Fact Check: ಹಿಜಾಬ್ ಧರಿಸಿಲ್ಲವೆಂದು ಅಮೆರಿಕಾ ಮಹಿಳೆಗೆ ಬಾಂಗ್ಲಾದೇಶದಲ್ಲಿ ಕಿರುಕುಳ ನೀಡಿದ್ದು ನಿಜವೇ?: ಇಲ್ಲಿದೆ ಸತ್ಯಾಂಶ
ವಿದೇಶಿ ಮಹಿಳೆಗೆ ಬಾಂಗ್ಲಾದೇಶದ ಪ್ರಜೆಗಳು ಕಿರುಕುಳ ನೀಡಿದ್ದಾರೆ ಎನ್ನಲಾಗುತ್ತಿರುವ ವೀಡಿಯೊ ಒಂದು ಎಲ್ಲೆಡೆ ಹರಿದಾಡುತ್ತಿದೆ.
By Vinay Bhat Published on 1 Oct 2024 2:33 PM ISTClaim: ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಅಮೆರಿಕಾ ಮಹಿಳೆಗೆ ಬಾಂಗ್ಲಾದೇಶದಲ್ಲಿ ಕಿರುಕುಳ ನೀಡಲಾಗಿದೆ.
Fact: ಶೇಖ್ ಹಸೀನಾ ಅವರ ಹುಟ್ಟುಹಬ್ಬ ಆಚರಿಸಿದ್ದಕ್ಕಾಗಿ ಬಾಂಗ್ಲಾದೇಶಿ ನಟಿ ಮಿಶ್ತಿ ಸುಬಾಸ್ ಅವರಿಗೆ ಅಲ್ಲಿನ ಕೆಲ ಯುವಕರು ಕಿರುಕುಳ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ಪ್ರತಿಭಟನೆ, ಹಿಂಸಾಚಾರ, ಹಿಂದೂಗಳ ಮೇಲಿನ ಹಲ್ಲೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ವೈರಲ್ ಆಗುತ್ತಿವೆ. ಇದೀಗ ವಿದೇಶಿ ಮಹಿಳೆಗೆ ಬಾಂಗ್ಲಾದೇಶದ ಪ್ರಜೆಗಳು ಕಿರುಕುಳ ನೀಡಿದ್ದಾರೆ ಎನ್ನಲಾಗುತ್ತಿರುವ ವೀಡಿಯೊ ಒಂದು ಎಲ್ಲೆಡೆ ಹರಿದಾಡುತ್ತಿದೆ. ಈ ವೀಡಿಯೊದಲ್ಲಿ ಮಹಿಳೆಯೊಬ್ಬರು ಸೈಕಲ್ ಗಾಡಿಯಲ್ಲಿ ತೆರಳುತ್ತಿರುವಾಗ ಓರ್ವ ಯುವಕ ಹೊಡೆಯಲು ಮುಂದಾಗುತ್ತಾನೆ, ಬಳಿಕ ಮತ್ತೋರ್ವ ಯುವಕ ಗಾಡಿಯ ಹಿಂಭಾಗಕ್ಕೆ ಕೈಯಿಂದ ಒದೆಯುತ್ತಾನೆ. ಆಗ ಮಹಿಳೆ ಗಾಡಿಯಿಂದ ಇಳಿದು ತೆರುಳಿದ್ದಾರೆ.
ಸಾಮಾಜಿಕ ಮಾಧ್ಯಮ ಫೇಸ್ಬುಕ್ನಲ್ಲಿಬಳಕೆದಾರರೊಬ್ಬರು ಅಕ್ಟೋಬರ್ 1, 2024 ರಂದು ಈ ವೀಡಿಯೊ ಹಂಚಿಕೊಂಡಿದ್ದು, ‘‘ಬಾಂಗ್ಲಾದೇಶದಲ್ಲಿ ವಿದೇಶಿಗರಿಗೆ ಕಿರುಕುಳ ನೋಡಿ. ಇನ್ನೂ ಅಪ್ರಾಪ್ತ ಬಾಲಕರು ಅವರು.. ಇನ್ಯಾವ ಶಿಕ್ಷಣ, ಸಂಸ್ಕಾರ, ನೀತಿ, ಶಿಸ್ತಿನ ವಿದ್ಯೆಯನ್ನು ಪಡೆದಿರಬಹುದು.’’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಮತ್ತೋರ್ವ ಎಕ್ಸ್ ಬಳಕೆದಾರ ಇದೇ ವೀಡಿಯೊ ಹಂಚಿಕೊಂಡು ‘‘ಹೊಸ ಬಾಂಗ್ಲಾದೇಶ; ಬಾಂಗ್ಲಾದೇಶದಲ್ಲಿ ಹಿಜಾಬ್ ಧರಿಸದಿದ್ದಕ್ಕಾಗಿ ಅಮೆರಿಕದ ಮಹಿಳೆಯೊಬ್ಬರಿಗೆ ಬಾಂಗ್ಲಾದೇಶಿಗಳು ಕಿರುಕುಳ ನೀಡಿದ್ದಾರೆ. ಇದು ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ನೇತೃತ್ವದಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದೆ’’ ಎಂದು ಹೇಳಿಕೊಂಡಿದ್ದಾರೆ.
New Bangladesh; An American woman is heckled and harassed in #Bangladesh by Bangladeshis for not wearing Hijab.Bangladesh under the leadership of Nobel Laureate Mohammed @Yunus_Centre.pic.twitter.com/MQ1V2OLoFm
— Kanwaljit Arora (@mekarora) September 30, 2024
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಹಿಜಾಬ್ ಧರಿಸಿಲ್ಲವೆಂದು ಅಮೆರಿಕಾದ ಮಹಿಳೆಗೆ ಬಾಂಗ್ಲಾದೇಶದಲ್ಲಿ ಕಿರುಕುಳ ನೀಡಲಾಗಿಲ್ಲ. ಈ ವೀಡಿಯೊದಲ್ಲಿ ಇರುವುದು ಬಾಂಗ್ಲಾದೇಶದ ನಟಿ, ಶೇಖ್ ಹಸೀನಾ ಅವರ ಬೆಂಬಲಿಗ ಮಿಶ್ತಿ ಸುಬಾಸ್ ಎಂಬವರು.
ನಿಜಾಂಶವನ್ನು ತಿಳಿಯಲು ನಾವು ಗೂಗಲ್ನಲ್ಲಿ ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದೆವು. ಆಗ ವೈರಲ್ ವೀಡಿಯೊಕ್ಕೆ ಸಂಬಂಧಿಸಿದ ಕೆಲವು ವರದಿಗಳನ್ನು ಬಾಂಗ್ಲಾದೇಶ ಮಾಧ್ಯಮ ಪ್ರಕಟಿಸಿರುವುದು ಕಂಡುಬಂದಿದೆ. The Daily Inqilab ವೆಬ್ಸೈಟ್ನಲ್ಲಿ ‘ಶೇಖ್ ಹಸೀನಾ ಹುಟ್ಟುಹಬ್ಬಕ್ಕೆ TSC ಯಲ್ಲಿ ನಟಿ ಕೇಕ್ ಕತ್ತರಿಸಲು ಬಂದಿದ್ದಕ್ಕೆ ನೆಟ್ಟಿಗರ ಕೋಪ’ ಎಂಬ ಹೆಡ್ಲೈನ್ನೊಂದಿಗೆ ಸೆಪ್ಟೆಂಬರ್ 30, 2024 ರಂದು ಸುದ್ದಿ ಪ್ರಕಟವಾಗಿದೆ.
ವರದಿಯಲ್ಲಿ ಏನಿದೆ?: ‘‘ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ 78ನೇ ಹುಟ್ಟುಹಬ್ಬವನ್ನು ಆಚರಿಸಲು ಬಾಂಗ್ಲಾದ ಸಾಂಸ್ಕೃತಿಕ ಒಕ್ಕೂಟದ ನಾಯಕಿ ಮತ್ತು ನಟಿ, ರೂಪದರ್ಶಿ ಮಿಶ್ತಿ ಸುಬಾಸ್ ಅವರು ಢಾಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿ-ಶಿಕ್ಷಕ ಕೇಂದ್ರದಲ್ಲಿ (TSC) ಕೇಕ್ ನೊಂದಿಗೆ ಕಾಣಿಸಿಕೊಂಡರು. ಆದರೆ, ಅನೇಕರು ಇವರ ನಡೆಗೆ ಕಿಡಿಕಾರಿದ್ದಾರೆ. ಶೇಖ್ ಹಸೀನಾ ದೇಶವನ್ನು ನಾಶಪಡಿಸಿದ್ದಾರೆ ಮತ್ತು ಅಮಾಯಕ ವಿದ್ಯಾರ್ಥಿಗಳನ್ನು ಕೊಂದಿದ್ದಾರೆ. ಇವರ ಹುಟ್ಟುಹಬ್ಬವನ್ನು ಆಚರಿಸಲು ಬಂದ ಈ ನಾಯಕಿಯನ್ನು ಶೀಘ್ರ ಬಂಧಿಸಬೇಕು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ’’ ಎಂಬ ಸುದ್ದಿ ಇದರಲ್ಲಿದೆ.
ಹಾಗೆಯೆ Protidiner Bangladesh ಯೂಟ್ಯೂಬ್ ಚಾನೆಲ್ನಲ್ಲಿ ಸೆಪ್ಟೆಂಬರ್ 30, 2024 ರಂದು ‘TSC ಯಲ್ಲಿ ಮಾಡೆಲ್ ಮಿಶ್ತಿ ಸುಬಾಸ್‌ಗೆ ಏನಾಯಿತು?’ ಎಂಬ ಶೀರ್ಷಿಕೆಯಲ್ಲಿ ಈ ಕುರಿತು ವೀಡಿಯೊ ಹಂಚಿಕೊಳ್ಳಲಾಗಿದೆ. ಬಾಂಗ್ಲಾದೇಶಿ ನಟಿ ಮತ್ತು ಶೇಖ್ ಹಸೀನಾಳ ಬೆಂಬಲಿಗ ಮಿಶ್ತಿ ಸುಬಾಸ್ ಅವರು ಹಸೀನಾ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಕ್ಕಾಗಿ ಆಕೆಗೆ ಕಿರುಕುಳ ನೀಡಲಾಗಿದೆ ಎಂಬ ಮಹಿತಿ ಇದರಲ್ಲಿ ನೀಡಲಾಗಿದೆ.
ಬಾಂಗ್ಲಾದೇಶದ ಮತ್ತೊಂದು ಸುದ್ದಿ ಮಾಧ್ಯಮ The Report ಕೂಡ ಈ ಕರಿತು ವರದಿ ಮಾಡಿದೆ.
ಹೀಗಾಗಿ ಹಿಜಾಬ್ ಧರಿಸಿಲ್ಲವೆಂದು ಅಮೆರಿಕಾ ಮಹಿಳೆಗೆ ಬಾಂಗ್ಲಾದೇಶದಲ್ಲಿ ಕಿರುಕುಳ ನೀಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ವೀಡಿಯೊದಲ್ಲಿ ಇರುವರು ಬಾಂಗ್ಲಾದೇಶಿ ನಟಿ, ಮಿಶ್ತಿ ಸುಬಾಸ್. ಇವರು ಶೇಖ್ ಹಸೀನಾ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಕ್ಕಾಗಿ ಕಿರುಕುಳ ನೀಡಲಾಗಿದೆ.