ದೇಶದ್ರೋಹದ ಪ್ರಕರಣದಲ್ಲಿ ಬಾಂಗ್ಲಾದೇಶದ ಹಿಂದೂ ಆಧ್ಯಾತ್ಮಿಕ ನಾಯಕ ಚಿನ್ಮೋಯ್ ಕೃಷ್ಣ ದಾಸ್ ಬಂಧನದ ನಂತರ ಬಾಂಗ್ಲಾದೇಶ ಮತ್ತೊಮ್ಮೆ ನಡುಗಿದೆ. ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಚಿತ್ತಗಾಂಗ್ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆವರಣದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಒಬ್ಬ ವಕೀಲರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಏತನ್ಮಧ್ಯೆ, ಮೃತ ವಕೀಲರು ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಪರ ವಾದಿಸುತ್ತಿದ್ದರು ಮತ್ತು ಅವರು ಮುಸ್ಲಿಂ ಎಂದು ಹೇಳುವ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸುದೀರ್ಘ ಪೋಸ್ಟ್ ಅನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಕನ್ನಡ ದುನಿಯಾ ಸೇರಿದಂತೆ ಅನೇಕ ಸುದ್ದಿವಾಹಿನಿಗಳು ಹಿಂದೂ ಅರ್ಚಕರ ಪರ ವಾದಿಸುತ್ತಿದ್ದ ವಕೀಲರು ಘರ್ಷಣೆಯಲ್ಲಿ ಕೊಲ್ಲಲ್ಪಟ್ಟರು ಎಂದು ವರದಿ ಮಾಡಿವೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಪೋಸ್ಟ್ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ವಕೀಲರು ಚಿನ್ಮೋಯ್ ದಾಸ್ ಅವರ ಪರವಾಗಿ ವಕಾಲತ್ತು ವಹಿಸಿದವರಲ್ಲ ಎಂಬುದು ತಿಳಿದುಬಂದಿದೆ. ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ಗೂಗಲ್‌ನಲ್ಲಿ ‘ಇಸ್ಕಾನ್, ಚಿನ್ಮೋಯ್ ದಾಸ್, ವಕೀಲರು, ಕೊಲೆ’ ಕೀವರ್ಡ್ ಅನ್ನು ಟೈಪ್ ಮಾಡಿ ಹುಡುಕಿದ್ದೇವೆ. ಆಗ ಇದಕ್ಕೆ ಸಂಬಂಧಿಸಿದ ಅನೇಕ ಸುದ್ದಿ ಕಂಡುಬಂತು. ಇದರಲ್ಲಿ ನಾವು ಭಾರತೀಯ ಮಾಧ್ಯಮಗಳಲ್ಲಿನ ಸುದ್ದಿಗಳನ್ನು ನಿರ್ಲಕ್ಷಿಸಿ, ಬಾಂಗ್ಲಾದೇಶದ ಮಾಧ್ಯಮಗಳಲ್ಲಿನ ಸುದ್ದಿಗಳನ್ನು ನೋಡಿದ್ದೇವೆ.
ಆಗ ಬಾಂಗ್ಲಾದೇಶದ ಪ್ರಮುಖ ಸುದ್ದಿ ವೆಬ್ಸೈಟ್ ಪ್ರೋಥೋಮ್ ಅಲೋದಲ್ಲಿ ಪ್ರಕಟವಾದ ನವೆಂಬರ್ 26 ರ ಸುದ್ದಿ ವರದಿಯು ಸಿಕ್ಕಿದೆ. ಇದರಲ್ಲಿ ಮೃತ ವಕೀಲ ಸೈಫುಲ್ ಇಸ್ಲಾಮ್ ಅಲಿಫ್ ಅವರನ್ನು ಸಹಾಯಕ ಸಾರ್ವಜನಿಕ ಅಭಿಯೋಜಕ ಎಂದು ಗುರುತಿಸಿದೆ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಸೈಫುಲ್ ಇಸ್ಲಾಮ್ ಹತ್ಯೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.
ಹೆಚ್ಚಿನ ಹುಡುಕಾಟ ನಡೆಸಿದಾಗ, ಬಾಂಗ್ಲಾದೇಶ ಸರ್ಕಾರದ ಫ್ಯಾಕ್ಟ್ ಚೆಕ್ ಸಂಸ್ಥೆ CA ಪ್ರೆಸ್ ವಿಂಗ್ ಫ್ಯಾಕ್ಟ್ಸ್ ಪ್ರಕಟಿಸಿದ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ರಿಪಬ್ಲಿಕ್ ಪ್ರಕಟಿಸಿದ ಸುದ್ದಿಯನ್ನು ನಕಲಿ ಎಂಬ ಹಣೆಪಟ್ಟಿಯೊಂದಿಗೆ ಪೋಸ್ಟ್ ಮಾಡಲಾಗಿದೆ. ಪೋಸ್ಟ್‌ನಲ್ಲಿ, ಚಿನ್ಮೋಯ್ ಕೃಷ್ಣ ದಾಸ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಸೈಬುಲ್ ಇಸ್ಲಾಂ ಅಲಿಬ್ ಅವರನ್ನು ಕೊಲ್ಲಲಾಗಿದೆ ಎಂದು ಕೆಲವು ಭಾರತೀಯ ಮಾಧ್ಯಮಗಳು ವರದಿ ಮಾಡಿವೆ. ಈ ಮಾಹಿತಿ ಸಂಪೂರ್ಣ ಸುಳ್ಳು, ಸುಳ್ಳು ಸುದ್ದಿ ಎಂದು ಹೇಳಿದೆ.
‘‘ಇಂದು ಛತ್ತಗ್ರಾಮದಲ್ಲಿ ಬರ್ಬರವಾಗಿ ಹತ್ಯೆಯಾದ ವಕೀಲ ಸೈಫುಲ್ ಇಸ್ಲಾಂ ಅಲಿಫ್ ಅವರು ಚಿನ್ಮೋಯ್ ಕೃಷ್ಣ ದಾಸ್ ಅವರನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಕೆಲವು ಭಾರತೀಯ ಮಾಧ್ಯಮಗಳು ಹೇಳುತ್ತಿವೆ. ಈ ಹಕ್ಕು ಸುಳ್ಳು ಮತ್ತು ದುರುದ್ದೇಶಪೂರಿತವಾಗಿ ಹರಡಲಾಗುತ್ತಿದೆ. ಚಿನ್ಮೋಯ್ ಕೃಷ್ಣ ದಾಸ್ ಅವರು ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ ವಕಾಲತ್ತಿನಲ್ಲಿ ವಕೀಲ ಸುಬಾಶಿಶ್ ಶರ್ಮಾ ಅವರನ್ನು ವಕೀಲರು ಎಂದು ಹೇಳಲಾಗಿದೆ. ಯಾವುದೇ ಪ್ರಚೋದನಕಾರಿ, ಸುಳ್ಳು ವರದಿಯಿಂದ ದೂರವಿರುವಂತೆ ನಾವು ಪ್ರತಿಯೊಬ್ಬರನ್ನು ವಿನಂತಿಸುತ್ತೇವೆ’’ ಎಂದು ಪೋಸ್ಟ್ ಹೇಳಿದೆ.
ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾದ ವಕಾಲತ್ತಿನಲ್ಲಿ (ಕಾನೂನು ದಾಖಲೆ) ಚಿನ್ಮೋಯ್ ಕೃಷ್ಣ ದಾಸ್ ಅವರ ವಕೀಲ ಸುಬಾಸಿಶ್ ಶರ್ಮಾ ಎಂದು ಹೆಸರಿಸಲಾಗಿದೆ ಎಂದು CA ಪ್ರೆಸ್ ವಿಂಗ್ ಫ್ಯಾಕ್ಟ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ಪ್ರತಿಯನ್ನೂ ಪೋಸ್ಟ್ ಮಾಡಿದೆ.
ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಅರ್ಚಕ ಚಿನ್ಮೋಯ್ ಕೃಷ್ಣ ದಾಸ್ ಪರ ವಕೀಲರನ್ನು ಬಾಂಗ್ಲಾದೇಶದಲ್ಲಿ ಕೊಲ್ಲಲಾಗಿದೆ ಎಂಬ ವರದಿ ಸುಳ್ಳು ಎಂದು ನ್ಯೂಸ್ ಮೀಟರ್ ಖಚಿತವಾಗಿ ಹೇಳುತ್ತದೆ.