ಪಾಕಿಸ್ತಾನಿ ಹುಡುಗ ಮತ್ತು ಆತನ ತಾಯಿಯನ್ನು ಒಳಗೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರ ಸಂಬಂಧದ ಬಗ್ಗೆ ಅನೇಕ ಊಹಾಪೋಹಗಳು ಹಬ್ಬಿವೆ. 18 ವರ್ಷಗಳ ಕಾಲ ತನ್ನನ್ನು ಬೆಳೆಸಿದ ನಂತರ ಪಾಕಿಸ್ತಾನದಲ್ಲಿ ಮಗ ತನ್ನ ತಾಯಿಯನ್ನು ಮದುವೆಯಾಗಿದ್ದಾನೆ ಎಂಬ ಹೇಳಿಕೆಯೊಂದಿಗೆ ಅನೇಕರು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ವೀಡಿಯೊವನ್ನು ಹಂಚಿಕೊಂಡು, ‘‘ಪಾಕಿಸ್ತಾನದಲ್ಲಿ ತಮ್ಮ ಸಾಂಪ್ರದಾಯದ ಪ್ರಕಾರ ಸ್ವಂತ ತಾಯಿ -ಯನ್ನೇ ಮದುವೆ ಮಾಡಿಕೊಂಡ ಮಗ..!’’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಕನ್ನಡ ಸುದ್ದಿ ಮಾಧ್ಯಮ ಝೀ ಕನ್ನಡ ನ್ಯೂಸ್ ಕೂಡ ‘‘ಹೀಗೂ ಉಂಟು… ಹೆತ್ತ ತಾಯಿಯನ್ನೇ ಮದುವೆಯಾದ ಮಗ: ಇದು ವಿಚಿತ್ರವೋ, ವಿನಾಶವೋ… ಛೇ!!!’’ ಎಂಬ ಶೀರ್ಷಿಕೆಯೊಂದಿಗೆ ಈ ಕುರಿತು ಸುದ್ದಿ ಪ್ರಕಟಿಸಿದೆ.
Fact Check:
ನ್ಯೂಸ್ ಮೀಟರ್ ಹಕ್ಕು ಸುಳ್ಳು ಎಂದು ಕಂಡುಹಿಡಿದಿದೆ. ಇಲ್ಲಿ ಹುಡುಗ ತನ್ನ ತಾಯಿಯನ್ನು ಮದುವೆಯಾಗಲಿಲ್ಲ, ಬದಲಾಗಿ ಆತ ತನ್ನ ತಾಯಿಯ ಎರಡನೇ ಮದುವೆಗೆ ವ್ಯವಸ್ಥೆ ಮಾಡಿದ್ದಾನೆ.
ನಿಜಾಂಶವನ್ನು ತಿಳಿಯಲು ಕೀವರ್ಡ್ ಹುಡುಕಾಟ ನಡೆಸಿದಾಗ, ಟಿವಿ9 ಕನ್ನಡ ಈ ಘಟನೆಯ ಡಿಸೆಂಬರ್ 31, 2024 ರಂದು ‘‘ಒಂಟಿಯಾಗಿದ್ದ ತಾಯಿಗೆ ಎರಡನೇ ಮದುವೆ ಮಾಡಿಸಿದ ಮಗ; ಭಾವನಾತ್ಮಕ ವಿಡಿಯೋ ವೈರಲ್’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ.
ವರದಿಯ ಪ್ರಕಾರ, ‘‘ಪಾಕಿಸ್ತಾನದ ಯುವಕ ಅಬ್ದುಲ್ ಅಹದ್ ಎಂಬಾತ ತನ್ನ ತಾಯಿಗೆ ಎರಡನೇ ಮದುವೆ ಮಾಡಿಸುವ ಮೂಲಕ ಸುದ್ದಿಯಲ್ಲಿದ್ದಾನೆ. ಕಳೆದ 18 ವರ್ಷಗಳಿಂದ ನನ್ನ ಯೋಗ್ಯತೆಗೆ ಅನುಗುಣವಾಗಿ ಅಮ್ಮನಿಗೆ ವಿಶೇಷ ಜೀವನವನ್ನು ನೀಡಲು ಪ್ರಯತ್ನಿಸಿದ್ದೇನೆ. ಆಕೆ ನಮಗಾಗಿ ತನ್ನ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾಳೆ. ಅವಳು ಕೂಡಾ ಸ್ವಂತ ಶಾಂತಿಯುತ ಜೀವನವನ್ನು ನಡೆಸಲು ಅರ್ಹಳು, ಆಕೆಗೂ ಜೀವನ ಮತ್ತು ಪ್ರೀತಿಯಲ್ಲಿ ಎರಡನೇ ಅವಕಾಶವನ್ನು ಪಡೆಯುವ ಹಕ್ಕಿದೆ ಎನ್ನುತ್ತಾ ತನ್ನ ತಾಯಿಯ ಖುಷಿಗಾಗಿ ಅಹದ್ ಅಮ್ಮನಿಗೆ ಎರಡನೇ ಮದುವೆಯನ್ನು ಮಾಡಿಸಿದ್ದಾನೆ’’ ಎಂದು ಬರೆಯಲಾಗಿದೆ.
ಇಂಡಿಯಾ ಟುಡೆಯಲ್ಲಿ ಪ್ರಕಟವಾದ ಇದೇ ರೀತಿಯ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ.
ಈ ಮಾಹಿತಿಯನ್ನು ಬಳಸಿಕೊಂಡು, ನಾವು ಅಬ್ದುಲ್ ಅಹದ್ ಎಂಬ ವ್ಯಕ್ತಿಯ ಇನ್ಸ್ಟಾಗ್ರಾಮ್ಖಾತೆಯನ್ನು ಕಂಡುಕೊಂಡಿದ್ದೇವೆ. ಡಿಸೆಂಬರ್ 18, 2024 ರಂದು ಪೋಸ್ಟ್ ಮಾಡಲಾದ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ವಿಡಿಯೋದಲ್ಲಿ, ಅವರು ತಮ್ಮ ತಾಯಿಯೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ ಮತ್ತು ಅವರ ತಾಯಿ 18 ವರ್ಷಗಳ ಕಾಲ ಮಕ್ಕಳನ್ನು ಹೇಗೆ ನೋಡಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ನಮಗಾಗಿ ತನ್ನ ಸಂತೋಷವನ್ನು ಸಹ ಆಕೆ ತ್ಯಾಗ ಮಾಡಿದ್ದಾಳೆ. ಆದ್ದರಿಂದ ತನ್ನ ತಾಯಿ ಇನ್ನಾದರು ಶಾಂತಿಯುತ ಮತ್ತು ಪ್ರೀತಿಯ ಜೀವನವನ್ನು ಹೊಂದಬೇಕೆಂದು ನಾನು ಬಯಸುತ್ತೇನೆ ಎಂದು ಅಬ್ದುಲ್ ಹೇಳಿದರು. ಇದೇ ಕಾರಣಕ್ಕೆ ಅಬ್ದುಲ್ 2ನೇ ಮದುವೆ ಮಾಡಲು ನಿರ್ಧರಿಸಿದ್ದಾನೆ ಎಂದು ಹೇಳಿದ್ದಾರೆ.
ಇನ್ನು ಡಿಸೆಂಬರ್ 20, 2024 ರಂದು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೈರಲ್ ಕ್ಲೈಮ್‌ನೊಂದಿಗೆ ಹಂಚಿಕೊಂಡಿರುವ ಫೋಟೋವನ್ನು ಸಹ ನಾವು ಕಂಡುಕೊಂಡಿದ್ದೇವೆ.
ಹೀಗಾಗಿ ಪಾಕಿಸ್ತಾನಿ ಹುಡುಗನೊಬ್ಬ ತನ್ನ ತಾಯಿಯನ್ನು ಮದುವೆಯಾಗುತ್ತಿರುವುದನ್ನು ವೀಡಿಯೊದಲ್ಲಿ ತೋರಿಸಲಾಗಿದೆ ಎಂಬ ವೈರಲ್ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.