ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಭಾರತೀಯ ವಾಯುಪಡೆಗೆ (IAF) ಸಂಬಂಧಿಸಿದ ಹಲವಾರು ದಾರಿತಪ್ಪಿಸುವ ವೀಡಿಯೊಗಳು ಮತ್ತು ಸುಳ್ಳು ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದೀಗ ಭಾರತೀಯ ಸೇನೆ ಅಪರೇಷನ್ ಸಿಂಧೂರ್ನ ಮುಂದುವರೆದ ಭಾಗವಾಗಿ ಪಾಕಿಸ್ತಾನದ ವಿವಿಧ ಕಡೆಗಳಲ್ಲಿ ದಾಳಿ ಮಾಡಿದೆ ಎಂದು ಕಟ್ಟಡವೊಂದು ಸಂಪೂರ್ಣ ಛಿದ್ರಗೊಳ್ಳುವ ವೀಡಿಯೊ ಎಲ್ಲೆಡೆ ಹರಿದಾಡುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಆಪರೇಷನ್ ಸಿಂಧೂರ ಬಾಗ 2 ಮುಂದುವರೆದ ಭಾಗವಾಗಿ ಲಾಹೋರ್, ರಾವಲ್ಪಿಂಡಿ, ಕರಾಚಿ ಹಾಗೂ ಇನ್ನೂ ಹಲವು ನಗರಗಳ ಮೇಲೆ ದ್ರೋಣ್ ದಾಳಿ. ಭರತ್ ಮಾತ ಕಿ ಜೈ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2024 ರಲ್ಲಿ ಲೆಬನಾನ್ ಮೇಲೆ ಇಸ್ರೇಲ್ ಮಾಡಿದ ಬಾಂಬ್ ದಾಳಿಯನ್ನು ತೋರಿಸುತ್ತದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಮೂಲಕ ಸರ್ಚ್ ನಡೆಸಿದ್ದೇವೆ. ಆಗ ಟರ್ಕಿಶ್ ಏಜೆನ್ಸಿ IHA ನ್ಯೂಸ್ ನವೆಂಬರ್ 22, 2024 ರಂದು ಇದೇ ವೈರಲ್ ವೀಡಿಯೊಂದ ದೀರ್ಘ ಆವೃತ್ತಿಯೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. "ಇಸ್ರೇಲಿ ಪಡೆಗಳು ಬೈರುತ್ ಸೇರಿದಂತೆ ಲೆಬನಾನ್‌ನಲ್ಲಿ ಬಹು ಸ್ಥಳಗಳ ಮೇಲೆ ದಾಳಿ ಮಾಡುತ್ತಿವೆ" ಎಂಬ ಶೀರ್ಷಿಕೆ ಇದಕ್ಕೆ ನೀಡಲಾಗಿದೆ.
‘‘ಇಸ್ರೇಲಿ ಪಡೆಗಳು ಬುರ್ಜ್ ಶೆಮಾಲಿ ಜಿಲ್ಲೆ, ರಾಜಧಾನಿ ಬೈರುತ್‌ನ ದಕ್ಷಿಣದಲ್ಲಿರುವ ಡೀರ್ ಮಿಮಾಸ್ ಪಟ್ಟಣ, ಕೊಟ್ರಾನಿ ಪಟ್ಟಣ ಮತ್ತು ಲೆಬನಾನ್‌ನ ಡೀರ್ ಕನೌನ್ ರಾಸ್ ಅಲ್-ಐನ್ ಪಟ್ಟಣದ ಮೇಲೆ ದಾಳಿ ನಡೆಸಿದವು. ಲೆಬನಾನಿನ ಆರೋಗ್ಯ ಸಚಿವಾಲಯದ ಪ್ರಕಾರ, ಈ ದಾಳಿಯಲ್ಲಿ ಕೊಟ್ರಾನಿ ಪಟ್ಟಣದಲ್ಲಿ ಮೂವರು ಆರೋಗ್ಯ ಕಾರ್ಯಕರ್ತರು ಮತ್ತು ಡೀರ್ ಕನೌನ್ ರಾಸ್ ಅಲ್-ಐನ್ ಪಟ್ಟಣದಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರು ಸಾವನ್ನಪ್ಪಿದರು ಮತ್ತು ಹಲವಾರು ಮಂದಿ ಗಾಯಗೊಂಡರು’’ ಎಂಬ ಮಾಹಿತಿ ಇದರಲ್ಲಿದೆ.
ಗಾರ್ಡಿಯನ್ ಮತ್ತು ರಾಯಿಟರ್ಸ್ ಕೂಡ ನವೆಂಬರ್ 2024 ರಲ್ಲಿ ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡು ಸುದ್ದಿ ಪ್ರಕಟಿಸಿದೆ. ದಕ್ಷಿಣ ಬೈರುತ್‌ನ ಚಿಯಾ ನೆರೆಹೊರೆಯ ಮೇಲೆ ಇಸ್ರೇಲಿ ದಾಳಿಯನ್ನು ತೋರಿಸಲಾಗಿದೆ ಎಂದು ವರದಿ ಮಾಡಿದೆ. ಲೆಬನಾನಿನ ಆರೋಗ್ಯ ಸಚಿವಾಲಯದ ಪ್ರಕಾರ, ಈ ದಾಳಿಯಲ್ಲಿ ಹಲವಾರು ಆರೋಗ್ಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ಪಡೆಗಳು ಮತ್ತು ಹೆಜ್ಬೊಲ್ಲಾ ನಡುವೆ ಭಾರೀ ಘರ್ಷಣೆಗಳು ನಡೆದಿವೆ ಎಂದು ವಿಶ್ವಸಂಸ್ಥೆ ವರದಿ ಮಾಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ ಎಂದು ಬರೆಯಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವೈರಲ್ ವೀಡಿಯೊ ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಿರುವುದನ್ನು ತೋರಿಸುವುದಿಲ್ಲ ಬದಲಾಗಿ ಇದು 2024 ರಲ್ಲಿ ಲೆಬನಾನ್ ಮೇಲೆ ಇಸ್ರೇಲ್ ಮಾಡಿದ ಬಾಂಬ್ ದಾಳಿ ಎಂದು ನಾವು ಖಚಿತವಾಗಿ ಹೇಳುತ್ತೇವೆ.