೇ ಸರಪಳಿ ಎಳೆದು ರೈಲು ಸಕಾಲಕ್ಕೆ ನಿಂತಿತು. ಆರ್‌ಪಿಎಫ್-ರೈಲ್ವೆ ಸ್ಟಾಪ್ ಸಹಾಯದಿಂದ ನಾಯಿಯ ಜೀವ ಉಳಿಸಲಾಯಿತು’’ ಎಂಬ ಮಾಹಿತಿ ಇದರಲ್ಲಿದೆ.
ಏಪ್ರಿಲ್ 3, 2025 ರಂದು ಇಂಡಿಯನ್ ಎಕ್ಸ್‌ಪ್ರೆಸ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ನಾಯಿ ಅಪಘಾತದಲ್ಲಿ ಸಾಯಲಿಲ್ಲ. ಆರ್‌ಪಿಎಫ್-ರೈಲ್ವೆ ಸಿಬ್ಬಂದಿಯ ಸಹಾಯದಿಂದ ಅದರ ಜೀವ ಉಳಿಸಲಾಯಿತು ಎಂದು ಬರೆಯಲಾಗಿದೆ. ಹಾಗೆಯೆ ನಾಯಿ ಈ ಘಟನೆಯಿಂದ ಬದುಕುಳಿದಿದ್ದು, ತನ್ನ ಕುಟುಂಬದೊಂದಿಗೆ ಸುರಕ್ಷಿತವಾಗಿದೆ ಎಂದು ಝಾನ್ಸಿ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಮನೋಜ್ ಕುಮಾರ್ ಸಿಂಗ್ ಹೇಳಿಕೆಯನ್ನು ಇಂಡಿಯನ್ಸ್ ಎಕ್ಸ್‌ಪ್ರೆಸ್ ಬರೆದುಕೊಂಡಿದೆ.
ಈ ಘಟನೆಯಲ್ಲಿ ನಾಯಿ ಸಾವನ್ನಪ್ಪಿಲ್ಲ, ರೈಲನ್ನು ಸಮಯಕ್ಕೆ ಸರಿಯಾಗಿ ನಿಲ್ಲಿಸಲಾಯಿತು ಮತ್ತು ಆರ್‌ಪಿಎಫ್ ಸಹಾಯದಿಂದ ನಾಯಿಯನ್ನು ರಕ್ಷಿಸಲಾಯಿತು. ಆದರೆ, ನಾಯಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿರುವುದನ್ನು ನೀವು, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ರೈಲು ಅಪಘಾತದಲ್ಲಿ ನಾಯಿ ಸಾವನ್ನಪ್ಪಿದೆ ಎಂಬ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ಘಟನೆ ನಡೆದಿರುವುದು ಝಾನ್ಸಿ ರೈಲು ನಿಲ್ದಾಣದಲ್ಲಿ. ಈ ಅಪಘಾತದಲ್ಲಿ ನಾಯಿ ಸಾವನ್ನಪಿಲ್ಲ, ಸಣ್ಣಪುಟ್ಟ ಗಾಯಗಳಾಗಿವೆ.