ವಕ್ಫ್ (ತಿದ್ದುಪಡಿ) ಕಾಯ್ದೆ, 2025 ಜಾರಿಗೆ ಬಂದ ನಂತರ ಪಶ್ಚಿಮ ಬಂಗಾಳದಲ್ಲಿ, ಮುಖ್ಯವಾಗಿ ಮುರ್ಷಿದಾಬಾದ್ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಭುಗಿಲೆದ್ದ ಹಿಂಸಾಚಾರದ ನಡುವೆ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ವ್ಯಾಪಕವಾಗಿ ಹರಿದಾಡುತ್ತಿದೆ. ಭಾರತೀಯ ಸೇನಾ ಸಿಬ್ಬಂದಿ ಹಲವಾರು ವ್ಯಕ್ತಿಗಳನ್ನು ಬಂಧಿಸಿ ಮನೆಗಳ ಮೇಲೆ ದಾಳಿ ಮಾಡುತ್ತಿರುವುದನ್ನು ಈ ವೀಡಿಯೊದಲ್ಲಿ ತೋರಿಸಲಾಗಿದೆ, ಬಂಧಿತರು ಮುಸ್ಲಿಮರಾಗಿದ್ದು, ಇವರು ಈ ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಶ್ಚಿಮ ಬಂಗಾಳದಲ್ಲಿ ದಂಗೆ ಎಬ್ಬಿಸಿದ ಜಿಹಾದಿಗಳನ್ನು ಹುಡುಕಿ ಹುಡುಕಿ ಬಂಧಿಸುತ್ತಿರುವ ಭಾರತೀಯ ಸೇನೆ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಅದು ಅಕ್ಟೋಬರ್ 29, 2024 ರಂದು ಬಾಂಗ್ಲಾ ವಿಷನ್ ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ, ಬಾಂಗ್ಲಾದೇಶದ ಮೊಹಮ್ಮದ್‌ಪುರದಲ್ಲಿ ನಡೆದ ಬೃಹತ್ ಸೇನಾ ಕಾರ್ಯಾಚರಣೆಯ ವರದಿಯನ್ನು ಪ್ರಕಟಿಸಿರುವುದು ಎಂದು ತಿಳಿದುಬಂದಿದೆ.
ಅಕ್ಟೋಬರ್ 29, 2024 ರಂದು ಬಾಂಗ್ಲಾದೇಶದ ಪತ್ರಿಕೆ ದಿ ಬ್ಯುಸಿನೆಸ್ ಸ್ಟ್ಯಾಂಡರ್ಡ್ ಕೂಡ ಈ ಕುರಿತು ವೀಡಿಯೊದ ಸ್ಕ್ರೀನ್‌ಶಾಟ್‌ನೊಂದಿಗೆ ವರದಿ ಮಾಡಿರುವುದು ಸಿಕ್ಕಿದೆ.
ವರದಿಯ ಪ್ರಕಾರ, ಬಾಂಗ್ಲಾದೇಶ ಸೇನೆಯ 23 ನೇ ಪೂರ್ವ ಬಂಗಾಳ ರೆಜಿಮೆಂಟ್‌ನ ಡೇರಿಂಗ್ ಟೈಗರ್ಸ್ ಘಟಕವು ಢಾಕಾದ ಮೊಹಮ್ಮದ್‌ಪುರದ ಜಿನೀವಾ ಶಿಬಿರದಲ್ಲಿ ನಡೆಸಿದ ದಾಳಿಯ ಸಂದರ್ಭದಲ್ಲಿ ಏಳು ವ್ಯಕ್ತಿಗಳನ್ನು ಬಂಧಿಸಿ ಎರಡು ವಿದೇಶಿ ರಿವಾಲ್ವರ್‌ಗಳು ಮತ್ತು ಹಲವಾರು ಸ್ಥಳೀಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಗ್ಯಾಂಗ್ ನಾಯಕ ಬುನಿಯಾ ಸೊಹೆಲ್ ಶಿಬಿರದಲ್ಲಿ ಅಡಗಿಕೊಂಡಿದ್ದಾನೆ ಎಂಬ ಸುಳಿವಿನ ಆಧಾರದ ಮೇಲೆ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
ಇನ್ನೊಂದು ಮಾಧ್ಯಮ ಸಂಸ್ಥೆಯಾದ ಕಲ್ಬೆಲಾ ಕೂಡ ಅಕ್ಟೋಬರ್ 28, 2024 ರಂದು, 23 ನೇ ಪೂರ್ವ ಬಂಗಾಳ ರೆಜಿಮೆಂಟ್‌ನ ಒಂಬತ್ತು ತಂಡಗಳನ್ನು ಒಳಗೊಂಡ ಬಾಂಗ್ಲಾದೇಶ ಸೇನೆಯ ಡೇರಿಂಗ್ ಟೈಗರ್ಸ್ ಘಟಕವು ಢಾಕಾದ ಮೊಹಮ್ಮದ್‌ಪುರ ಪ್ರದೇಶದ ಜಿನೀವಾ ಶಿಬಿರದಲ್ಲಿ ದಾಳಿ ನಡೆಸಿತು ಎಂದು ವರದಿ ಮಾಡಿದೆ. ಈ ಕಾರ್ಯಾಚರಣೆಯ ವೇಳೆ ಮಾದಕವಸ್ತು ಕಳ್ಳಸಾಗಣೆದಾರ ಬುನಿಯಾ ಸೊಹೆಲ್‌ನನ್ನು ಬಂಧಿಸುವ ಗುರಿಯನ್ನು ಹೊಂದಿತ್ತು. ಸೊಹೆಲ್ ಸೆರೆಹಿಡಿಯುವಾಗ ತಪ್ಪಿಸಿಕೊಂಡಾಗ, ಅವನ ಏಳು ಸಹಚರರನ್ನು ಬಂಧಿಸಲಾಯಿತು. ದಾಳಿಯ ಸಮಯದಲ್ಲಿ ಪಡೆಗಳು ಎರಡು ಪಿಸ್ತೂಲ್‌ಗಳು, 20 ಸುತ್ತು ಮದ್ದುಗುಂಡುಗಳು ಮತ್ತು ಹಲವಾರು ಸ್ಥಳೀಯ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡವು ಎಂಬ ಮಾಹಿತಿ ಇದರಲ್ಲಿದೆ.
ಆದ್ದರಿಂದ, ಈ ವೀಡಿಯೊ ಪಶ್ಚಿಮ ಬಂಗಾಳದ್ದಾಗಿದೆ ಎಂಬ ಹೇಳಿಕೆ ಸುಳ್ಳು ಎಂದು ನಾವು ತೀರ್ಮಾನಿಸುತ್ತೇವೆ.