Warning: This article contains sensitive media that some readers may find disturbing. Viewer discretion is advised.
ಕತ್ತಲಿನಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವ ಮಹಿಳೆಯೊಬ್ಬರು ಸಹಾಯ ಹಸ್ತ ಕೇಳುತ್ತಿರುವಾಗ ಯಾರೂ ಸಹಾಯ ಮಾಡದೆ ಚಿತ್ರೀಕರಿಸುತ್ತಿರುವ ಘಟನೆಯ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊವನ್ನು ಶೇರ್ ಮಾಡುತ್ತಿರುವವರು ಬಾಂಗ್ಲಾದೇಶದಲ್ಲಿ ಮುಸ್ಲಿಮರಿಂದ ಚಿತ್ರಹಿಂಸೆಗೊಳಗಾದ ಹಿಂದೂ ಮಹಿಳೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶದ ನಾರಾಯಣಗಂಜ್‌ನಲ್ಲಿ ಹಿಂದೂ ಮಹಿಳೆಗೆ ಅ_ತ್ಯಾ_ಚಾರ ಮಾಡಿದ ನಂತರ ಮುಸ್ಲಿಂ ಮೂಲಭೂತವಾದಿಗಳು ಚಿ_ತ್ರ_ಹಿಂಸೆ ನೀಡುತ್ತಿರುವ ದೃಶ್ಯ. ಇಲ್ಲಿರುವ ಮುಸ್ಲಿಮರಿಗೆ ನಾವು ಎಲ್ಲಾ ಸೌಲಭ್ಯಗಳನ್ನು ಕೊಟ್ಟು ಚೆನ್ನಾಗಿ ಇಟ್ಟರು ಅವರು ನೆಮ್ಮದಿ ಇಂದ ಇರಲು ಬಿಡುತ್ತಿಲ್ಲ ಇನ್ನೂ ಅಲ್ಲಿ ಹಿಂದೂಗಳಿಗೆ ಯಾವುದೇ ಸಹಾಯ ಸೌಲಭ್ಯಗಳಿಲ್ಲದೆ ಹುಡುಕಿ ಹುಡುಕಿ ಕೊ_ಲ್ಲು_ತ್ತಿದ್ದಾರೆ..’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಈ ಹಕ್ಕು ಸುಳ್ಳು ಎಂದು ಕಂಡುಕೊಂಡಿದೆ. ಘಟನೆಯಲ್ಲಿ ಯಾವುದೇ ಕೋಮು ಕೋನವಿಲ್ಲ. ಈ ಮಹಿಳೆಯ ಕಳ್ಳರ ಗುಂಪಿನ ಓರ್ವ ಸದಸ್ಯೆ ಆಗಿದ್ದು, ಆ ಕಾರಣಕ್ಕೆ ಜನರು ದಾಳಿ ನಡೆಸಿದ್ದಾರೆ.
ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ, ಡಿಸೆಂಬರ್ 27, 2024 ರಂದು ದೇಶ್ಟಿವಿ ಎಂಬ ವೆಬ್‌ಸೈಟ್ ಪ್ರಕಟಿಸಿದ ಇದೇ ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ನಾವು ಕಂಡುಕೊಂಡಿದ್ದೇವೆ. ‘‘ಅರೈಹಜಾರ್‌ನಲ್ಲಿ ಗ್ರಾಮಸ್ಥರಿಂದ ಹತ್ಯೆಗೀಡಾದ ದರೋಡೆಕೋರನ ಸಹಚರ ಎಂದು ಮಹಿಳೆಯನ್ನು ಆರೋಪಿಸಲಾಗಿದೆ. ಜನರಿಂದ ತಪ್ಪಿಸಿಕೊಂಡು ಹೋಗುವಾಗ ರಕ್ಷಿಸಿಕೊಳ್ಳಲು ಮಹಿಳೆ ಕಾಲುವೆಗೆ ಹಾರಿದ್ದಾಳೆ ಎಂದು ವರದಿ ತಿಳಿಸಿದೆ. ಆದರೆ, ಹಲ್ಲೆಯ ವೇಳೆ ಆಕೆಗೂ ಗಾಯಗಳಾಗಿವೆ.’’
ಈ ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು ಹೈಜಾದಿ ಯುಪಿ, ಅರೈಹಜಾರ್‌ನ ಅಬ್ದುಲ್ ಮಜೀದ್ ಅವರ ಮಗ ಎಮ್‌ಡಿ ಬಿಲಾಲ್ ಅಲಿಯಾಸ್ ಬಿಲ್ಲು ದಾಕತ್ ಎಂದು ಗುರುತಿಸಲಾಗಿದೆ.
ಈ ಘಟನೆಯನ್ನು ಮತ್ತೊಂದು ಬಾಂಗ್ಲಾದೇಶದ ವೆಬ್‌ಸೈಟ್ ವರದಿ ಮಾಡಿದೆ. ಸೊಮೊಯ್ನ್ಯೂಸ್ ಡಿಸೆಂಬರ್ 27, 2024 ರಂದು, ‘‘ಕಹಿಂಡಿ ಗ್ರಾಮದ ಇಲುಮ್ಡಿ ರಸ್ತೆಯಲ್ಲಿ ರಾತ್ರಿಯಲ್ಲಿ ಏಳರಿಂದ ಎಂಟು ದರೋಡೆಕೋರರ ಗುಂಪು ಕಾರನ್ನು ದರೋಡೆ ಮಾಡಲು ತಯಾರಿ ನಡೆಸುತ್ತಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ವರದಿ ಮಾಡಿದೆ. ಈ ಪ್ರಯತ್ನವನ್ನು ಅರಿತ ಗ್ರಾಮಸ್ಥರು ಅವರನ್ನು ಬೆನ್ನಟ್ಟಿದ್ದಾರೆ. ದರೋಡೆಕೋರ ಗುಂಪಿನ ಇತರ ಸದಸ್ಯರು ಪರಾರಿಯಾಗಿದ್ದರೂ, ಬಿಲ್ಲಾಲ್ ಮತ್ತು ಅವನ ಸಹಚರ ಲವ್ಲಿ ಜನಸಮೂಹಕ್ಕೆ ಸಿಕ್ಕಿಬಿದ್ದರು. ಸಿಟ್ಟಿಗೆದ್ದ ಗ್ರಾಮಸ್ಥರು ಥಳಿಸಿದ್ದರಿಂದ ಬಿಲ್ಲಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆ ಸಮಯದಲ್ಲಿ, ಅವನ ಸಹವರ್ತಿ ಲವ್ಲಿ ತನ್ನನ್ನು ರಕ್ಷಿಸಿಕೊಳ್ಳಲು ಕಾಲುವೆಗೆ ಹಾರಿದಳು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳು ಮಹಿಳೆಯನ್ನು ರಕ್ಷಿಸಿದ್ದಾರೆ’’ ಎಂದು ಬರೆಯಲಾಗಿದೆ.
ಹೀಗಾಗಿ ಹಲ್ಲೆಯ ಹಿಂದೆ ಕೋಮುವಾದಿ ಉದ್ದೇಶದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದ್ದರಿಂದ, ಹಕ್ಕು ಸುಳ್ಳು ಎಂದು ನಾವು ತೀರ್ಮಾನಿಸುತ್ತೇವೆ.