ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ವ್ಯಾಪಕವಾಗಿ ಹರಿದಾಡುತ್ತಿದ್ದು, ಇದರಲ್ಲಿ ಪೊಲೀಸರ ಗುಂಪೊಂದು ಸಾರ್ವಜನಿಕರನ್ನು ದೊಣ್ಣೆಗಳಿಂದ ಥಳಿಸುತ್ತಿರುವುದನ್ನು ಕಾಣಬಹುದು. ವಕ್ಫ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಬಿಹಾರದಲ್ಲಿ ಮುಸ್ಲಿಂ ವ್ಯಕ್ತಿಗಳನ್ನು ಥಳಿಸಿರುವುದನ್ನು ಇದು ತೋರಿಸುತ್ತದೆ ಎಂದು ವೀಡಿಯೊವನ್ನು ಹಂಚಿಕೊಳ್ಳುತ್ತಿರುವವರು ಹೇಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ವಕ್ಫ್ ಬೋರ್ಡ್ ಗೆ ಸಮರ್ಥನೆಯಾಗಿ, ಪ್ರತಿಭಟನೆಯ ಹೆಸರಿನಲ್ಲಿ ಅರಾಜಕತೆ ಮಾಡುತ್ತಿರುವ ಸಮುದಾಯಕ್ಕೆ ತಿಂದಷ್ಟು ಬಡಿಸುತ್ತಿರುವ ಪೊಲೀಸರು. ಗಮನಿಸಿ: ಇದು ನಡೆದಿದ್ದು ಬಿಹಾರದಲ್ಲಿ...’’. ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾದ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಹಳೆಯದಾಗಿದ್ದು, ವಕ್ಫ್ ಮಸೂದೆ ವಿರುದ್ಧದ ಪ್ರತಿಭಟನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.
ನಿಜಾಂಶ ತಿಳಿಯಲು ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಆಗಸ್ಟ್ 28, 2015 ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಬಿಹಾರದ ಪಾಟ್ನಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಶಿಕ್ಷಕರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ವರದಿ ಹೇಳಿದೆ. ಕಳೆದ ಎರಡು ವರ್ಷಗಳಿಂದ ಬಾಕಿ ಹಣ ಪಾವತಿಯಾಗದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು ಎಂದು ವರದಿಯಲ್ಲಿದೆ.
ಮಿಡ್‌ಡೇ ಇಂಡಿಯಾ ಯೂಟ್ಯೂಬ್ ಚಾನೆಲ್ನಲ್ಲಿ ಸೆಪ್ಟೆಂಬರ್ 22, 2018 ರಂದು ಇದೇ ವೀಡಿಯೊ ಶೇರ್ ಮಾಡಲಾಗಿದ್ದು, ಎರಡು ವರ್ಷಗಳಿಂದ ಬಾಕಿ ಪಾವತಿಸದ ರಾಜ್ಯ ಸರ್ಕಾರದ ವಿರುದ್ಧ ಬಿಹಾರ ರಾಜ್ಯ ಮದ್ರಸಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಶಿಕ್ಷಕರು ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಹೀಗಾಗಿ ಬಿಹಾರದಲ್ಲಿ 2015 ರಲ್ಲಿ ಮದ್ರಸಾ ಶಿಕ್ಷಕರು ಪಾವತಿಸದ ಸಂಬಳಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿರುವುದನ್ನು ವೈರಲ್ ವೀಡಿಯೊ ತೋರಿಸುತ್ತದೆ. ಇದು ವಕ್ಫ್ (ತಿದ್ದುಪಡಿ) ಮಸೂದೆಯ ವಿವಾದ ಅಥವಾ ವಕ್ಫ್ ಮಂಡಳಿಯನ್ನು ಬೆಂಬಲಿಸುವ ಯಾವುದೇ ಇತ್ತೀಚಿನ ವೀಡಿಯೊ ಅಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.