Fact Check: ವಿಮಾನದಲ್ಲಿ ಮುಸ್ಲಿಮರಿಂದ ಹಿಂದೂ ಯುವಕನಿಗೆ ಹಲ್ಲೇ ಆಗಿರುವುದು ನಿಜವೇ?: ಇಲ್ಲಿದೆ ಸತ್ಯಾಂಶ

ಕೆಲವು ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುವಾಗ, ಮುಂಬೈಗೆ ಹೋಗುತ್ತಿದ್ದ ವಿಮಾನದಲ್ಲಿ ಕೆಲವು ಮುಸ್ಲಿಮರು ಹಿಂದೂ ಯುವಕನನ್ನು ಥಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ.

By Vinay Bhat  Published on  26 Oct 2024 10:12 AM GMT
Fact Check: ವಿಮಾನದಲ್ಲಿ ಮುಸ್ಲಿಮರಿಂದ ಹಿಂದೂ ಯುವಕನಿಗೆ ಹಲ್ಲೇ ಆಗಿರುವುದು ನಿಜವೇ?: ಇಲ್ಲಿದೆ ಸತ್ಯಾಂಶ
Claim: ಮುಂಬೈಗೆ ಹೋಗುತ್ತಿದ್ದ ವಿಮಾನದಲ್ಲಿ ಕೆಲವು ಮುಸ್ಲಿಮರು ಹಿಂದೂ ಯುವಕನನ್ನು ಥಳಿಸಿದ್ದಾರೆ.
Fact: ಬ್ಯಾಂಕಾಕ್-ಕೋಲ್ಕತ್ತಾ ವಿಮಾನದಲ್ಲಿ ನಡೆದ ಘಟನೆಯಾಗಿದೆ. ಹಲ್ಲೆ ನಡೆಸಿದ ಇಬ್ಬರೂ ಪ್ರಯಾಣಿಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರು.

ವಿಮಾನದ ಒಳಗಗಡೆ ಕೆಲವು ಪ್ರಯಾಣಿಕರ ನಡುವೆ ನಡೆದ ಜಗಳದ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತದೆ. ಇದರಲ್ಲಿ ಪ್ರಯಾಣಿಕರ ನಡುವೆ ಹೊಡೆದಾಟ ನಡೆದಿರುವುದು ಕಂಡು ಬಂದಿದೆ. ಕೆಲವು ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುವಾಗ, ಮುಂಬೈಗೆ ಹೋಗುತ್ತಿದ್ದ ವಿಮಾನದಲ್ಲಿ ಕೆಲವು ಮುಸ್ಲಿಮರು ಹಿಂದೂ ಯುವಕನನ್ನು ಥಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ.

ಫೇಸ್​ಬುಕ್ ಮತ್ತು ಎಕ್ಸ್ ಬಳಕೆದಾರರು ಈ ವೀಡಿಯೊವನ್ನು ಅಪ್ಲೋಡ್ ಮಾಡಿಕೊಂಡು, ‘‘ವಿಮಾನದಲ್ಲಿ ಮುಸ್ಲಿಂ ಜಿಹಾದಿಗಳು ಹಿಂದೂ ಯುವಕನ ಮೇಲೆ ಸಣ್ಣ ವಿಷಯಕ್ಕೆ ಅಟ್ಟಹಾಸ ಮೆರೆದಿದ್ದಾರೆ. ವಿಮಾನ ಮುಂಬೈ ಯಿಂದ ಹೊರಟಿತ್ತು. ಎಲ್ಲಾ ಮುಸಲ್ಮಾನ್ ಜಿಹಾದಿಗಳ ಬಂಧನ ವಾಗಿದೆ. ಇಲ್ಲಿ ಪ್ರಶ್ನೆ ಉದ್ಭವ ವಾಗೋದು ವಿಮಾನ ದಲ್ಲಿನ ಮಿಕ್ಕ ಹಿಂದೂಗಳು ಮೂಕ ಪ್ರೇಕ್ಷಕ. ಬಹುಸಂಖ್ಯಾತ ಹಿಂದೂಗಳು ಅಲ್ಪ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ, ಈ ಘಟನೆ ಬ್ಯಾಂಕಾಕ್-ಕೋಲ್ಕತಾ ವಿಮಾನದಲ್ಲಿ ನಡೆದ ಪ್ರಯಾಣಿಕರ ನಡುವಿನ ಜಗಳ ಎಂದು ತಿಳಿದುಬಂದಿದೆ. ಹಾಗೆಯೆ ಇದರಲ್ಲಿ ಯಾವುದೇ ಕೋಮಿಕೋನವಿಲ್ಲ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಜನವರಿ 14, 2022ರ ಟೈಮ್ಸ್ ಆಫ್‌ ಇಂಡಿಯಾ ಈ ಕುರಿತು ವರದಿ ಮಾಡಿರುವುದು ನಮಗೆ ಸಿಕ್ಕಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಟೇಕಾಫ್‌ ವೇಳೆ ಕ್ಯಾಬಿನ್‌ ಸಿಬ್ಬಂದಿ ಅವರ ಸುರಕ್ಷತಾ ಮಾನದಂಡಗಳನ್ನು ಪಾಲಿಸದ ಪ್ರಯಾಣಿಕರೊಬ್ಬರು ತಮ್ಮ ಸೀಟನ್ನು ಮುಂಬದಿಗೆ ಬರುವಂತೆ ಮಾಡಿರಲಿಲ್ಲ. ತಾವು ಬೆನ್ನು ನೋವಿನಿಂದ ಬಳಲುತ್ತಿರುವುದಾಗಿ ಹೇಳಿದ್ದರು. ಇದು ಸಿಬ್ಬಂದಿಯೊಂದಿಗೆ ಮಾತಿಗೆ ಕಾರಣವಾಗಿದ್ದು, ಈ ವೇಳೆ ಇತರ ಪ್ರಯಾಣಿಕರು ಅವರ ಮೇಲೆ ದಾಳಿ ಮಾಡಿದ್ದಾರೆ. ವೀಡಿಯೊದಲ್ಲಿ ಹಿಂದಿನ ಸೀಟಿನ ಪ್ರಯಾಣಿಕರು ಮುಂದಿನ ಸೀಟಿನ ವ್ಯಕ್ತಿಯೊಂದಿಗೆ ವಾದಿಸಿ ಅವರಿಗೆ ಹೊಡೆಯುವುದು ಮತ್ತು ಅವರ ಕನ್ನಡಕ ತೆಗೆದು ಪದೇ ಪದೇ ಮುಖಕ್ಕೆ ಹೊಡೆಯುವುದು ಕಾಣಬಹುದು’’ ಎಂದಿದೆ.

ಹಾಗೆಯೆ ದಿ ಹಿಂದೂ ಈ ಘಟನೆ ಬಗ್ಗೆ ಸಂಪೂರ್ಣ ವರದಿ ಮಾಡಿದ್ದು, ‘‘2022ರ ಡಿಸೆಂಬರ್ 26 ರಂದು ಬ್ಯಾಂಕಾಕ್‌ನಿಂದ ಕೋಲ್ಕತ್ತಾಗೆ ಹೊರಟ ಥಾಯ್ ಸ್ಮೈಲ್ ಏರ್‌ವೇಸ್ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. 37C ಸೀಟಿನಲ್ಲಿ ಕುಳಿತಿದ್ದ ಅಮಿದ್ ಮೊಹಮ್ಮದ್ ಹುಸೇನ್ ಎಂಬಾತನಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದರಿಂದ ತಮ್ಮ ಆಸನವನ್ನು ನೇರಗೊಳಿಸುವುದು ಮತ್ತು ಸೀಟ್‌ಬೆಲ್ಟ್ ಧರಿಸುವುದು ಮುಂತಾದ ಸುರಕ್ಷತಾ ಕ್ರಮಗಳನ್ನು ಪಾಲಿಸಲು ನಿರಾಕರಿಸಿದ್ದ. ಆಗ ವಿಮಾನದ ಸಿಬ್ಬಂದಿ ಎಷ್ಟೇ ಮನವಿ ಮಾಡಿಕೊಂಡರೂ ಮೊಹಮ್ಮದ್ ಹುಸೇನ್ ಸಹಕರಿಸಲಿಲ್ಲ. ಇದನ್ನು ವೀಕ್ಷಿಸುತ್ತಿದ್ದ ವಿಮಾನದ ಪ್ರಯಾಣಿಕರಲ್ಲಿ ಎಸ್.ಕೆ.ಅಜರುದ್ದೀನ್ ಎಂಬಾತ ಉದ್ರೇಕಗೊಂಡು ಹುಸೇನ್‌ನಿಗೆ ಕಪಾಳಮೋಕ್ಷ ಮಾಡುವ ಮೂಲಕ ಜಗಳಕ್ಕೆ ಮುಂದಾದ. ಇನ್ನೂ ಈ ವಾಗ್ವಾದದಲ್ಲಿ ಇತರ ಹಲವಾರು ಪ್ರಯಾಣಿಕರು ಸೇರಿಕೊಂಡಿದ್ದರು. ಏರ್‌ಲೈನ್ಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ತಾರಕಕ್ಕೇರಿದ ಪರಿಸ್ಥಿತಿಯನ್ನು ಶಾಂತಗೊಳಿಸಲು ಎಷ್ಟೇ ಪ್ರಯತ್ನ ಪಟ್ಟರೂ ಯಾರೊಬ್ಬರೂ ಸಹಕರಿಸಲಿಲ್ಲ. ಜಗಳದಲ್ಲಿ ಪಾಲ್ಗೊಂಡ ಪ್ರಯಾಣಿಕರ ವಿರುದ್ಧ ದೂರು ದಾಖಲಿಸಲಾಯಿತು’’ ಎಂದು ಬರೆಯಲಾಗಿದೆ. ಅಲ್ಲದೆ ಮಾಧ್ಯಮ ವರದಿಗಳಲ್ಲಿ ಯಾವುದೇ ಕೋಮು ಗಲಾಟೆಯ ಉದ್ದೇಶದ ಉಲ್ಲೇಖವಿಲ್ಲ.

ಈ ಪ್ರಕರಣದ ಕುರಿತ ಇನ್ನಷ್ಟು ಮಾಧ್ಯಮ ವರದಿಗಳನ್ನು ಇಲ್ಲಿ, ಇಲ್ಲಿ, ನೋಡಬಹುದು.

ಹೀಗಾಗಿ ವಿಮಾನದಲ್ಲಿ ಹಲ್ಲೆ ಆಗಿರುವ ಈ ವೀಡಿಯೊ 26 ಡಿಸೆಂಬರ್ 2022 ರಂದು ಬ್ಯಾಂಕಾಕ್-ಕೋಲ್ಕತ್ತಾ ವಿಮಾನದಲ್ಲಿ ನಡೆದ ಘಟನೆಯಾಗಿದೆ. ಹಲ್ಲೆ ನಡೆಸಿದ ಇಬ್ಬರೂ ಪ್ರಯಾಣಿಕರು ಒಂದೇ ಸಮುದಾಯಕ್ಕೆ ಸೇರಿದವರು. ಈ ಘಟನೆಯಲ್ಲಿ ಯಾವುದೇ ಕೋಮು ಕೋನವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಮುಂಬೈಗೆ ಹೋಗುತ್ತಿದ್ದ ವಿಮಾನದಲ್ಲಿ ಕೆಲವು ಮುಸ್ಲಿಮರು ಹಿಂದೂ ಯುವಕನನ್ನು ಥಳಿಸಿದ್ದಾರೆ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ಬ್ಯಾಂಕಾಕ್-ಕೋಲ್ಕತ್ತಾ ವಿಮಾನದಲ್ಲಿ ನಡೆದ ಘಟನೆಯಾಗಿದೆ. ಹಲ್ಲೆ ನಡೆಸಿದ ಇಬ್ಬರೂ ಪ್ರಯಾಣಿಕರು ಮುಸ್ಲಿಂ ಸಮುದಾಯಕ್ಕೆ ಸೇರಿದವರು.
Next Story