ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಕಾರ್ಯಕರ್ತರು ಕೇರಳದ ಕಾಸರಗೋಡು ಕಚೇರಿಯ ಮುಂದೆ ಹಸಿರು ಜೆರ್ಸಿ ಧರಿಸಿ ಸಂಭ್ರಮಾಚರಣೆ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಕಚೇರಿಯ ಉದ್ಘಾಟನಾ ಸಮಾರಂಭದ ವೇಳೆ ಸಂಭ್ರಮಿಸುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಇವರು ಪಾಕಿಸ್ತಾನಿ ಕ್ರಿಕೆಟ್ ತಂಡದ ಜೆರ್ಸಿ ಧರಿಸಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಭಜರಂಗದಳ ಕುಣಿಗಲ್ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ, “ಪಾಕಿಸ್ತಾನ ಕ್ರಿಕೆಟ್ ಜೆರ್ಸಿ ಧರಿಸಿ ಕಾಸರಗೋಡು ಮುಸ್ಲಿಂ ಲೀಗ್ ಕಛೇರಿ ಉದ್ಘಾಟನೆ..!!!," ಎಂದು ಶೀರ್ಷಿಕೆಯಲ್ಲಿ ಬರೆದು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Fact Check:
ಆದರೆ, ಕಾಸರಗೋಡಿನ ಮುಸ್ಲಿಂ ಲೀಗ್ ಕಚೇರಿ ಎದುರು ಕಾರ್ಯಕರ್ತರು ಪಾಕಿಸ್ತಾನದ ಕ್ರಿಕೆಟ್ ತಂಡದ ಜೆರ್ಸಿ ಧರಿಸಿ ಸಂಭ್ರಮಿಸುತ್ತಿದ್ದಾರೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಸುಳ್ಳಾಗಿದೆ. ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ, ವೀಡಿಯೊದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಆರಂಗಡಿಯ ಜೆರ್ಸಿ ಧರಿಸಿರುವುದು ನಮಗೆ ಕಂಡು ಬಂದಿದೆ.
ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಜೆರ್ಸಿಗಳ ಮೇಲೆ ಆರಂಗಡಿ ಎಂದು ಪ್ರಿಂಟ್ ಆಗಿರುವುದನ್ನು ನೋಡಬಹುದು. ಆರಂಗಡಿ ಕೇರಳದ ಕಾಸರಗೋಡು ಜಿಲ್ಲೆಯ ಒಂದು ಗ್ರಾಮವಾಗಿದೆ. ನಾವು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಆರಂಗಡಿಯ ಸಾಮಾಜಿಕ ಮಾಧ್ಯಮ ಖಾತೆಯನ್ನು ಕೂಡ ಪರಿಶೀಲಿಸಿದೆವು. ಇವರ ಫೇಸ್ಬುಕ್ ಖಾತೆಯಲ್ಲಿ ಕೂಡ ಅದೇ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದನ್ನು ಜೂನ್ 29, 2024 ರಂದು ಅಪ್ಲೋಡ್ ಮಾಡಲಾಗಿದೆ.
ನಾವು ವಿಡಿಯೋವನ್ನು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ಜೆರ್ಸಿಯ ಮುಂಭಾಗದಲ್ಲಿ ಆರಂಗಡಿ ಎಂದು ಬರೆದಿರುವುದು ಮತ್ತು ಎಡ ತೋಳಿನ ಮೇಲೆ IUML ಎಂದು ಪ್ರಿಂಟ್ ಆಗಿರುವುದು ಕಂಡುಬಂದಿದೆ. ಅಲ್ಲದೆ ಈ ಗುಂಪಿನಲ್ಲಿರುವ ಎಲ್ಲರೂ ಇದೇ ಜೆರ್ಸಿಯನ್ನು ಧರಿಸಿದ್ದಾರೆ. ಜೊತೆಗೆ, ನಾವು ಜೆರ್ಸಿಯ ಮೇಲೆ ಅರ್ಧಚಂದ್ರಾಕೃತಿಯನ್ನು ಸಹ ಕಾಣಬಹುದು.
ನಾವು ಇವರು ತೊಟ್ಟಿರುವ ಜೆರ್ಸಿಯನ್ನು ಪಾಕಿಸ್ತಾನದ ಜೆರ್ಸಿಯೊಂದಿಗೆ ಹೋಲಿಕೆ ಮಾಡಿದೆವು. ಇದರಲ್ಲಿ ಹಸಿರು ಬಣ್ಣವನ್ನು ಹೊರತುಪಡಿಸಿ ಇತರೆ ಯಾವುದೇ ಹೋಲಿಕೆಯನ್ನು ಕಾಣಲಿಲ್ಲ. ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿ ಇದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಪಾಕಿಸ್ತಾನದ ಜೆರ್ಸಿಯ ಚಿತ್ರವನ್ನು ನೀವು ನೋಡಿದರೆ, ಬಲಭಾಗದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಕ್ಷತ್ರ ಚಿಹ್ನೆಯ ಜೊತೆಗೆ ಹಸಿರು ಬಣ್ಣದ ವಿವಿಧ ಛಾಯೆಗಳಿವೆ. ಪಾಕಿಸ್ತಾನವನ್ನು ಇಂಗ್ಲಿಷ್‌ನಲ್ಲಿ ಕೆಳಭಾಗದಲ್ಲಿ ಬರೆಯಲಾಗಿದೆ.
ಹೀಗಾಗಿ, ವೈರಲ್ ವೀಡಿಯೊದಲ್ಲಿರುವ ಜನರು IUML ಜೆರ್ಸಿಯನ್ನು ಧರಿಸಿದ್ದೆ ಹೊರತು ಪಾಕಿಸ್ತಾನಿ ಕ್ರಿಕೆಟ್ ಜೆರ್ಸಿಯಲ್ಲ ಎಂದು ನಾವು ಕಂಡುಹಿಡಿದಿದ್ದೇವೆ.