ಹಗ್ಗಗಳನ್ನು ಬಳಸಿ ಸಾಹಸ ಚಟುವಟಿಕೆ ನಡೆಸುತ್ತಿರುವ ಹುಡುಗಿಯೊಬ್ಬಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬಂಗೀ ಜಂಪಿಂಗ್ ಮಾಡುವಾಗ ಹುಡುಗಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಂಗೀ ಜಂಪಿಂಗ್ ವೇಳೆ ಪ್ರಾಣ ಬಿಟ್ಟ ಮಹಿಳೆ’’ ಎಂದು ಬರೆದುಕೊಂಡಿದ್ದಾರೆ. ಇನ್ನೋರ್ವ ಬಳಕೆದಾರ, ‘‘ರಾಜಸ್ಥಾನ: ಬಂಗಿ ಜಂಪಿಂಗ್ ಮಾಡುವಾಗ ಮುರಿದ ಯುವತಿಯ ಕುತ್ತಿಗೆ. ಈ ಘಟನೆ ಮೌಂಟ್ ಅಬುವಿನಲ್ಲಿ ನಡೆದಿದೆ. ಸುರಕ್ಷತೆ ಎಷ್ಟು ಮುಖ್ಯ ಎಂಬುದನ್ನು ಈ ವಿಡಿಯೋ ಸಾಬೀತುಪಡಿಸಿದೆ.’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೋದಲ್ಲಿರುವ ಹುಡುಗಿ ಫಿಜಾ ಖಾನ್, ನಾನು ಸಾವನ್ನಪ್ಪಿಲ್ಲ ಅಥವಾ ಕುತ್ತಿಗೆ ಮುರಿದಿಲ್ಲ ಎಂದು ಸ್ವತಃ ಅವರೇ ಇದನ್ನು ನ್ಯೂಸ್ ಮೀಟರ್ಗೆ ತಿಳಿಸಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂಡ ಹುಡುಕಿದ್ದೇವೆ. ಈ ಸಂದರ್ಭ ಇತರೆ ಭಾಷೆಗಳಲ್ಲೂ ಇದೇ ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿರುವುದು ಕಂಡುಬಂತು. ಈ ಪೈಕಿ ಒಂದು ಪೋಸ್ಟ್ಗೆ ಪ್ರತಿಕ್ರಿಯಿಸಿದ ಅನೇಕ ಜನರು ಆ ಹುಡುಗಿ ಜೀವಂತವಾಗಿದ್ದಾಳೆ ಮತ್ತು ಅವಳ ಹೆಸರು ಫಿಜಾ ಎಂದು ಬರೆದಿರುವುದನ್ನು ನಾವು ಗಮನಿಸಿದ್ದೇವೆ.
ಈ ಮಾಹಿತಿಯನ್ನು ಬಳಸಿಕೊಂಡು ಹುಡುಕಿದಾಗ, ಫಿಜಾ ಖಾನ್ ಎಂಬ ಹುಡುಗಿಯ ಇನ್‌ಸ್ಟಾಗ್ರಾಮ್ಖಾತೆಯಲ್ಲಿ ಒಂದು ವೀಡಿಯೊ ಕಂಡುಬಂದಿದೆ, ಅವರು ಈ ಘಟನೆಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಅದರಲ್ಲಿ, ಫಿಜಾ ತನ್ನ ಕುತ್ತಿಗೆ ಅಥವಾ ಬೆನ್ನು ಮುರಿದಿಲ್ಲ ಮತ್ತು ತಾನು ಸಂಪೂರ್ಣವಾಗಿ ಸುರಕ್ಷಿತವಾಗಿದ್ದೇನೆ ಎಂದು ಹೇಳುತ್ತಾರೆ. ತನ್ನ ಬಗ್ಗೆ ಸುಳ್ಳು ಸುದ್ದಿ ಹರಡುವ ಖಾತೆಗಳ ವಿರುದ್ಧ ವರದಿ ಮಾಡುವುದಾಗಿಯೂ ಅವರು ಹೇಳುತ್ತಾರೆ.
ಬಳಿಕ ನಾವು ಫಿಜಾ ಅವರನ್ನು ಸಹ ಸಂಪರ್ಕಿಸಿದೆವು. ಫಿಜಾ ಅವರು ಉದಯಪುರದ ವೆಡ್ಡಿಂಗ್ ಫೋಟೋಗ್ರಾಫರ್ ಮತ್ತು ತಾನು ಸ್ನೇಹಿತರೊಂದಿಗೆ ಮೌಂಟ್ ಅಬುವಿಗೆ ಹೋಗಿದ್ದೆ ಎಂದು ನ್ಯೂಸ್ ಮೀಟರ್ಗೆ ತಿಳಿಸಿದರು. "ಈ ಚಟುವಟಿಕೆ ಸಮಯದಲ್ಲಿ ನಾನು ಸ್ವಲ್ಪ ಹೆದರುತ್ತಿದ್ದೆ ಮತ್ತು ನನ್ನ ಸ್ನೇಹಿತರಿಗೆ ತೋರಿಸಲು ಹೆದರುವಂತೆ ನಟಿಸುತ್ತಿದ್ದೆ. ಈ ಸಮಯದಲ್ಲಿ ನನಗೆ ತಲೆತಿರುಗುವಿಕೆ ಕೂಡ ಆಗಲಿಲ್ಲ, ಜನರು ನಾನು ಸತ್ತಿದ್ದೇನೆ ಎಂಬ ಸುದ್ದಿಯನ್ನು ಹರಡುತ್ತಿದ್ದಾರೆ. ನಾನು ಸುರಕ್ಷಿತವಾಗಿದ್ದೇನೆ" ಎಂದು ಅವರು ಹೇಳಿದ್ದಾರೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಮೌಂಟ್ ಅಬುವಿನಲ್ಲಿ ನಡೆದ ಸಾಹಸ ಚಟುವಟಿಕೆಯ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಹುಡುಗಿ ಸಾವನ್ನಪ್ಪಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.