ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಜನವರಿ 1, 2026 ರಿಂದ 500 ಮತ್ತು 1000 ರೂಪಾಯಿಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಾಗುತ್ತದೆ, ನೋಟುಗಳಿಂದ ಗಾಂಧೀಜಿ ಫೋಟೋ ತೆಗೆದು ಹಾಕಲಾಗುತ್ತದೆ ಎಂದು ಹೇಳಲಾಗುತ್ತಿದೆ. 500 ರೂ. ನೋಟಿನಲ್ಲಿ ಸುಭಾಶ್ ಚಂದ್ರ ಬೋಸ್ ಫೋಟೋ ಮತ್ತು 1000 ರೂ. ನೋಟಿನ ಮೇಲೆ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಫೋಟೋವನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಅಪ್ಲೋಡ್ ಮಾಡಿ, ‘‘ಅಬ್ಬಬ್ಬಾ ಅಂತೂ ಇಂತೂ ಗಾಂಧಿಜೀ ಫೋಟೋ ತಗಿದ್ರಲ್ಲ ಅಷ್ಟು ಸಾಕು ಹೊಸ ನೋಟ್ನಲ್ಲಿ ಎಲ್ಲಾ ಸ್ವಾತಂತ್ಯ ಹೋರಾಟಗಾರರು. ಭಾರತದ ಹೊಸ 500 ಮತ್ತು 1000 ರೂ. ನೋಟುಗಳು ಜನವರಿ 1, 2026 ರಿಂದ ಜಾರಿಗೆ ಬರಲಿವೆ. ನೋಟುಗಳಿಂದ ಮಹಾತ್ಮ ಗಾಂಧಿಯವರ ಹೆಸರು ಮತ್ತು ಪೋಟೋವನ್ನು ತೆಗೆದುಹಾಕಲಾಗಿದೆ.’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಇದು ಸುಳ್ಳು ಎಂಬುದು ತಿಳುದುಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಅಂತಹ ಯಾವುದೇ ನೋಟನ್ನು ಬಿಡುಗಡೆ ಮಾಡಿಲ್ಲ. ನಮ್ಮ ತನಿಖೆಯಲ್ಲಿ ವೈರಲ್ ಪೋಸ್ಟ್ ನಕಲಿ ಎಂದು ಕಂಡುಬಂದಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಗೂಗಲ್ ನಲ್ಲಿ ಈ ಕುರಿತು ಸರ್ಚ್ ಮಾಡಿದ್ದೇವೆ. ಆದರೆ, ಆರ್‌ಬಿಐ ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಖಚಿತಪಡಿಸಲು ನಾವು ಒಂದೇ ಒಂದು ಸುದ್ದಿಯನ್ನು ನೋಡಿಲ್ಲ. ಆರ್‌ಬಿಐ ಅಥವಾ ಸರ್ಕಾರ 500 ಮತ್ತು 1000 ರೂ. ನೋಟುಗಳ ಬಿಡುಗಡೆ ಬಗ್ಗೆ ಮತ್ತು ನೋಟಿನಲ್ಲಿ ಗಾಂಧೀಜಿ ಫೋಟೋ ತೆಗೆದು ಹಾಕಿರುವ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ನೀಡಲಿಲ್ಲ.
ಬಳಿಕ ನಾವು ಆರ್ಬಿಐಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಿದ್ದೇವೆ. ಇಲ್ಲೂ 500, 1000 ಹೊಸ ನೋಟಿನ ಕುರಿತು ಯಾವುದೇ ಅಧಿಸೂಚನೆ ಅಥವಾ ಅಪ್‌ಡೇಟ್ ಕಾಣಿಸಲಿಲ್ಲ. ಆರ್‌ಬಿಐ ವೆಬ್‌ಸೈಟ್ ಪ್ರಕಾರ, ನವೆಂಬರ್ 8, 2016 ರಂದು ಆರ್‌ಬಿಐ 500, 1000 ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದ ಕುರಿತ ಪತ್ರಿಕಾ ಹೇಳಿಕೆ ಕಂಡುಬಂದಿದೆ. ಭಯೋತ್ಪಾದನಾ ಕೃತ್ಯಗಳಿಗೆ ಹಣವನ್ನು ಬಳಸುವುದು, ನಕಲಿ ನೋಟುಗಳ ಹಾವಳಿ ತಡೆಗಟ್ಟಲು ನೋಟುಗಳನ್ನು ಅಮಾನ್ಯ ಮಾಡಿದ್ದಾಗಿ ಹೇಳಿಕೆಯಲ್ಲಿ ಅದು ತಿಳಿಸಿತ್ತು.
ಹೀಗಾಗಿ ಹೊಸ 500 ಮತ್ತು 1000 ರೂ. ನೋಟುಗಳು ಬಿಡುಗಡೆ ಆಗುತ್ತಿವೆ ಮತ್ತು ಗಾಂಧೀಜಿ ಫೋಟೋವನ್ನು ತೆಗೆದು ಹಾಕಲಾಗುತ್ತದೆ ಎಂದು ವೈರಲ್ ಆಗುತ್ತಿರುವ ನೋಟುಗಳ ಫೋಟೋ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಅಂತಹ ಯಾವುದೇ ನಿರ್ಧಾರವನ್ನು ಸರ್ಕಾರ ಅಥವಾ ಆರ್‌ಬಿಐ ತೆಗೆದುಕೊಂಡಿಲ್ಲ.