ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವೀಡಿಯೊಗಳು ವೈರಲ್ ಆಗುತ್ತಿವೆ. ಅಂತಹ ಒಂದು ವೀಡಿಯೊದಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭವಾಗುತ್ತಿದೆ ಮತ್ತು ಒರ್ವ ಹುಡುಗಿ ಯುದ್ಧಕ್ಕೆ ಹೋಗುವ ಸೈನಿಕರಿಗೆ ಸೆಲ್ಯೂಟ್ ಮಾಡುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ. ವೀಡಿಯೊದಲ್ಲಿ ಕೆಲವು ಟ್ಯಾಂಕ್‌ಗಳು ರಸ್ತೆಯಲ್ಲಿ ಹಾದುಹೋಗುತ್ತಿರುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಏಪ್ರಿಲ್ 30, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಯುದ್ಧ ವಾತಾವರಣದಲ್ಲಿ ಸೈನ್ಯದ ಮನೋಸ್ಥೈರ್ಯವನ್ನು ಹೆಚ್ಚಿಸುವುದು ಪ್ರತಿಯೊಬ್ಬ ನಿಜವಾದ ಭಾರತೀಯನ ಆದ್ಯ ಕರ್ತವ್ಯ.. ಈ ಬೈಕ ಸಹೋದರಿಗೆ ನನ್ನ ಸೆಲ್ಯೂಟ್.! ಜೈ ಶ್ರೀ ರಾಮ್’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೂ ಮುನ್ನವೇ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿದೆ.
ಈ ವೀಡಿಯೊದ ಸತ್ಯವನ್ನು ತಿಳಿಯಲು, ನಾವು ಗೂಗಲ್ ಲೆನ್ಸ್ ಸಹಾಯದಿಂದ ವೀಡಿಯೊದ ಪ್ರಮುಖ ಫ್ರೇಮ್‌ಗಳನ್ನು ಹುಡುಕಿದೆವು. ನಮ್ಮ ತನಿಖೆಯ ಸಮಯದಲ್ಲಿ ಇದೇ ವೀಡಿಯೊವನ್ನು ಇತರೆ ಭಾಷೆಗಳಲ್ಲಿ ಕೂಡ ಪಹಲ್ಗಾಮ್ ದಾಳಿಗೆ ಲಿಂಕ್ ಮಾಡಿ ಹಂಚಿಕೊಂಡಿರುವುದು ಸಿಕ್ಕಿದೆ. ಅದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಇದೇವೇಳೆ ಮೂಲ ವೀಡಿಯೊ ಕೂಡ ನಮಗೆ ಸಿಕ್ಕಿದೆ. ಬೈಕರ್ ಗರ್ಲ್ ಕಾಂಚನ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವರಿಜಿನಲ್ ವೀಡಿಯೊವನ್ನು ಜನವರಿ 15, 2025 ರಂದು ಅಪ್‌ಲೋಡ್ ಮಾಡಲಾಗಿದೆ.
ಈ ವೀಡಿಯೊ ಜೊತೆಗೆ ಅವರು ‘‘ಇಂದು ಸೇನಾ ದಿನ- ಈ ಸಂದರ್ಭದಲ್ಲಿ, ಭಾರತೀಯ ಸೇನೆಯ ಸೈನಿಕರು, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ನಿಮ್ಮ ತ್ಯಾಗ ಮತ್ತು ಶೌರ್ಯ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ’’ ಎಂದು ಬರೆದುಕೊಂಡಿದ್ದಾರೆ.
ಹೀಗಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಶುರುವಾಗುತ್ತಿದೆ, ಮಹಿಳಾ ಬೈಕರ್ ಒಬ್ಬರು ಯುದ್ಧಕ್ಕೆ ಹೋಗುವ ಸೈನಿಕರಿಗೆ ಸೆಲ್ಯೂಟ್ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ವಿಡಿಯೋ ಹಳೆಯದಾಗಿದ್ದು, ಸೇನಾ ದಿನದ ಸಂದರ್ಭದಲ್ಲಿ ಮಹಿಳಾ ಬೈಕರ್ ಒಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದರು.