ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ರಸ್ತೆ ಮೇಲೆ ಆನೆಯೊಂದು ಪರ್ವತದಿಂದ ಪಲ್ಟಿ ಹೊಡೆದು ಬೀಳುತ್ತಿರುವುದನ್ನು ಕಾಣಬಹುದು. ಈ ಘಟನೆ ಸುಳ್ಯ- ಸಂಪಾಜೆ ರಸ್ತೆಯನ್ನು ನಡೆದಿದೆ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಸುಳ್ಯ ಸಂಪಾಜೆ ರಸ್ತೆಯಲ್ಲಿ ಜಾರಿ ಬಿದ್ದ ಗಜರಾಜ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ನಿಜವಾಗಿ ನಡೆದ ಘಟನೆ ಅಲ್ಲ, ಬದಲಾಗಿ ಇದನ್ನು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಸುಳ್ಯ- ಸಂಪಾಜೆ ರಸ್ತೆಯಲ್ಲಿ ಆನೆ ಬಿದ್ದ ಕುರಿತು ಗೂಗಲ್ನಲ್ಲಿ ಹುಡುಕಿದ್ದೇವೆ. ಆದರೆ, ಈ ಘಟನೆಗೆ ಸಂಬಂಧಿಸಿದ ಯಾವುದೇ ವಿಶ್ವಾಸರ್ಹ ವರದಿ ನಮಗೆ ಕಂಡುಬಂದಿಲ್ಲ. ಅಲ್ಲದೆ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ನೈಜ್ಯತೆಗೆ ದೂರವಾದ ಅನೇಕ ಅಂಶಗಳು ಕಂಡುಬಂದವು.
ಉದಾಹರಣೆಗೆ, ಆನೆ ಭೀಕರವಾಗಿ ಬಿದ್ದರೂ ಅದಕ್ಕೆ ಏನೂ ಪೆಟ್ಟಾಗುವುದಿಲ್ಲ, ಮೈಯಲ್ಲಿ ಮಣ್ಣು ಮೆತ್ತಿಕೊಳ್ಳದೇ ಇರುವುದನ್ನು ಕಾಣಬಹುದು. ಆನೆ ಅಷ್ಟು ಎತ್ತರದಿಂದ ಬಿದ್ದರೂ ಏನೂ ಆಗದಂತೆ ತಕ್ಷಣವೇ ಎದ್ದೇಳುವುದು, ವೀಡಿಯೋ ಸೆರೆ ಹಿಡಿದ ಚಾಲಕ ಗಾಬರಿಯಾಗದಂತೆ ಕಾರು ನಿಲ್ಲಿಸುವುದು ಹೀಗೆ ಎಐ ವೀಡಿಯೊಕ್ಕೆ ಹೋಲುವ ಅನೇಕ ಅಂಶಗಳು ಇದರಲ್ಲಿವೆ.
ವೀಡಿಯೋದ ಪ್ರಮುಖ ಕೀಫ್ರೇಮ್ ಗಳನ್ನು ಗೂಗಲ್ ಲೆನ್ಸ್ನಲ್ಲಿ ಹುಡುಕಿದಾಗ, ಕಳೆದ ಕೆಲವು ತಿಂಗಳುಗಳಿಂದ ಇದೇ ವೀಡಿಯೊವನ್ನು ಬೇರೆ ಬೇರೆ ಹೇಳಿಕೆಯೊಂದಿಗೆ ವಿವಿಧ ಸಾಮಾಜಿಕ ಬಳಕೆದಾರರು ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ.
ಬಳಿಕ ನಾವು ಎಐ ಮತ್ತೆ ಸಾಧನ Sightengine ನಲ್ಲಿ ಪರೀಕ್ಷಿಸಿದಾಗ ಇದನ್ನು ಶೇ. 96 ರಷ್ಟು ಎಐಯಿಂದ ಸೃಷ್ಟಿಸಲಾಗಿದೆ ಎಂದು ಹೇಳಿದೆ. Hive Moderation ನಲ್ಲಿ ಪರೀಕ್ಷಿಸಿದಾಗ ಇದು ಶೇ. 99.9 ರಷ್ಟು ಎಐಯಿಂದ ರಚಿತವಾಗಿದೆ ಎಂದು ಹೇಳಿದೆ. WasitAI ಕೂಡ ಇದನ್ನು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ ಎಂದು ಹೇಳಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಸುಳ್ಯ- ಸಂಪಾಜೆ ರಸ್ತೆಯಲ್ಲಿ ಆನೆ ರಸ್ತೆ ಮೇಲೆ ಜಾರಿ ಬಿದ್ದ ಈ ವೀಡಿಯೊವನ್ನು ಎಐಯಿಂದ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.