Fact Check: ಕಲ್ಲುಗಳಿಂದ ಜಜ್ಜಿ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಕೊಂದಿದ್ದಾರೆಯೇ? ಇಲ್ಲ, ನಿಜಾಂಶ ಇಲ್ಲಿದೆ
ಕೆಲ ವ್ಯಕ್ತಿಗಳು ಪಕ್ಕದಲ್ಲಿದ್ದ ದೊಡ್ಡ ಕಲ್ಲನ್ನು ಮೂರು-ನಾಲ್ಕು ಬಾರಿ ಆತನ ಮೇಲೆ ಸಾಯುವಂತೆ ಹಾಕುತ್ತಾರೆ. ಇದು ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊನ್ನು ಹಂಚಿಕೊಳ್ಳಲಾಗುತ್ತಿದೆ.
By Vinay Bhat
Claim:ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಈ ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿ ಲಾಲ್ ಚಂದ್ ಅಲಿಯಾಸ್ ಸೋಹಾಗ್ ಆಗಿದ್ದು ಆತ ಮುಸ್ಲಿಂ.
(ಈ ಸತ್ಯ ಪರಿಶೀಲನೆಯು ಹಿಂಸಾಚಾರದ ಅಂಶಗಳನ್ನು ಒಳಗೊಂಡಿದೆ. ಹೀಗಾಗಿ ಕೃತ್ಯದ ಫೋಟೋ ಅಥವಾ ವಿಡಿಯೋವನ್ನು ಇಲ್ಲಿ ಸೇರಿಸಿಲ್ಲ. ಇದು ಓದುಗರ ವಿವೇಚನೆಗೆ ಬಿಡಲಾಗಿದೆ.)
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಓರ್ವ ವ್ಯಕ್ತಿ ಅಸಾಯಕತೆಯಿಂದ ರಸ್ತೆಯ ಮೇಲೆ ಮಲಗಿರುವುದನ್ನು ಕಾಣಬಹುದು. ಹೀಗಿರುವಾಗ ಕೆಲ ವ್ಯಕ್ತಿಗಳು ಪಕ್ಕದಲ್ಲಿದ್ದ ದೊಡ್ಡ ಕಲ್ಲನ್ನು ಮೂರು-ನಾಲ್ಕು ಬಾರಿ ಆತನ ಮೇಲೆ ಸಾಯುವಂತೆ ಹಾಕುತ್ತಾರೆ. ಇದು ಬಾಂಗ್ಲಾದೇಶದಲ್ಲಿ ಹಿಂದೂಗಳ ಪರಿಸ್ಥಿತಿ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶ ಹಿಂದೂಗಳ ಪರಿಸ್ಥಿತಿ. ಎಚ್ಚರ ಹಿಂದುಗಳೇ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಮತ್ತೊಂದು ಹೇಳಿಕೆಯಲ್ಲಿ, ‘‘ಹಿಂದೂಗಳನ್ನು ಬಾಂಗ್ಲಾದೇಶದಲ್ಲಿ ಕೊಲ್ಲಲಾಗುತ್ತಿದೆ’’ ಎಂದು ಬರೆಯಲಾಗಿದೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿ ಲಾಲ್ ಚಂದ್ ಅಲಿಯಾಸ್ ಸೋಹಾಗ್ ಆಗಿದ್ದು ಆತ ಮುಸ್ಲಿಂ ಆಗಿದ್ದಾನೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊ ಪ್ರಮುಖ ಕೀಫ್ರೇಮುಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಇದೇ ವೈರಲ್ ವೀಡಿಯೊದ ದೃಶ್ಯಗಳನ್ನು ಹಂಚಿಕೊಂಡು ಹಲವು ಬಾಂಗ್ಲಾದೇಶಮಾಧ್ಯಮ ಸಂಸ್ಥೆಗಳು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದ ಸುದ್ದಿ ಸಿಕ್ಕಿದೆ. ಇದರಲ್ಲಿರುವ ಮಾಹಿತಿಯಪ್ರಕಾರ, ಈ ವೈರಲ್ ವೀಡಿಯೊ, 09 ಜುಲೈ 2025 ರಂದು, ಢಾಕಾದಲ್ಲಿನ ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಮಿಟ್ಫೋರ್ಡ್ ಆಸ್ಪತ್ರೆ) ಗೇಟ್ ನಂಬರ್ 3 ಬಳಿ ನಡೆದಿದೆ. ಲಾಲ್ ಚಂದ್ ಅಲಿಯಾಸ್ ಸೋಹಾಗ್ (39) ಎಂಬ ವ್ಯಕ್ತಿಯನ್ನು ಕೆಲವು ವ್ಯಕ್ತಿಗಳು ಇಟ್ಟಿಗೆಯಿಂದ ಹೊಡೆದು ಕೊಂದಿದ್ದಾರೆ ಎಂದು ಹೇಳಲಾಗಿದೆ.
ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ ಬಾಂಗ್ಲಾದ ಸ್ಥಳೀಯ ಮಾಧ್ಯಮ Prothomalo ಜುಲೈ 12 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿತು. ‘‘09 ಜುಲೈ 2025 ರಂದು, ಮಿಟ್ಫೋರ್ಡ್ ಆಸ್ಪತ್ರೆಯ ಬಳಿ ಸಾರ್ವಜನಿಕವಾಗಿ ಸ್ಕ್ರ್ಯಾಪ್ ವ್ಯಾಪಾರಿ ಲಾಲ್ ಚಂದ್ ಅಲಿಯಾಸ್ ಸೋಹಾಗ್ (39) ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು. ಅವರನ್ನು ಕೊಲ್ಲುವ ಮೊದಲು ದಾಳಿಕೋರರು ಇಟ್ಟಿಗೆಗಳು ಮತ್ತು ಕಲ್ಲುಗಳಿಂದ ಹೊಡೆದು, ಅವರ ತಲೆ ಮತ್ತು ದೇಹವನ್ನು ಪುಡಿಪುಡಿ ಮಾಡಿದರು. ಜುಬೋ ದಳ, ಛತ್ರ ದಳ ಮತ್ತು ಸ್ವೀಚ್ಛಸೇಬಕ್ ದಳದ ಸದಸ್ಯರು ಈ ದಾಳಿಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ. ಪ್ರಕರಣದ ತನಿಖಾಧಿಕಾರಿಗಳು ಹೇಳುವಂತೆ ಕೊಲೆಯ ಹಿಂದಿನ ಉದ್ದೇಶ, ವ್ಯವಹಾರ ವಿವಾದ ಮತ್ತು ವೈಯಕ್ತಿಕ ದ್ವೇಷದಿಂದ ಇದನ್ನು ಮಾಡಲಾಗಿದೆ. ಲಾಲ್ ಚಂದ್ ಒಂದು ಕಾಲದಲ್ಲಿ ಜುಬೋ ದಳದೊಂದಿಗೆ ಸಂಬಂಧ ಹೊಂದಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ’’ ಎಂಬ ಮಾಹಿತಿ ಇದರಲ್ಲಿದೆ.
11 ಜುಲೈ 2025 ರಂದು ಮಿಟ್ಫೋರ್ಡ್ ಆಸ್ಪತ್ರೆಯ ಬಳಿ ಸಾರ್ವಜನಿಕವಾಗಿ ಸ್ಕ್ರ್ಯಾಪ್ ವ್ಯಾಪಾರಿ ಲಾಲ್ ಚಂದ್ ಅಲಿಯಾಸ್ ಸೋಹಾಗ್ (39) ಅವರನ್ನು ಕ್ರೂರವಾಗಿ ಹತ್ಯೆ ನಡೆದ ಬಳಿಕ ಢಾಕಾ ಮೆಟ್ರೊಪಾಲಿಟನ್ ಪೊಲೀಸರು (DMP) ನಡೆಸಿದ ಪತ್ರಿಕೆ ಸಭೆಯಲ್ಲಿ, ಈ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು, ಮಹಮುದುಲ್, ತಾರಿಖ್‌ಗಳನ್ನು ಬಂಧಿಸಿದ್ದಾರೆ, ಹಾಗೆಯೇ ತಾರಿಖ್‌ನಿಂದ ಒಂದು ಪಿಸ್ಟಲ್ ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುವ ವರದಿಯನ್ನು ನೀವು ಇಲ್ಲಿ ನೋಡಬಹುದು.
"ಆರೋಪಿಗಳು ನನ್ನ ಚಿಕ್ಕಪ್ಪನಿಗೆ ಅಂಗಡಿ ಮುಚ್ಚುವಂತೆ ಅಥವಾ ಪ್ರತಿ ತಿಂಗಳು 2 ಲಕ್ಷ ಟಾಕಾ ಮತ್ತು ಅವರ ಆದಾಯದ ಒಂದು ಭಾಗವನ್ನು ನೀಡುವಂತೆ ಕೇಳಿದ್ದರು. ನನ್ನ ಚಿಕ್ಕಪ್ಪ ಒಪ್ಪಲಿಲ್ಲ, ಮತ್ತು ಇದಕ್ಕಾಗಿ ಅವರು ಅವರನ್ನು ತುಂಬಾ ಕ್ರೂರವಾಗಿ ಕೊಂದರು" ಎಂದು ಸೋಹಾಗ್ ಅವರ ಸೊಸೆ ಬಿಥಿ ಅಕ್ತರ್ ಹೇಳಿರುವುದನ್ನು ದಿ ಡೈಲಿ ಸ್ಟಾರ್ ಕೋಟ್ ಮಾಡಿದೆ.
TBS News ಜುಲೈ 11 ರಂದು ಪ್ರಕಟಿಸಿದ ಸುದ್ದಿಯಲ್ಲಿ, ‘‘ಸೋಹಾಗ್ ಕೆರಾನಿಗಂಜ್‌ನ ಪುರ್ಬೋ ನಮಬಾರಿ ಗ್ರಾಮದ ನಿವಾಸಿಯಾಗಿದ್ದು, ಹಳೆಯ ಢಾಕಾದ ರಾಣಿ ಘೋಷ್ ಲೇನ್‌ನಲ್ಲಿ ಹಲವು ವರ್ಷಗಳಿಂದ ಸ್ಕ್ರ್ಯಾಪ್ ವ್ಯವಹಾರ ನಡೆಸುತ್ತಿದ್ದರು. ಈ ಪ್ರಕರಣದಲ್ಲಿ ಕಾನೂನು ಜಾರಿ ಅಧಿಕಾರಿಗಳು ಇದುವರೆಗೆ ನಾಲ್ವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಮೋಹಿನ್ ಮತ್ತು ರಾಬಿನ್ ಅವರನ್ನು ಬಂಧಿಸಿದರೆ, ಕ್ಷಿಪ್ರ ಕಾರ್ಯಾಚರಣೆ ಬೆಟಾಲಿಯನ್ (RAB) ಅಲಂಗೀರ್ (28) ಮತ್ತು ಮೋನಿರ್ (32) ಅವರನ್ನು ಬಂಧಿಸಿತು’’ ಎಂದು ಹೇಳಲಾಗಿದೆ.
ಹುಡುಕಾಟದ ಸಮಯದಲ್ಲಿ ನಮಗೆ ಬಾಂಗ್ಲಾದೇಶ ಸರ್ಕಾರ (ಮುಖ್ಯ ಸಲಹೆಗಾರ) ಫ್ಯಾಕ್ಟ್ತಪಾಸಣೆ ವಿಭಾಗ, ಸಾವನ್ನಪ್ಪಿದ ವ್ಯಕ್ತಿ ಲಾಲ್ ಚಂದ್ ಅಲಿಯಾಸ್ ಸೋಹಾಗ್ ಹಿಂದೂ ಎಂದು ತಪ್ಪಾಗಿ ಭಾರತೀಯ ಹಲವು ಮಾಧ್ಯಮಗಳು ವರದಿ ಮಾಡಿವೆ ಎಂದು ಹೇಳುವ ಫೇಸ್ಬುಕ್ ಪೋಸ್ಟ್ ಸಿಕ್ಕಿದೆ. ‘‘ಲಾಲ್ ಚಂದ್ ಅಲಿಯಾಸ್ ಸೋಹಾಗ್ ಮುಸ್ಲಿಂ, ಆತನ ತಂದೆ-ತಾಯಿಯ ಹೆಸರುಗಳು ಎಂಡಿ ಅಯ್ಯುಬ್ ಅಲಿ, ಅಲಿಯಾ ಬೇಗಂ’’ ಎಂದು ಬಂಗ್ಲಾದೇಶ ಸರ್ಕಾರಿ ಫ್ಯಾಕ್ಟ್ ಚೆಕ್ ವಿಭಾಗ ಸ್ಪಷ್ಟಪಡಿಸಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿದೆ ಎಂದು ಬಿಂಬಿಸುತ್ತಿರು ವೈರಲ್ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.