ಇರಾನ್‌ನಲ್ಲಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ಇರಾನ್‌ನಲ್ಲಿ ಸರ್ಕಾರ ವಿರೋಧಿ ರ್ಯಾಲಿ ಎಂದು ಹೇಳುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬೀದಿಗಿಳಿದು ತಮ್ಮ ಮೊಬೈಲ್ ಫೋನ್ ಟಾರ್ಚ್‌ಗಳನ್ನು ಬೆಳಗಿಸುವ ಮೂಲಕ ಪ್ರದರ್ಶನ ನೀಡುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇರಾನ್‌ನ 18 ಪ್ರಮುಖ ನಗರಗಳ ಸುಮಾರು 1.7 ಮಿಲಿಯನ್ ಸಾಮಾನ್ಯ ನಾಗರಿಕರು ಬೀದಿಗಿಳಿದಿದ್ದಾರೆ..!!’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ದಾರಿತಪ್ಪಿಸುವ ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ವೀಡಿಯೊ ಆಗಿದೆ.
ವೈರಲ್ ಆಗಿರುವ ಈ ವೀಡಿಯೊದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಮೊಬೈಲ್ ಲೈಟ್ಗಳೊಂದಿಗೆ ಪ್ರದರ್ಶನ ನೀಡುತ್ತಿರುವುದನ್ನು ಕಾಣಬಹುದು. ಇರಾನ್‌ನಲ್ಲಿ ಲಭ್ಯವಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳ ವೀಡಿಯೊಗಳಲ್ಲಿ ಅಂತಹ ಯಾವುದೇ ವೀಡಿಯೊ ನಮಗೆ ಕಂಡುಬಂದಿಲ್ಲ.
ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ ಇದೇ ವೀಡಿಯೊವನ್ನು ಜನವರಿ 11 ರಂದು elnaz555 ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವುದು ನಾವು ಕಂಡುಕೊಂಡಿದ್ದೇವೆ. ಟೆಹ್ರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದ ಪ್ರೇರಿತರಾಗಿ ಬಳಕೆದಾರರು ಈ ವೀಡಿಯೊವನ್ನು AI ಬಳಸಿ ರಚಿಸಿದ್ದಾರೆ ಎಂದು ವೀಡಿಯೊ ಹೇಳುತ್ತದೆ.
elnaz555 ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, "ಸರ್ಕಾರವು ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರನ್ನು ಮರೆಮಾಡಲು ಬೀದಿ ದೀಪಗಳನ್ನು ಆಫ್ ಮಾಡಿತು, ಆದರೆ ಎಲ್ಲರೂ ತಾವು ಅಲ್ಲಿದ್ದೇವೆ ಎಂದು ತೋರಿಸಲು ತಮ್ಮ ಫೋನ್ ದೀಪಗಳನ್ನು ಆನ್ ಮಾಡಿದರು. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಇಂದು ರಾತ್ರಿ (ಜನವರಿ 10, 2026) ನಡೆದ ಪ್ರತಿಭಟನೆಗಳಿಂದ ಪ್ರೇರಿತರಾಗಿ ನಾನು ಈ ವಿಡಿಯೋವನ್ನು AI ಬಳಸಿ ರಚಿಸಿದ್ದೇನೆ" ಎಂದು ಬರೆದಿದ್ದಾರೆ.
ನಮ್ಮ ತನಿಖೆಯು ಈ ವೀಡಿಯೊ ನಿಜವಲ್ಲ, ಬದಲಾಗಿ AI-ರಚಿಸಿದ್ದು ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಹೆಚ್ಚಿನ ದೃಢೀಕರಣಕ್ಕಾಗಿ, ನಾವು ಅದನ್ನು AI ಪತ್ತೆ ಪರಿಕರಗಳೊಂದಿಗೆ ಪರೀಕ್ಷಿಸಿದ್ದೇವೆ. Hive Moderation ನಲ್ಲಿ ಪರೀಕ್ಷಿಸಿದಾಗ ಇದನ್ನು ಶೇ. 99.7 ರಷ್ಟು ಎಐಯಿಂದ ಸೃಷ್ಟಿಸಲಾಗಿದೆ ಎಂದು ಹೇಳಿದೆ. Sightengine ನಲ್ಲಿ ಪರೀಕ್ಷಿಸಿದಾಗ ಇದು ಶೇ. 95 ರಷ್ಟು ಎಐಯಿಂದ ರಚಿತವಾಗಿದೆ ಎಂದು ಹೇಳಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವೀಡಿಯೊ ಇರಾನ್‌ನಲ್ಲಿನ ಪ್ರತಿಭಟನೆಗಳದ್ದಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಈ ವೀಡಿಯೊವನ್ನು AI ಬಳಸಿ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.