ಇರಾನ್‌ನ ಮಿಲಿಟರಿ ಮತ್ತು ಪರಮಾಣು ನೆಲೆಗಳ ಮೇಲೆ ಇಸ್ರೇಲ್ ದಾಳಿ ಮಾಡಿದ ನಂತರ ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಪ್ರತೀಕಾರವಾಗಿ, ಇರಾನ್ ಇಸ್ರೇಲ್ ಮೇಲೆ ಹಲವಾರು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿತು. ಇದರ ಮಧ್ಯೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದ್ದು, ಇದನ್ನು ಕೆಲವರು ಇರಾನ್ ಮೇಲೆ ಇಸ್ರೇಲ್ ದಾಳಿ ಎಂದು ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ಜೋರಾದ ಸ್ಫೋಟದ ಶಬ್ದ ಕೇಳಿಬರುತ್ತಿದೆ. ಸ್ಫೋಟದ ನಂತರ, ಆಕಾಶದಲ್ಲಿ ದೊಡ್ಡ ಬೆಂಕಿಯ ಉಂಡೆ ಮತ್ತು ಕಪ್ಪು ಹೊಗೆಯ ಮೋಡ ಕಾಣಿಸುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇರಾನ್‌ನ 8 ನಗರಗಳ ಮೇಲೆ ಇಸ್ರೇಲ್‌ನ ಬೃಹತ್ ದಾಳಿ. ಇರಾನ್‌ನ ನೂರಾರು ಕ್ಷಿಪಣಿಗಳು ನಾಶವಾದವು, ಪರಮಾಣು ಸ್ಥಾಪನೆಗಳ ಮೇಲೂ ದಾಳಿ ಮಾಡಲಾಗಿದೆ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಮೆಕ್ಸಿಕೋದಲ್ಲಿ ಡೀಸಲ್ ಪ್ಲಾಂಟ್ ನಲ್ಲಿ ಸಂಭವಿಸಿದ ಬೆಂಕಿ ಅನಾಹುತದ ವೀಡಿಯೋ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ಸಂದರ್ಭ ಮೇ 2025 ರ ಅನೇಕ ಪೋಸ್ಟ್‌ಗಳಲ್ಲಿ ನಾವು ಇದೇ ವೈರಲ್ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಹೀಗಾಗಿ ಈ ವೀಡಿಯೊ ಹಳೆಯದು ಮತ್ತು ಇಸ್ರೇಲ್ ಮತ್ತು ಇರಾನ್ ನಡುವಿನ ಪ್ರಸ್ತುತ ಸಂಘರ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂಬುದು ತಿಳಿದುಬಂತು. ಈ ಪೋಸ್ಟ್‌ಗಳಲ್ಲಿ, ಈ ವೀಡಿಯೊವನ್ನು ಮೆಕ್ಸಿಕೋದ ಡೀಸೆಲ್ ಸ್ಥಾವರದಲ್ಲಿ ಬೆಂಕಿ ಎಂದು ವಿವರಿಸಲಾಗಿದೆ.
ಈ ಮಾಹಿತಿಯ ಆಧಾರದ ಮೇಲೆ ಹುಡುಕಿದಾಗ, ಈ ಘಟನೆಗೆ ಸಂಬಂಧಿಸಿದ ಅನೇಕ ಸುದ್ದಿ ವರದಿಗಳು ನಮಗೆ ಸಿಕ್ಕವು. ಸುದ್ದಿಯ ಪ್ರಕಾರ, ಮೇ 21 ರಂದು, ಮೆಕ್ಸಿಕೋದ ಕ್ಯಾಡೆರೈಟಾದಲ್ಲಿರುವ ಮಾರ್ವಿಕ್ ಡೀಸೆಲ್ ಸ್ಥಾವರದಲ್ಲಿ ಭಾರಿ ಸ್ಫೋಟ ಸಂಭವಿಸಿತು. ಅದರಲ್ಲಿ 13 ದೊಡ್ಡ ಇಂಧನ ಟ್ಯಾಂಕ್‌ಗಳು ಸುಟ್ಟುಹೋದವು.
ಬಿಎನ್‌ಒ ನ್ಯೂಸ್ ವರದಿಯ ಪ್ರಕಾರ, ಮಾರ್ವಿಕ್ ಡೀಸೆಲ್ ಸ್ಥಾವರದಲ್ಲಿ ಸಂಭವಿಸಿದ ಈ ಬೆಂಕಿ ಅವಘಡದಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಇದಲ್ಲದೆ, ಇತರ 11 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಸ್ಫೋಟದಲ್ಲಿ 13 ದಾಸ್ತಾನು ವ್ಯವಸ್ಥೆ ಸುಟ್ಟುಹೋಗಿವೆ. ದೊಡ್ಡ ಪ್ರಮಾಣದ ಸುಡುವ ವಸ್ತುಗಳು ಇದ್ದ ಕಾರಣ, ಬೆಂಕಿ ವೇಗವಾಗಿ ಹರಡಿತು ಎಂಬ ಮಾಹಿತಿ ಇದರಲ್ಲಿದೆ.
ಮೇ 22 ರಂದು ಕ್ಯಾಲಿಬರ್ ಪ್ರಕಟಿಸಿದ ವರದಿಯಲ್ಲಿ, ಉತ್ತರ ಮೆಕ್ಸಿಕೋದ ಡೀಸೆಲ್ ಸಂಸ್ಕರಣಾ ಘಟಕದಲ್ಲಿ ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದೆ. ಮಧ್ಯಾಹ್ನದ ವೇಳೆ ಬೆಂಕಿ ಹೊತ್ತಿಕೊಂಡು, ಸ್ಥಳದಲ್ಲಿ ಸಂಗ್ರಹಿಸಲಾದ ಹೆಚ್ಚು ಸುಡುವ ವಸ್ತುಗಳಿಂದ ಬೆಂಕಿ ಬೇಗನೆ ಉಲ್ಬಣಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಮೆಕ್ಸಿಕೋದ ಡೀಸೆಲ್ ಸ್ಥಾವರದಲ್ಲಿ ಸಂಭವಿಸಿದ ಬೆಂಕಿಯ ಹಳೆಯ ವೀಡಿಯೊವನ್ನು ಇಸ್ರೇಲ್ ಮತ್ತು ಇರಾನ್ ನಡುವಿನ ಪ್ರಸ್ತುತ ಸಂಘರ್ಷ ಎಂದು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.