Fact Check: ಇದು ತಮಿಳುನಾಡಲ್ಲಿ ಹಿಂದೂಗಳಿಗೆ ಶಿಕ್ಷಿಸುತ್ತಿರುವ ವೀಡಿಯೊವೇ? ಸುಳ್ಳು, ಸತ್ಯ ಇಲ್ಲಿದೆ

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಸಣ್ಣ ದೇವಸ್ಥಾನದಿಂದ ಹೊರಬರುತ್ತಿರುವ ಪೂಜಾರಿ ಮತ್ತು ಇತರರನ್ನು ಪೊಲೀಸ್ ಅಧಿಕಾರಿಯೊಬ್ಬರು ಲಾಠಿಯಿಂದ ಹೊಡೆಯುತ್ತಿರುವುದು ಕಾಣಬಹುದು. ಈ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಹಿಂದೂಗಳ ಪರಿಸ್ಥಿತಿ ಎಂದು ಹೇಳಿಕೊಳ್ಳುತ್ತಿದ್ದಾರೆ.

By Vinay Bhat
Published on : 13 Dec 2025 8:50 PM IST

Fact Check: ಇದು ತಮಿಳುನಾಡಲ್ಲಿ ಹಿಂದೂಗಳಿಗೆ ಶಿಕ್ಷಿಸುತ್ತಿರುವ ವೀಡಿಯೊವೇ? ಸುಳ್ಳು, ಸತ್ಯ ಇಲ್ಲಿದೆ
Claim:ತಮಿಳುನಾಡಲ್ಲಿ ಹಿಂದೂಗಳಿಗೆ ಶಿಕ್ಷಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಇದು 2020ರ ಕೊರೊನಾ ಲಾಕ್ಡೌನ್ ಸಮಯದ ವೀಡಿಯೊ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಸಣ್ಣ ದೇವಸ್ಥಾನದಿಂದ ಹೊರಬರುತ್ತಿರುವ ಪೂಜಾರಿ ಮತ್ತು ಇತರರನ್ನು ಪೊಲೀಸ್ ಅಧಿಕಾರಿಯೊಬ್ಬರು ಲಾಠಿಯಿಂದ ಹೊಡೆಯುತ್ತಿರುವುದು ಕಾಣಬಹುದು. ಈ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಹಿಂದೂಗಳ ಪರಿಸ್ಥಿತಿ ಎಂದು ಹೇಳಿಕೊಳ್ಳುತ್ತಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ತಮಿಳುನಾಡಲ್ಲಿ ಹಿಂದೂಗಳ ಪರಿಸ್ಥಿತಿ ಬಾಂಗ್ಲಾ ದೇಶಕ್ಕಿಂತ ಕಡೆಯಾಗ್ತಿದೆ ನೋಡಿ. ಹಿಂದೂ ವಿರೋಧಿಗಳಿಗೆ ಮತ ಹಾಕಿ ಚುನಾವಣೆಯಲ್ಲಿ ಗೆಲ್ಲಿಸಿ ಅಧಿಕಾರ ಕೊಟ್ಟರೆ ಆಗುವುದು ಹೀಗೆಯೆ. ತಮಿಳುನಾಡಿನಲ್ಲಿ ಈಗ ಸದ್ಯದ ಹಿಂದೂಗಳ ಪರಿಸ್ಥಿತಿ ಇದು’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2020ರ ಕೊರೊನಾ ಲಾಕ್​ಡೌನ್ ಸಮಯದ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೀಡಿಯೊದ ಪ್ರಮುಖ ಕೀ-ಫ್ರೇಮ್​ಗಳನ್ನು ಗೂಗಲ್ ಲೆನ್ಸ್‌ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಏಪ್ರಿಲ್ 3, 2020 ರಂದು ಎಕ್ಸ್ ಬಳಕೆದಾರರೊಬ್ಬರುಇದೇ ವೀಡಿಯೊವನ್ನು ಹಂಚಿಕೊಂಡಿರುವುದು ಸಿಕ್ಕಿತು. ಇದರಲ್ಲಿ ಘಟನೆ ಎಲ್ಲಿ ನಡೆಯಿತು ಎಂದು ಉಲ್ಲೇಖಿಸಲಾಗಿಲ್ಲ. "ಸ್ವಾಮಿಯೇ ಬಂದು ಅರ್ಚಕರಿಗೆ ಮೊದಲ ಏಟು ಕೊಟ್ಟರು" ಎಂದು ವಿಡಂಬನಾತ್ಮಕವಾಗಿ ಕ್ಯಾಪ್ಶನ್ ನೀಡಲಾಗಿದೆ.

ಯೂಟ್ಯೂಬ್​ನಲ್ಲೂ ಮಾರ್ಚ್ 29, 2020 ರಂದು ಇದೇ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಕೊರೊನಾ ಎಂದು ಹ್ಯಾಶ್​ಟ್ಯಾಗ್ ಬಳಸಲಾಗಿದೆ. ಈ ವೈರಲ್ ವೀಡಿಯೊದ ಬ್ಯಾಕ್​ಗ್ರೌಂಡ್​​ನಲ್ಲಿ ಓರ್ವ ವ್ಯಕ್ತಿ ಕೊರೊನಾ ವೈರಸ್ ಎಂದು ಹೇಳುತ್ತಿರುವುದು ಕೇಳಬಹುದು. ಹೀಗಾಗಿ ಈ ವೀಡಿಯೊ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ತೆಗೆದಿರಬಹುದೆಂಬ ಅನುಮಾನ ಮೂಡಿತು. ಕೊರೊನಾ ಅವಧಿಯಲ್ಲಿ, ಸಾರ್ವಜನಿಕರು ಎಲ್ಲಾ ಧಾರ್ಮಿಕ ಪೂಜಾ ಸ್ಥಳಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಲಾಗಿತ್ತು. ಆ ಅವಧಿಯಲ್ಲಿ, ಪ್ರಾರ್ಥನೆ ಸಲ್ಲಿಸಿದ್ದಕ್ಕಾಗಿ ಮುಸ್ಲಿಮರ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿದ್ದರು.

ಕೊರೊನಾ ಅವಧಿಯಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡ ಬಗ್ಗೆ CGTN America ಏಪ್ರಿಲ್ 1, 2020 ರಂದು ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ಒಂದು ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ 49ನೇ ಸೆಕೆಂಡ್​ನಿಂದ ವೈರಲ್ ವೀಡಿಯೊವನ್ನು ಕಾಣಬಹುದು.

ಇಷ್ಟೇ ಅಲ್ಲದೆ ನಮ್ಮ ಹುಡುಕಾಟದ ಸಂದರ್ಭ ತಮಿಳುನಾಡು ಫ್ಯಾಕ್ಟ್​ಚೆಕ್​ನ ಫೇಸ್​ಬುಕ್ ಖಾತೆಯಲ್ಲಿ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂದು ಹೇಳಲಾಗಿದೆ. ‘‘ಇದು ದೇವಸ್ಥಾನದಲ್ಲಿ ಪೂಜೆ ಮಾಡಿದವರ ಮೇಲೆ ಕ್ರಮಕೈಗೊಂಡ 2020 ರ ಕೊರೊನಾ ಅವಧಿಯ ವಿಡಿಯೋ!’’ ಎಂಬ ಮಾಹಿತಿ ಇದರಲ್ಲಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ತಮಿಳುನಾಡಲ್ಲಿ ಹಿಂದೂಗಳ ಪರಿಸ್ಥಿತಿ ಎಂದು ಪ್ರಸಾರವಾಗುವ ವೀಡಿಯೊ 2020 ರ ಕೊರೊನಾ ಲಾಕ್‌ಡೌನ್ ಸಮಯದ್ದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.
Claimed By:Facebook User
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಇದು 2020ರ ಕೊರೊನಾ ಲಾಕ್ಡೌನ್ ಸಮಯದ ವೀಡಿಯೊ ಆಗಿದೆ.
Next Story