Fact Check: ಬಾಂಗ್ಲಾದೇಶದ ಕುಲಿಯಾಧರ್ನಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ? ಇಲ್ಲ, ಇದು ಮುಸ್ಲಿಮರ ಮನೆ
ವೀಡಿಯೊ ಹಂಚಿಕೊಳ್ಳುವ ಅನೇಕರು, ಬಾಂಗ್ಲಾದೇಶದ ಕುಲಿಯಾಧರ್ನಲ್ಲಿ ಮುಸ್ಲಿಮರು ಹಿಂದೂ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.
By Vinay Bhat Published on 10 Jan 2025 12:36 PM ISTClaim: ಬಾಂಗ್ಲಾದೇಶದ ಕುಲಿಯಾಧರ್ ಗ್ರಾಮದಲ್ಲಿ ಮುಸ್ಲಿಮರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.
Fact: ಇದು ಮುಸ್ಲಿಮರ ಮನೆ. ಬಿಎನ್‌ಪಿಯ ಬಣಗಳ ನಡುವಣ ವಿವಾದದಲ್ಲಿ ಎರಡು ಮುಸ್ಲಿಂ ಗುಂಪುಗಳ ನಡುವಿನ ಸಂಘರ್ಷದಲ್ಲಿ ಈ ಘಟನೆ ನಡೆದಿದೆ.
ಬಾಂಗ್ಲಾದೇಶದಿಂದ ಮಾಜಿ ಪ್ರಧಾನಿ ಶೇಖ್ ಹಸೀನಾ ಪಲಾಯನ ಮಾಡಿದ ನಂತರ, ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಹಲವಾರು ದಾಳಿಗಳು ನಡೆಯುತ್ತಿವೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಇದೀಗ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ಹಲವಾರು ಮನೆಗಳು ಬೆಂಕಿಗೆ ಆಹುತಿಯಾಗಿತ್ತಿರುವುದನ್ನು ಕಾಣಬಹುದು. ವೀಡಿಯೊವನ್ನು ಹಂಚಿಕೊಳ್ಳುವ ಅನೇಕರು, ಬಾಂಗ್ಲಾದೇಶದ ಕುಲಿಯಾಧರ್ನಲ್ಲಿ ಮುಸ್ಲಿಮರು ಹಿಂದೂ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೈರಲ್ ವೀಡಿಯೊವನ್ನು ಜನವರಿ 8, 2025 ರಂದು ಹಂಚಿಕೊಂಡು, ‘‘ಬಾಂಗ್ಲಾದೇಶದಿಂದ ಮತ್ತೊಂದು ಹೃದಯ ವಿದ್ರಾವಕ ಸುದ್ದಿ. ಬಾಂಗ್ಲಾದೇಶದ ಕುಲಿಯಾಧರ್ ಗ್ರಾಮದಲ್ಲಿ ಶಾಂತಿಯುತರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಬಾಂಗ್ಲಾದೇಶದಲ್ಲಿ ಪ್ರತಿದಿನ ಹಿಂದೂ ಅಲ್ಪಸಂಖ್ಯಾತರ ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ನಾಚಿಕೆಗೇಡು’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇಲ್ಲಿ ಹಿಂದೂಗಳ ಮನೆಗೆ ಬೆಂಕಿ ಹಚ್ಚಲಾಗಿಲ್ಲ. ಬದಲಾಗಿ ಇದು ಮುಸ್ಲಿಮರ ಮನೆ ಎಂದು ತಿಳಿದುಬಂದಿದೆ. ಜನವರಿ 8, 2025 ರಂದು ಸಂಜೆ, ಈ ಘಟನೆಯು ಬಾಂಗ್ಲಾದೇಶದ ಬಾಗರ್‌ಹತ್‌ನ ಬಿಷ್ಣುಪುರ್ ಯೂನಿಯನ್‌ನ ಕುಲಿಯಾಡೈಡ್ ಗ್ರಾಮದಲ್ಲಿ ನಡೆದಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿದ್ದೇವೆ. ಆಗ ಈ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಬಾಂಗ್ಲಾದ ಅನೇಕ ಸುದ್ದಿ ಮಾಧ್ಯಮ ವರದಿ ಮಾಡಿರುವುದು ನಮಗೆ ಕಂಡುಬಂದಿದೆ.
ಬಾಂಗ್ಲಾದೇಶದ ಸ್ಥಳೀಯ ಸುದ್ದಿ ಮಾಧ್ಯಮ News24bd ಜನವರಿ 9, 2025 ರಂದು ‘‘ಬಗೇರ್‌ಹತ್‌ನಲ್ಲಿ ಎರಡು ಪಕ್ಷಗಳ ನಡುವಿನ ಘರ್ಷಣೆಯಲ್ಲಿ 8 ಮನೆಗಳು ಸುಟ್ಟುಹೋಗಿವೆ’’ ಎಂಬ ಶೀರ್ಷಿಕೆಯೊಂದಿಗೆ ಈ ಘಟನೆ ಕುರಿತು ಸುದ್ದಿ ಪ್ರಕಟಿಸಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಬುಧವಾರ (ಜನವರಿ 8) ಸಂಜೆ ಬಗರ್‌ಹತ್‌ನ ಬಿಷ್ಣುಪುರ ಯೂನಿಯನ್‌ನ ಕುಲಿಯಾಡೈಡ್ ಗ್ರಾಮದಲ್ಲಿ BNP ಯ ಎರಡು ಬಣಗಳ ನಡುವೆ ಘರ್ಷಣೆ ನಡೆದಿದೆ. ಪಕ್ಷಾತೀತವಾಗಿ ಆರಂಭವಾದ ಸಂಘರ್ಷದಿಂದ ಎದುರಾಳಿಗಳ ದಾಳಿಗೆ 8 ಮನೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 25 ಜನರು ಗಾಯಗೊಂಡಿದ್ದಾರೆ. ಪೊಲೀಸ್ ಮತ್ತು ಸ್ಥಳೀಯ ಮೂಲಗಳ ಪ್ರಕಾರ, ಬಿಷ್ಣುಪುರ್ ಯೂನಿಯನ್ BNP ಯ ಮಾಜಿ ಜಂಟಿ ಸಂಚಾಲಕ ರುಹುಲ್ ಅಮೀನ್/ ರುಹುಲ್ ಸದಸ್ಯರ ಬೆಂಬಲಿಗರು BNP ಯ ಮಾಜಿ ಯೂನಿಯನ್ ಅಧ್ಯಕ್ಷ ಮೊಸ್ತಫಿಜುರ್ ರೆಹಮಾನ್ ಅವರ ಬೆಂಬಲಿಗರೊಂದಿಗೆ ಘರ್ಷಣೆ ನಡೆಸಿದರು. ಈ ಕಾರಣದಿಂದಾಗಿ, ಮೊಸ್ತಫಿಜುರ್ ರೆಹಮಾನ್ ಅವರ ನೂರಾರು ಬೆಂಬಲಿಗರು ಸಂಜೆ ರುಹುಲ್ ಸದಸ್ಯ ಮತ್ತು ಅವರ 7 ಸಹೋದರರ ಮನೆಗೆ ಬೆಂಕಿ ಹಚ್ಚಿದ್ದಾರೆ. ಇತ್ತೀಚೆಗೆ, ಯೂನಿಯನ್ ಬಿಎನ್‌ಪಿ ಸಮಿತಿಯ ರಚನೆಯ ವಿವಾದವು ತೀವ್ರ ಹಂತಕ್ಕೆ ತಲುಪಿತ್ತು. ಸೋಮವಾರ ರಾತ್ರಿ ಕೂಡ ಎರಡು ಕಡೆಯ ನಡುವೆ ನಡೆದ ಘರ್ಷಣೆಯಲ್ಲಿ ಐವರು ಗಾಯಗೊಂಡಿದ್ದರು. ಬುಧವಾರ ಮಧ್ಯಾಹ್ನ ಆರಂಭವಾದ ಪ್ರತೀಕಾರದ ದಾಳಿ ಸಂಜೆ ವೇಳೆಗೆ ವಿಕೋಪಕ್ಕೆ ತಿರುಗಿತು. ನೂರಾರು ಜನರು ರೂಹುಲ್ ಸದಸ್ಯ ಮತ್ತು ಅವರ ಸಹೋದರರ ಮನೆಗೆ ದಾಳಿ ಮಾಡಿ ಲೂಟಿ ಮಾಡಿ ಬೆಂಕಿ ಹಚ್ಚಿದರು. ಬೆಂಕಿಯಲ್ಲಿ ಆರು ದ್ವಿಚಕ್ರವಾಹನಗಳು, ರೆಫ್ರಿಜರೇಟರ್‌ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿವೆ’’ ಎಂದು ಬರೆಯಲಾಗಿದೆ.
ಹಾಗೆಯೆ Bangla.Dhakatribune ಕೂಡ 9 ಜನವರಿ, 2025 ರಂದು, ‘‘ಬಗರ್‌ಹತ್‌ನ ಬಿಷ್ಣುಪುರ ಒಕ್ಕೂಟದ ಕುಲಿಯಾದೈರ್ ಗ್ರಾಮದಲ್ಲಿ ಬಿಎನ್‌ಪಿಯ ಎರಡು ಬಣಗಳ ನಡುವೆ ನಡೆದ ಘರ್ಷಣೆಯಲ್ಲಿ ಎಂಟು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಸಮಯದಲ್ಲಿ, ಎರಡೂ ಕಡೆಯ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 20 ಜನರು ಗಾಯಗೊಂಡರು. ಆರು ಮೋಟಾರ್ ಸೈಕಲ್‌ಗಳು, ಅಸಬ್ ಪೇಪರ್‌ಗಳು ಮತ್ತು ಇತರ ವಸ್ತುಗಳು ಬೆಂಕಿಯಲ್ಲಿ ಹಾನಿಗೊಳಗಾಗಿವೆ. ಬಿಷ್ಣುಪುರ ಯೂನಿಯನ್ ಬಿಎನ್‌ಪಿಯ ಮಾಜಿ ಅಧ್ಯಕ್ಷ ಮುಸ್ತಫಿಜುರ್ ರೆಹಮಾನ್ ಮತ್ತು ಮಾಜಿ ಜಂಟಿ ಸಂಚಾಲಕ ರುಹುಲ್ ಅಮೀನ್ ನಡುವೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮತ್ತು ಸ್ಥಳೀಯರು ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು’’ ಎಂಬ ಮಾಹಿತಿ ಇದರಲ್ಲಿದೆ.
ಇದು ಬಿಷ್ಣುಪುರ ಒಕ್ಕೂಟದ ಕುಲಿಯಾದೈರ್ ಗ್ರಾಮದಲ್ಲಿ ಬಿಎನ್‌ಪಿಯ ಎರಡು ಬಣಗಳ ನಡುವೆ ನಡೆದ ಘರ್ಷಣೆ ಎಂದು ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್ ಜೊತೆಗೆ ದೈನಿಕ್ ಇಂಕಿಲಾಬ್ ಮತ್ತು ಬಾಂಗ್ಲಾ ಟ್ರಿಬ್ಯೂನ್ ಸುದ್ದಿ ಮಾಡಿರುವುದನ್ನು ನೀವು ಇಲ್ಲಿ, ಇಲ್ಲಿ ಓದಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಬಾಂಗ್ಲಾದೇಶದ ಬಗರ್‌ಹತ್‌ನಲ್ಲಿ ಬಿಎನ್‌ಪಿಯ ಬಣಗಳ ನಡುವಣ ವಿವಾದದಲ್ಲಿ ಎರಡು ಮುಸ್ಲಿಂ ಗುಂಪುಗಳ ನಡುವಿನ ಸಂಘರ್ಷವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಕೋಮು ಬಣ್ಣದೊಂದಿಗೆ ಹಂಚಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.