ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ನೆಲದ ಮೇಲೆ ಮಲಗಿರುವ ಮಹಿಳೆಯೊಬ್ಬರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಂಗ್ಲಾದೇಶದಲ್ಲಿ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲ್ಲಲ್ಪಟ್ಟ ಹಿಂದೂ ಮಹಿಳೆಯನ್ನು ಇದು ತೋರಿಸುತ್ತದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಇಸ್ಲಾಮಿಕ್ ಆಳ್ವಿಕೆಯಲ್ಲಿ ಬಾಂಗ್ಲಾದೇಶದ ಹಿಂದೂಗಳ ದುಃಸ್ಥಿತಿಯನ್ನು ನೋಡಿ. ಮೊದಲು ಬಿಪ್ನಿ ಬಾಲಾ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈಗ ಮತ್ತೊಬ್ಬ ವಿವಾಹಿತ ಹಿಂದೂ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯ ಕೈಕಾಲುಗಳನ್ನು ಕಟ್ಟಿ ಪಾಲಿಥಿಲೀನ್‌ನಲ್ಲಿ ತುಂಬಿಸಲಾಗಿತ್ತು. ಭೋಲಾರೋಡ್ ಬಳಿಯ ತಾಲೂಕುದಾರ್ ಮಾರುಕಟ್ಟೆಯ ಕಾಡಿನಲ್ಲಿ ಶವ ಪತ್ತೆಯಾಗಿದೆ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಚಿತ್ರವು ವಾಸ್ತವವಾಗಿ ಕೌಟುಂಬಿಕ ವಿವಾದದಿಂದಾಗಿ ಹಲ್ಲೆಗೊಳಗಾದ ಮಾರಿಯಾ ಬೇಗಂ ಎಂಬ ಬಾಂಗ್ಲಾದೇಶಿ ಮುಸ್ಲಿಂ ಮಹಿಳೆಯನ್ನು ತೋರಿಸುತ್ತದೆ ಮತ್ತು ಅವರು ಬದುಕುಳಿದಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ಫೋಟೋವನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಬಾಂಗ್ಲಾದೇಶದ ಅನೇಕ ಮಾಧ್ಯಮ ಇದೇ ವೈರಲ್ ಫೋಟೋದ ಜೊತೆಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. Khoborerkotha.com ಎಂಬ ಸುದ್ದಿವಾಹಿನಿಯಲ್ಲಿ ಜೂನ್ 29 ರಂದು ಪ್ರಕಟವಾದ ವರದಿಯ ಪ್ರಕಾರ, ‘‘ಬಾಂಗ್ಲಾದೇಶ ಪೊಲೀಸರು ಬಾರಿಸಲ್-ಭೋಲಾ ಹೆದ್ದಾರಿಯಿಂದ ಮಹಿಳೆಯೊಬ್ಬರನ್ನು ರಕ್ಷಿಸಿದ್ದಾರೆ. ಆಕೆಯ ಮೇಲೆ ಆಸಿಡ್ ದಾಳಿ ನಡೆಸಲಾಯಿತು ಮತ್ತು ಆಕೆಯ ಕೈಕಾಲುಗಳನ್ನು ಕಟ್ಟಿಹಾಕಲಾಗಿತ್ತು. ಬಾರಿಸಲ್ ಬಂದರು ಪೊಲೀಸ್ ಠಾಣೆಯ ಅಧಿಕಾರಿ ಡೆಲ್ವಾರ್ ಹೊಸೈನ್ ಅವರು, ಆಕೆಯನ್ನು ಶೇರ್-ಎ-ಬಾಂಗ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.’’
"ರಕ್ಷಿಸಲ್ಪಟ್ಟ ಮಹಿಳೆಯನ್ನು ಮಾರಿಯಾ ಬೇಗಂ (23) ಎಂದು ಗುರುತಿಸಲಾಗಿದೆ. ಅವರು ಮೂರು ತಿಂಗಳ ಗರ್ಭಿಣಿ. ಆಕೆಯ ಪತಿಯ ಮಾಜಿ ಪತ್ನಿಯ ಸಂಬಂಧಿಕರು ಮಗುವನ್ನು ಗರ್ಭಪಾತ ಮಾಡಿಸಲು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ" ಎಂದು ಬಾಂಗ್ಲಾದೇಶದ ಮತ್ತೊಂದು ಮಾಧ್ಯಮ Samakalವರದಿ ಮಾಡಿದೆ.
‘‘ಒಂದು ವರ್ಷದ ಹಿಂದೆ ಭೋಲಾದ ಉದ್ಯಮಿ ಮಶಿಯುರ್ ರೆಹಮಾನ್ ಅವರನ್ನು ಮದುವೆಯಾಗಿದ್ದಾಗಿ ಮಾರಿಯಾ ಬೇಗಂ ಆಸ್ಪತ್ರೆಯಲ್ಲಿ ಸುದ್ದಿಗಾರರಿಗೆ ಈ ವಿಚಾರ ತಿಳಿಸಿದರು. ಘಟನೆಯ ದಿನದಂದು, ಆಕೆಯ ಪತಿಯ ಮಾಜಿ ಪತ್ನಿಯ ಸಹೋದರರು ಮೊದಲು ಆಕೆಯನ್ನು ಅಪಹರಿಸಿದರು. ಅವರು ಆಕೆಯನ್ನು ಕಾಡಿಗೆ ಕರೆದೊಯ್ದು ಚಿತ್ರಹಿಂಸೆ ನೀಡಿದರು. ಆಕೆಯ ಕೈಕಾಲುಗಳನ್ನು ಕಟ್ಟಿ, ಪಾಲಿಥಿಲೀನ್‌ನಲ್ಲಿ ಸುತ್ತಿ, ಅಲ್ಲಿಯೇ ಬಿಟ್ಟು ಹೋಗಿದ್ದರು’’ ಎಂದು ವರದಿಯಲ್ಲಿದೆ.
ಇತರ ಎರಡು ಬಾಂಗ್ಲಾದೇಶದ ಮಾಧ್ಯಮಗಳಾದ ಅಜ್ಕರ್ ಪತ್ರಿಕಾ ಮತ್ತು ಬಾಂಗ್ಲಾದೇಶಪ್ರತಿದಿನ್ ಕೂಡ ಇದೇ ರೀತಿಯ ಮಾಹಿತಿಯನ್ನು ಹೊಂದಿರುವ ವರದಿಗಳನ್ನು ಪ್ರಕಟಿಸಿವೆ. ಇದರಲ್ಲಿಯೂ ಹಲ್ಲೆಗೊಳಗಾದ ಮಾರಿಯಾ ಬೇಗಂ ಮತ್ತು ಆಕೆಯ ಪತಿಯ ಹೆಸರು ಮಶಿಯುರ್ ರೆಹಮಾನ್ ಎಂದು ಉಲ್ಲೇಖಿಸಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಯ ಕೊಲೆ ಮಾಡಲಾಗಿದೆ ಎಂದು ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಕೌಟುಂಬಿಕ ವಿವಾದದಿಂದಾಗಿ ಹಲ್ಲೆಗೊಳಗಾದ ಮಾರಿಯಾ ಬೇಗಂ ಎಂಬ ಬಾಂಗ್ಲಾದೇಶಿ ಮುಸ್ಲಿಂ ಮಹಿಳೆಯನ್ನು ಫೋಟೋ ತೋರಿಸುತ್ತದೆ ಮತ್ತು ಅವರು ಬದುಕುಳಿದಿದ್ದಾರೆ.