ಇಸ್ರೇಲ್-ಇರಾನ್ ಸಂಘರ್ಷ ಒಂದು ವಾರದಿಂದ ನಡೆಯುತ್ತಿದೆ. ಎರಡೂ ದೇಶಗಳು ಕ್ಷಿಪಣಿ ದಾಳಿಗಳನ್ನು ನಡೆಸುತ್ತಲೇ ಇವೆ, ಪರಮಾಣು ರಿಯಾಕ್ಟರ್‌ಗಳು ಮತ್ತು ಆಸ್ಪತ್ರೆಗಳನ್ನು ನಾಶಪಡಿಸುತ್ತಿವೆ. ಈ ಸಂಘರ್ಷದ ಮಧ್ಯ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಒಬ್ಬ ವ್ಯಕ್ತಿಯನ್ನು ಕುರ್ಚಿಯಲ್ಲಿ ಕೂರಿಸಿ ಆತನನ್ನು ಬಳ್ಳಿಯಿಂದ ಕಟ್ಟಲಾಗಿದೆ. ಜೊತೆಗೆ ಆ ಬಳ್ಳಿಯನ್ನು ಅಲ್ಲೆ ಪಕ್ಕದಲ್ಲಿದ್ದ ಕ್ಷಿಪಣಿಗೂ ಸೇರಿಸಲಾಗಿದೆ.
ಈ ಫೋಟೋವನ್ನು ಹಂಚಿಕೊಂಡ ಫೇಸ್ಬುಕ್ ಬಳಕೆದಾರರು, ‘‘ಇರಾನ್ ತನ್ನ ನಾಗರಿಕರ ಮೇಲೆ ಹೇಗೆ ದಬ್ಬಾಳಿಕೆ ನಡೆಸುತ್ತಿದೆ ನೋಡಿ, ಮೊಸಾದ್ ಏಜೆಂಟ್ ಎಂಬ ಅನುಮಾನದ ಮೇಲೆ ಅದರ ಮುಸ್ಲಿಂ ನಾಗರಿಕರೊಬ್ಬರನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗೆ ಕಟ್ಟಿ ಸ್ಫೋಟಿಸಲಾಯಿತು’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಫೋಟೋ ನಿಜವಲ್ಲ, ಬದಲಾಗಿ ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ಫೋಟೋ ನೈಜ್ಯತೆಗೆ ದೂರವಾದಂತಿದೆ. ಬಳ್ಳಿಯಲ್ಲಿ ಕಟ್ಟಿರುವ ವ್ಯಕ್ತಿ ಯಾವುದೇ ನೋವು ಅನುಭವಿಸುದು ಅಥವಾ ಬಿಡಿಸಲು ಪ್ರಯತ್ನಿಸುವುದು ಕಾಣುವುದಿಲ್ಲ. ಅಲ್ಲದೆ ಆತನ ಒಂದು ಕೈ ಮಾತ್ರ ಕಾಣಿಸುತ್ತದೆ. ಇನ್ನು ಕಟ್ಟಿರುವ ಬಳ್ಳಿ ಕೂಡ ವಿರೂಪಗೊಂಡಂತೆ ಕಾಣುತ್ತದೆ.
ಹೀಗಾಗಿ ಈ ಫೋಟೋ ಕೃತಕ ಬುದ್ದಿಮತ್ತೆಯಿಂದ ರಚಿಸಿರಬಹುದು ಎಂಬ ಅನುಮಾನ ಹುಟ್ಟಿತು. ಹೀಗಾಗಿ ನಾವು ಎಐ ಪತ್ತೆ ಸಾಧನ WasitAI ಮತ್ತು IsitAI ಮೂಲಕ ಪರೀಕ್ಷೆ ನಡೆಸಿದ್ದೇವೆ. WasitAI ಈ ವೈರಲ್ ಫೋಟೋ ಖಚಿತವಾಗಿ ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ ಎಂದು ಹೇಳಿದೆ. ಹಾಗೆಯೆ IsitAI ಈ ಫೋಟೋ ಶೇ. 99 ರಷ್ಟು ಎಐಯಿಂದ ರಚಿತವಾಗಿದೆ ಎಂದು ಹೇಳಿದೆ.
ಹೀಗಾಗಿ ಮೊಸಾದ್ ಏಜೆಂಟ್ ಎಂದು ಇರಾನ್ ತನ್ನ ಮುಸ್ಲಿಂ ನಾಗರಿಕರೊಬ್ಬರನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗೆ ಕಟ್ಟಿ ಸ್ಫೋಟಿಸಿದೆ ಎಂದು ವೈರಲ್ ಆಗುತ್ತಿರುವ ಫೋಟೋ ಕೃತಕ ಬುದ್ದಿಮತ್ತೆಯಿಂದ ರಚಿತವಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.