Fact Check: ನಾಗ್ಪುರದಲ್ಲಿ ಮುಸ್ಲಿಮರನ್ನು ಬಹಿಷ್ಕರಿಸುತ್ತಿರುವ ಹಿಂದೂಗಳು? ಇಲ್ಲ, ಇದು ಪೂರ್ವ ದೆಹಲಿಯಲ್ಲಿ ನಡೆದ ಕೊಲೆಯ ವಿರುದ್ಧದ ಪ್ರತಿಭಟನೆಯ ವೀಡಿಯೊ
ನಾಗ್ಪುರಕ್ಕೂ ಈ ವೀಡಿಯೊಕ್ಕೂ ಯಾವುದೇ ಸಂಬಂಧವಿಲ್ಲ. ದೆಹಲಿಯ ಗಾಜಿಪುರದಲ್ಲಿ ವ್ಯಕ್ತಿಯೊಬ್ಬನ ಹತ್ಯೆಯ ನಂತರ ಮುಸ್ಲಿಮರ ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿರುವ ಜನರ ಗುಂಪಿನ ವೀಡಿಯೊ ಇದಾಗಿದೆ.
By Vinay Bhat
Claim:ನಾಗ್ಪುರ ಹಿಂಸಾಚಾರದ ನಂತರ, ಹಿಂದೂಗಳು ಮುಸ್ಲಿಮರನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
Fact:ಹಕ್ಕು ಸುಳ್ಳು. ದೆಹಲಿಯ ಗಾಜಿಪುರದಲ್ಲಿ ವ್ಯಕ್ತಿಯೊಬ್ಬನ ಹತ್ಯೆಯ ನಂತರ ಮುಸ್ಲಿಮರ ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿರುವ ಜನರ ಗುಂಪಿನ ವೀಡಿಯೊ ಇದಾಗಿದೆ.
ಮಾರ್ಚ್ 17 ರಂದು, ಮಹಾರಾಷ್ಟ್ರದ ನಾಗ್ಪುರದಲ್ಲಿ ಔರಂಗಜೇಬನ ಸಮಾಧಿಯ ವಿವಾದದ ಬಗ್ಗೆ ಹಿಂಸಾಚಾರ ಭುಗಿಲೆದ್ದಿತು. ಗಲಭೆಕೋರರ ಗುಂಪು ವಾಹನಗಳನ್ನು ಧ್ವಂಸಗೊಳಿಸಿ, ಪೆಟ್ರೋಲ್ ಬಾಂಬ್‌ಗಳನ್ನು ಎಸೆದು, ಕಲ್ಲುಗಳನ್ನು ತೂರಿತು ಮತ್ತು ಕೆಲವು ಮನೆಗಳ ಮೇಲೆ ದಾಳಿ ಮಾಡಿತು. ಈ ಹಿಂಸಾಚಾರದಲ್ಲಿ ಭಾಗಿಯಾಗಿದ್ದ 84 ಜನರನ್ನು ಪೊಲೀಸರು ಇಲ್ಲಿಯವರೆಗೆ ಬಂಧಿಸಿದ್ದಾರೆ. ಈ ಘಟನೆಯ ಮಧ್ಯೆ ಇದೀಗ ವೃದ್ಧರೊಬ್ಬರ ಭಾಷಣದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮೂರು ನಿಮಿಷಗಳ ವೀಡಿಯೊದ ಮೊದಲ ನಿಮಿಷದಲ್ಲಿ, ವೃದ್ಧ ಮುಸ್ಲಿಮರನ್ನು ಸಾಮಾಜಿಕವಾಗಿ ಬಹಿಷ್ಕರಿಸುವಂತೆ ಮನವಿ ಮಾಡುತ್ತಿದ್ದಾನೆ. ಅಲ್ಲಿ ನೆರೆದಿದ್ದ ಜನಸಮೂಹ ಅವರ ಮಾತುಗಳಿಗೆ ಒಪ್ಪಿಗೆಯನ್ನು ವ್ಯಕ್ತಪಡಿಸುತ್ತಿದೆ.
ಫೇಸ್‌ಬುಕ್ ಬಳಕೆದಾರರು ಮಾರ್ಚ್ 20, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ನಾಗ್ಪುರ ಹಿಂಸಾಚಾರದ ನಂತರ, ಹಿಂದೂಗಳು ಮುಸ್ಲಿಮರನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ’’ ಎಂದು ಹೇಳುತ್ತಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ನಾಗ್ಪುರಕ್ಕೂ ಈ ವೀಡಿಯೊಕ್ಕೂ ಯಾವುದೇ ಸಂಬಂಧವಿಲ್ಲ. ದೆಹಲಿಯ ಗಾಜಿಪುರದಲ್ಲಿ ವ್ಯಕ್ತಿಯೊಬ್ಬನ ಹತ್ಯೆಯ ನಂತರ ಮುಸ್ಲಿಮರ ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಿರುವ ಜನರ ಗುಂಪಿನ ವೀಡಿಯೊ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ಕ್ಲಿಪ್ ಅನ್ನು ಎಚ್ಚರಿಕೆಯಿಂದ ನೋಡಿದ್ದೇವೆ. ಈ ವೀಡಿಯೊದ 1:34 ನಿಮಿಷಗಳ ಕೌಂಟರ್‌ಗಳಲ್ಲಿ, ದೆಹಲಿಯ ಘಾಜಿಪುರದ ಮಹಾಪಂಚಾಯತ್ ಬಗ್ಗೆ ಒಬ್ಬ ವ್ಯಕ್ತಿ ಪ್ರಸ್ತಾಪಿಸುವುದನ್ನು ನಾವು ಕೇಳಿದ್ದೇವೆ. ಹಾಗೆಯೆ 2:30 ನಿಮಿಷಗಳ ನಂತರ, ರೋಹಿತ್ ಗುರ್ಜರ್ ಕೊಲೆ ಪ್ರಕರಣದಲ್ಲಿ ನ್ಯಾಯ ಪಡೆಯುವುದೇ ನಮ್ಮ ಮುಖ್ಯ ಉದ್ದೇಶ ಎಂದು ಮತ್ತೊಬ್ಬ ವ್ಯಕ್ತಿ ಹೇಳುತ್ತಾರೆ.
ಬಳಿಕ ನಾವು ಗೂಗಲ್ ಲೆನ್ಸ್ ಸಹಾಯದಿಂದ ವೀಡಿಯೊದ ಕೀ ಫ್ರೇಮ್ ಅನ್ನು ಹುಡುಕಿದೆವು. ಈ ಸಂದರ್ಭ ಇದೇ ವೈರಲ್ ವೀಡಿಯೊದ ಲೈವ್ ಸ್ಟ್ರೀಮ್ ನಮಗೆ ಸಿಕ್ಕಿದ್ದು, ಇದನ್ನು ಮಾರ್ಚ್ 16, 2025 ರಂದು ಸಂಜೀವ್ ಭಾಟಿ ಎಂಬ ಫೇಸ್‌ಬುಕ್ ಪ್ರೊಫೈಲ್‌ನಿಂದ ನೇರ ಪ್ರಸಾರ ಮಾಡಲಾಯಿತು. ಇದಕ್ಕೆ ‘‘ರೋಹಿತ್ ಗುರ್ಜರ್ ಅವರನ್ನು ಮಾರ್ಚ್ 09, 2025 ರಂದು ದೆಹಲಿಯಲ್ಲಿ ಗಾಜಿಪುರ ಡೈರಿ ಫಾರ್ಮ್‌ನಲ್ಲಿ ವಾಸಿಸುವ ಜಿಹಾದಿಗಳು ಹತ್ಯೆ ಮಾಡಿದರು, ಆದರೆ ಪೊಲೀಸರು ಇನ್ನೂ ಅದರ ಬಗ್ಗೆ ಸಡಿಲ ಮನೋಭಾವವನ್ನು ಹೊಂದಿದ್ದಾರೆ. ನಾಲ್ವರು ಪ್ರಮುಖ ಆರೋಪಿಗಳು ಪೊಲೀಸ್ ಕಸ್ಟಡಿಯಿಂದ ಹೊರಗಿದ್ದಾರೆ. ದಯವಿಟ್ಟು ನನ್ನ 36 ಸಮುದಾಯಗಳ ಜನರು ನನ್ನ ಸಹೋದರ ರೋಹಿತ್‌ಗೆ ನ್ಯಾಯ ಪಡೆಯಲು ಮುಂದೆ ಬನ್ನಿ. ಸ್ಥಳ - ಗಾಜಿಪುರ ಗ್ರಾಮ, ಸಮಯ - 12 ಗಂಟೆ, ದಿನಾಂಕ - ಮಾರ್ಚ್ 23’’ ಎಂದು ಶೀರ್ಷಿಕೆ ಬರೆಯಲಾಗಿದೆ. (Archive)
ನಾಗ್ಪುರ ಹಿಂಸಾಚಾರಕ್ಕೆ ಒಂದು ದಿನ ಮೊದಲು ಈ ಫೇಸ್‌ಬುಕ್ ಖಾತೆಯಲ್ಲಿ ವೈರಲ್ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿತ್ತು ಎಂಬುದು ಗಮನಾರ್ಹ, ಇದು ಹಿಂಸಾಚಾರಕ್ಕೂ ಮುಂಚೆಯೇ ಈ ವೀಡಿಯೊ ಅಂತರ್ಜಾಲದಲ್ಲಿ ಇತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಅಲ್ಲದೆ ವೈರಲ್ ವೀಡಿಯೊದಲ್ಲಿ ಎಲ್ಲೂ ನಾಗ್ಪುರದ ಉಲ್ಲೇಖವಿಲ್ಲ. ಹೇಳಿಕೆಗಿಂತ ಸಂಪೂರ್ಣವಾಗಿ ಭಿನ್ನವಾಗಿ, ಈ ವೀಡಿಯೊದಲ್ಲಿ, ವೃದ್ಧನ ಭಾಷಣದ ನಂತರ ಮಾತನಾಡಿದ ಮತ್ತೊಬ್ಬ ವ್ಯಕ್ತಿ, "ಎಲ್ಲಾ 36 ಸಮುದಾಯಗಳು ಒಗ್ಗೂಡಿ ತಮ್ಮ ಹಿರಿಯರೊಂದಿಗೆ ಸಮಾಲೋಚಿಸಿದ ನಂತರ, 23 ರಂದು ಮಹಾಪಂಚಾಯತ್ ಘೋಷಿಸಬೇಕು. ಮತ್ತು ಎಲ್ಲಾ ಸಹೋದರರು 23 ರಂದು ಗರಿಷ್ಠ ಸಂಖ್ಯೆಯಲ್ಲಿ ದೆಹಲಿಯ ಘಾಜಿಪುರ ಗ್ರಾಮವನ್ನು ತಲುಪಬೇಕು" ಎಂದು ಹೇಳುವುದನ್ನು ಸ್ಪಷ್ಟವಾಗಿ ಕೇಳಬಹುದು.
ಇದಾದ ಬಳಿಕ, ನಾವು ಗೂಗಲ್ನಲ್ಲಿ ‘‘ಗಾಜಿಪುರ-ರೋಹಿತ್ ಗುರ್ಜರ್-ಕೊಲೆ’’ ಎಂಬ ಕೀವರ್ಡ್ ಹಾಕಿ ಹುಡುಕಿದೆವು. ಈ ಸಮಯದಲ್ಲಿ, ಮಾರ್ಚ್ 10, 2025 ರಂದು ಅಪ್‌ಲೋಡ್ ಮಾಡಲಾದ ವೀಡಿಯೊ ವರದಿಯು ಟೈಮ್ಸ್ ನೌ ನವಭಾರತ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಕಂಡುಬಂದಿದೆ ವರದಿಯ ಪ್ರಕಾರ, ‘‘ಪೂರ್ವ ದೆಹಲಿಯ ಘಾಜಿಪುರದ ಹೂವಿನ ಮಾರುಕಟ್ಟೆಯಲ್ಲಿ ರೋಹಿತ್ ಎಂಬ ಯುವಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಯುವಕನ ಸಾವಿನ ನಂತರ, ಕುಟುಂಬ ಸದಸ್ಯರು ನ್ಯಾಯಕ್ಕಾಗಿ ಒತ್ತಾಯಿಸಿ ಹೆದ್ದಾರಿಯನ್ನು ತಡೆದರು’’ ಎಂಬ ಮಾಹಿತಿ ಇದರಲ್ಲಿದೆ.
ಈ ಘಟನೆಯ ಬಗ್ಗೆ ಮಾರ್ಚ್ 11, 2025 ರಂದು ಹಲವು ಮಾಧ್ಯಮ ವರದಿ ಮಾಡಿರುವುದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ರೋಹಿತ್ ಚಾವ್ಡಾ (32) ಅವರನ್ನು ಮಾರ್ಚ್ 9, 2025 ರಂದು ಪೂರ್ವ ದೆಹಲಿಯ ಘಾಜಿಪುರದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಬಲಿಪಶು ಗುರ್ಜರ್ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ಸಾವಿನಿಂದ ಕುಟುಂಬ ಸದಸ್ಯರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಗಾಜಿಪುರ ಡೈರಿ ಫಾರ್ಮ್ ನಿವಾಸಿಗಳಾದ ನಜೀಮ್ (40) ಮತ್ತು ತಾಲಿಬ್ (24) ಎಂದು ಗುರುತಿಸಲಾಗಿದೆ. ದೆಹಲಿ ಪೊಲೀಸರು ಕೊಲೆಯ ಹಿಂದಿನ ಉದ್ದೇಶ ಹಣಕಾಸಿನ ವಿವಾದ ಎಂದು ಹೇಳಿದ್ದಾರೆ’’ ಎಂದು ಬರೆಯಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ನಾಗ್ಪುರದ ಹಿಂದೂಗಳು ಮುಸ್ಲಿಮರನ್ನು ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.