Fact Check: ಉ. ಪ್ರದೇಶದಲ್ಲಿ ಹಿಂದೂ ಹುಡುಗಿಗೆ ಕಿರುಕುಳ ನೀಡಿದ ವೀಡಿಯೊ ನಕಲಿ ಕೋಮು ಹೇಳಿಕೆಯೊಂದಿಗೆ ವೈರಲ್
ಉತ್ತರ ಪ್ರದೇಶದಲ್ಲಿ ಹಿಂದೂ ಹುಡುಗಿಗೆ ಮುಸ್ಲಿಂ ಹುಡುಗನಿಂದ ಕಿರುಕುಳ ಎಂಬ ಹೇಳಿಕೆಯೊಂದಿಗೆ ಅನೇಕರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.
By Vinay Bhat
Claim:ಹಿಂದೂ ಹುಡುಗಿಯ ಹಿಂದೆ ಬಿದ್ದಿದ್ದ ಮುಸ್ಲಿಂ ಸಮುದಾಯದ ಹುಡುಗನ ಪರಿಸ್ಥಿತಿ ನೋಡಿ.
Fact:ಈ ವೀಡಿಯೊದಲ್ಲಿ ಕಾಣಿಸುವ ಯುವಕನ ಹೆಸರು ರೋಹಿತ್ ಆಗಿದ್ದು, ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ಕೊಲಾಜ್ ರೂಪದಲ್ಲಿ ವೈರಲ್ ಆಗುತ್ತಿದೆ. ಮೊದಲ ವೀಡಿಯೊದಲ್ಲಿ ಓರ್ವ ವ್ಯಕ್ತಿ ಯುವತಿ ಜೊತೆ ಕೈ ಸನ್ನೆ ಮಾಡಿಕೊಂಡು ಜೋರಾಗಿ ಮಾತಾಡುವುದನ್ನು ಕಾಣಬಹುದು. ಆಗ ಯುವತಿ ಅಲ್ಲಿಂದ ಓಡಿ ಹೋಗುತ್ತಾಳೆ. ಮತ್ತೊಂದು ವೀಡಿಯೊದಲ್ಲಿ ಅದೇ ವ್ಯಕ್ತಿ ಪೊಲೀಸ್ ಜೀಪಿನಿಂದ ಇಳಿದು ಪೊಲೀಸರ ಸಹಾಯದಿಂದ ಕುಂಟುತ್ತಾ ನಡೆಯುತ್ತಿರುವುದು ಕಾಣಬಹುದು. ಉತ್ತರ ಪ್ರದೇಶದಲ್ಲಿ ಹಿಂದೂ ಹುಡುಗಿಗೆ ಮುಸ್ಲಿಂ ಹುಡುಗನಿಂದ ಕಿರುಕುಳ ಎಂಬ ಹೇಳಿಕೆಯೊಂದಿಗೆ ಅನೇಕರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಫೆಬ್ರವರಿ 6, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಹಿಂದೂ ಹುಡುಗಿಯ ಹಿಂದೆ ಬಿದ್ದಿದ್ದ ಮುಸ್ಲಿಂ ಸಮುದಾಯದ ಹುಡುಗನ ಪರಿಸ್ಥಿತಿ ನೋಡಿ. ಲೋ ಅಲ್ಲಿರೋದು ಯೋಗಿಜೀ ಕಣ್ರೋ’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಬಂದಿದೆ. ಈ ಪ್ರಕರಣದಲ್ಲಿ ಯಾವುದೇ ಕೋಮುಕೋನವಿಲ್ಲ. ಈ ವೀಡಿಯೊದಲ್ಲಿ ಕಾಣಿಸುವ ಯುವಕ ಹಾಗೂ ಯುವತಿ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಫೆಬ್ರವರಿ 6, 2025 ರಂದು ಉತ್ತರ ಪ್ರದೇಶದ ಸ್ಥಳೀಯ ಮಾಧ್ಯಮ ರಾಯಲ್ ಬುಲೆಟಿನ್ ವೆಬ್‌ಸೈಟ್ ಇದೇ ವೈರಲ್ ವೀಡಿಯೊವನ್ನು ಉತ್ತಮ ಕ್ವಾಲಿಟಿಯಲ್ಲಿ ಹಂಚಿಕೊಂಡಿರುವುದು ಕಂಡುಬಂತು. ಇದಕ್ಕೆ ‘‘ಮುಜಫರ್ ನಗರದ ನಯಿ ಮಂಡಿಯಲ್ಲಿ, ಯುವಕನೊಬ್ಬ ಸಾರ್ವಜನಿಕ ಪ್ರದೇಶದಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆ ಯುವಕನಿಗೆ ಚಿಕಿತ್ಸೆ ನೀಡಿದರು!’’ ಎಂಬ ಶೀರ್ಷಿಕೆ ನೀಡಲಾಗಿದೆ.
ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಮುಜಫರ್ ನಗರದ ನಯಿ ಮಂಡಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಸಾರ್ವಜನಿಕವಾಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ದುಷ್ಕರ್ಮಿಯೊಬ್ಬ ಬಾಲಕಿಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಿದ್ದಾನೆ ಮತ್ತು ಬಾಲಕಿ ಅಲ್ಲಿಂದ ಓಡಿಹೋಗುತ್ತಿರುವುದು ಕಂಡುಬಂದಿದೆ. ವೀಡಿಯೊ ವೈರಲ್ ಆದ ನಂತರ, ನಯಿ ಮಂಡಿ ಪೊಲೀಸ್ ಠಾಣೆ ತಕ್ಷಣ ಜಾಗೃತಗೊಂಡು ಆರೋಪಿಯನ್ನು ಬಂಧಿಸಿದೆ. ವಿಚಾರಣೆಯ ಸಮಯದಲ್ಲಿ, ಆರೋಪಿಯು ತನ್ನ ಹೆಸರನ್ನು ವಿಲಾಯತ್ ನಗರ ಪೊಲೀಸ್ ಠಾಣೆ ಭೋಪಾ ನಿವಾಸಿ ಸಮಯ್ ಸಿಂಗ್ ಅವರ ಮಗ ರೋಹಿತ್ ಎಂದು ಹೇಳಿಕೊಂಡಿದ್ದಾನೆ’’ ಎಂದು ಬರೆಯಲಾಗಿದೆ.
ತನಿಖೆಯ ಸಮಯದಲ್ಲಿ, ಮುಜಫರ್ ನಗರದ ಪೊಲೀಸರು ಫೆಬ್ರವರಿ 6, 2025 ರಂದು ಮಾಡಿದ ಎಕ್ಸ್ ಪೋಸ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ. ಈ ಪೋಸ್ಟ್‌ನಲ್ಲಿ ನ್ಯೂ ಮಂಡಿ ಸಿಒ ರೂಪಾಲಿ ರಾವ್ ಅವರ ಹೇಳಿಕೆ ಇದೆ. ‘‘ವಿಡಿಯೋದಲ್ಲಿ ಕಾಣುವ ಹುಡುಗಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಾಳೆ ಮತ್ತು ಅವಳು ಊಟ ಮಾಡಲು ಹೊರಗೆ ಹೋದಾಗ, ರೋಹಿತ್ ಅವಳನ್ನು ದಾರಿಯಲ್ಲಿ ಅಡ್ಡಗಟ್ಟಿ ಬಲವಂತವಾಗಿ ಮಾತನಾಡಲು ಪ್ರಯತ್ನಿಸಿದ್ದಾನೆ. ಹೇಗೋ ಹುಡುಗಿ ಅವನಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾಳೆ. ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಇಡೀ ಘಟನೆಯ ವೀಡಿಯೊ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ರೋಹಿತ್‌ನನ್ನು ಬಂಧಿಸಲಾಗಿದೆ’’ ಎಂದು ಅವರು ಹೇಳಿದ್ದಾರೆ.
ಅಂತೆಯೆ ಫೆಬ್ರವರಿ 6, 2025 ರಂದು ಆಜ್ ತಕ್ ವೆಬ್‌ಸೈಟ್‌ನಲ್ಲಿ ಕೂಡ ಇದಕ್ಕೆ ಸಂಬಂಧಿಸಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಈ ವರದಿಯಲ್ಲಿ ವೈರಲ್ ಆದ ವೀಡಿಯೊ ಕೂಡ ಇದೆ. ‘‘ನಯಿ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಚೌಡಿ ಗಲಿಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ರೋಹಿತ್ ಎಂಬ ಯುವಕ ಸಾರ್ವಜನಿಕವಾಗಿ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವಿಷಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಾಗ, ಪೊಲೀಸರು ಕೂಡ ಕಾರ್ಯಪ್ರವೃತ್ತರಾಗಿ, ಆರೋಪಿ ಯುವಕ ರೋಹಿತ್‌ನನ್ನು ತಕ್ಷಣವೇ ಬಂಧಿಸಿ, ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ’’ ಎಂದು ಬರೆಯಲಾಗಿದೆ.
ತನಿಖೆಯ ಸಮಯದಲ್ಲಿ ನಾವು ನಯಿ ಮಂಡಿ ಪೊಲೀಸ್ ಠಾಣೆಗೆ ಕರೆ ಮಾಡಿ ಈ ಪ್ರಕರಣದ ಕುರಿತು ವಿಚಾರಿಸಿದ್ದೇವೆ. ಅವರು ಈ ಪ್ರಕರಣದಲ್ಲಿ ಯಾವುದೇ ಕೋಮು ಕೋನವಿಲ್ಲ. ಆರೋಪಿ ರೋಹಿತ್ನ ತಂದೆಯ ಹೆಸರು ಸಮಯ್ ಸಿಂಗ್, ಈ ಪ್ರಕರಣದಲ್ಲಿ ಭಾಗಿಯಾದರವರೆಲ್ಲ ಹಿಂದೂ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ್ದಾರೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಉತ್ತರ ಪ್ರದೇಶದಲ್ಲಿ ಹಿಂದೂ ಹುಡುಗಿಗೆ ಮುಸ್ಲಿಂ ಹುಡುಗ ಕಿರುಕುಳ ನೀಡಿದ್ದಾನೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು, ಈ ಘಟನೆಯ ಆರೋಪಿಯ ಹೆಸರು ರೋಹಿತ್ ಮತ್ತು ಆತ ಮುಸ್ಲಿಂ ಅಲ್ಲ. ಸುಳ್ಳು ಕೋಮುಕೋನದೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.