ಯುಎಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ನಂತರ, ಡೊನಾಲ್ಡ್ ಟ್ರಂಪ್ ಅವರ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಟ್ರಂಪ್ ಅವರು, ನಾನು ಹಿಂದೂಗಳ ಮತ್ತು ಭಾರತದ ದೊಡ್ಡ ಅಭಿಮಾನಿ ಎಂದು ಹೇಳುವುದನ್ನು ಕೇಳಬಹುದು. ಚುನಾವಣಾ ಫಲಿತಾಂಶದ ನಂತರ ಟ್ರಂಪ್ ಅವರ ಮೊದಲ ವಿಜಯೋತ್ಸವ ಭಾಷಣ ಇದಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಅವರು ಭಾರತ ಮತ್ತು ಹಿಂದೂ ಸಮುದಾಯವನ್ನು ಹೊಗಳಿದ್ದಾರೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊ ಹಂಚಿಕೊಂಡು, ‘‘ನಾನು ಹಿಂದೂವಿನ ದೊಡ್ಡ ಅಭಿಮಾನಿ. ನಾನು ಭಾರತದ ದೊಡ್ಡ ಅಭಿಮಾನಿ. ಅಮೇರಿಕಾದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಮಾತು’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಟ್ರಂಪ್ ಅವರ ಇತ್ತೀಚಿನ ವೀಡಿಯೊ ಕ್ಲಿಪ್ ಅಲ್ಲ ಅಥವಾ 2024 ರ ಯುಎಸ್ ಚುನಾವಣೆಯ ಫಲಿತಾಂಶಗಳ ನಂತರದ ಮೊದಲ ಭಾಷಣವೂ ಅಲ್ಲ. ಟ್ರಂಪ್ ಹಿಂದೂ ಸಮುದಾಯವನ್ನು ಹೊಗಳಿರುವ ಈ ವೈರಲ್ ವೀಡಿಯೊ ಕ್ಲಿಪ್ 2016 ರ ಯುಎಸ್ ಅಧ್ಯಕ್ಷೀಯ ಚುನಾವಣಾ ಪ್ರಚಾರದ್ದಾಗಿದೆ.
ವೀಡಿಯೊದಲ್ಲಿ ಟ್ರಂಪ್ ಹೇಳಿರುವುದೇನು?:
48 ಸೆಕೆಂಡುಗಳ ಈ ವೈರಲ್ ವೀಡಿಯೊ ಕ್ಲಿಪ್‌ನಲ್ಲಿ, ಡೊನಾಲ್ಡ್ ಟ್ರಂಪ್, “ನಾನು ಹಿಂದೂಗಳ ದೊಡ್ಡ ಅಭಿಮಾನಿ ಮತ್ತು ನಾನು ಭಾರತದ ದೊಡ್ಡ ಅಭಿಮಾನಿ. ನಾನು ಅಧ್ಯಕ್ಷರಾಗಿ ಚುನಾಯಿತರಾದರೆ, ಭಾರತೀಯ ಮತ್ತು ಹಿಂದೂ ಸಮುದಾಯವು ಶ್ವೇತಭವನದಲ್ಲಿ ನಿಜವಾದ ಸ್ನೇಹಿತನನ್ನು ಹೊಂದಿರುತ್ತಾನೆ ಎಂದು ನೇರವಾಗಿ ಹೇಳುವುದರ ಮೂಲಕ ಪ್ರಾರಂಭಿಸುತ್ತೇನೆ, ನಾನು ನಿಮಗೆ ಭರವಸೆ ನೀಡಬಲ್ಲೆ. ಭಾರತೀಯ ಮತ್ತು ಹಿಂದೂ ಅಮೆರಿಕನ್ನರ ತಲೆಮಾರುಗಳು ನಮ್ಮ ದೇಶವನ್ನು ಬಲಪಡಿಸಿವೆ. ನಿಮ್ಮ ಶ್ರಮ, ಶಿಕ್ಷಣ ಮತ್ತು ಉದ್ಯಮದ ಮೌಲ್ಯಗಳು ನಮ್ಮ ರಾಷ್ಟ್ರವನ್ನು ನಿಜವಾಗಿಯೂ ಶ್ರೀಮಂತಗೊಳಿಸಿವೆ. ಆದರೆ ನಮಗೆಲ್ಲರಿಗೂ ತಿಳಿದಿರುವಂತೆ, ಭದ್ರತೆಯಿಲ್ಲದೆ ನಾವು ಸಮೃದ್ಧಿಯನ್ನು ಹೊಂದಲು ಸಾಧ್ಯವಿಲ್ಲ ಮತ್ತು ಅದಕ್ಕಾಗಿಯೇ ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಯುನೈಟೆಡ್ ಸ್ಟೇಟ್ನ ಮಹಾನ್ ಮಿತ್ರರಾಷ್ಟ್ರವಾಗಿ ಭಾರತವನ್ನು ಪ್ರಶಂಸಿಸುತ್ತೇವೆ.’’ ಎಂದು ಹೇಳಿದ್ದಾರೆ.
ಈ ಆಧಾರದ ಮೇಲೆ ನಾವು ನಿಜಾಂಶ ತಿಳಿಯಲು ಕೀವರ್ಡ್ ಹುಡುಕಾಟ ನಡೆಸಿದ್ದೇವೆ. ಆಗ ಅಕ್ಟೋಬರ್ 16, 2016 ರಂದು ಸುದ್ದಿ ಸಂಸ್ಥೆ ANI ಯ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊ ಕ್ಲಿಪ್ ನಮಗೆ ಸಿಕ್ಕಿದೆ. ಈ ವೀಡಿಯೊ ಹಾಗೂ ವೈರಲ್ ವೀಡಿಯೊ ಒಂದೇ ಆಗಿದೆ.
ಈ ಕುರಿತು
ಇಂಡಿಯನ್ ಎಕ್ಸ್‌ಪ್ರೆಸ್ ಅಕ್ಟೋಬರ್ 16, 2016 ರಂದು ಪ್ರಕಟಿಸಿದ ವರದಿಯ ಪ್ರಕಾರ, ನ್ಯೂಜೆರ್ಸಿಯಲ್ಲಿ ಹಿಂದೂ ರಿಪಬ್ಲಿಕನ್ ಒಕ್ಕೂಟವು ಆಯೋಜಿಸಿದ್ದ ನಿಧಿಸಂಗ್ರಹ ಅಭಿಯಾನದಲ್ಲಿ ಡೊನಾಲ್ಡ್ ಟ್ರಂಪ್ ಮುಖ್ಯ ಅತಿಥಿಯಾಗಿದ್ದರು. ಇಲ್ಲಿ ಅವರು ಭಾರತ ಮತ್ತು ಹಿಂದೂ ಸಮುದಾಯವನ್ನು ಹೊಗಳಿದ್ದಾರೆ. ನಾನು ಹಿಂದೂಗಳ "ದೊಡ್ಡ ಅಭಿಮಾನಿ" ಎಂದು ಹೇಳಿದ್ದರೆ. ಟ್ರಂಪ್ ಅವರ ಈ ಭಾಷಣವು 2016 ರ ಯುಎಸ್ ಚುನಾವಣೆಯ ಸಮಯದಲ್ಲಿ ಆಗಿದೆ. 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿರುವುದು ಗಮನಾರ್ಹ.
2024 ರ ಚುನಾವಣೆಯ ಫಲಿತಾಂಶಗಳ ನಂತರ ಡೊನಾಲ್ಡ್ ಟ್ರಂಪ್ ತಮ್ಮ ಮೊದಲ ಭಾಷಣದಲ್ಲಿ ಅಮೇರಿಕಾ ಜನರಿಗೆ ಮತ್ತು ಅವರ ತಂಡದ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಫ್ಲೋರಿಡಾದ ಪಾಮ್ ಬೀಚ್ ಕಂಟ್ರಿ ಕನ್ವೆನ್ಷನ್ ಸೆಂಟರ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, "ಅಮೆರಿಕ ನಮಗೆ ಅಭೂತಪೂರ್ವ ಮತ್ತು ಶಕ್ತಿಯುತ ಆದೇಶವನ್ನು ನೀಡಿದೆ" ಎಂದು ಹೇಳಿದರು.
ಈ ಭಾಷಣದಲ್ಲಿ, ಅವರ ಬೆಂಬಲಿಗರ ಬೇಡಿಕೆಯ ಮೇರೆಗೆ, ಎಲೋನ್ ಮಸ್ಕ್ ಅವರನ್ನು ಉದಯೋನ್ಮುಖ ತಾರೆ ಎಂದು ಬಣ್ಣಿಸಿದರು. ಆದರೆ, ಈ ಭಾಷಣದಲ್ಲಿ ಅವರು ಯಾವುದೇ ದೇಶದ ಬಗ್ಗೆ ಪ್ರಸ್ತಾಪಿಸಿಲ್ಲ. ಟ್ರಂಪ್ ಅವರ ಈ ಭಾಷಣವನ್ನು ಅಮೆರಿಕದ ಸುದ್ದಿ ವಾಹಿನಿ ಫಾಕ್ಸ್ ಬಿಸಿನೆಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ನೋಡಬಹುದು.
ಹೀಗಾಗಿ ಡೊನಾಲ್ಡ್ ಟ್ರಂಪ್ ಅವರು ಹಿಂದೂಗಳ ದೊಡ್ಡ ಅಭಿಮಾನಿ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಕ್ಲಿಪ್ 2024 ರ ಚುನಾವಣಾ ಫಲಿತಾಂಶಗಳು ಪ್ರಕಟವಾದ ನಂತರ ಅವರ ಮೊದಲ ಭಾಷಣದ್ದಲ್ಲ. ಇದು 2016 ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ನ್ಯೂಜೆರ್ಸಿಯಲ್ಲಿ ಹಿಂದೂ ರಿಪಬ್ಲಿಕನ್ ಒಕ್ಕೂಟ ಆಯೋಜಿಸಿದ್ದ ನಿಧಿಸಂಗ್ರಹ ಅಭಿಯಾನದಲ್ಲಿ ಹೇಳಿದ ಮಾತಾಗಿದೆ.