ಶಿಪ್ಪಿಂಗ್ ಕಂಟೈನರ್ ಮೇಲ್ಭಾಗದಲ್ಲಿ ನಮಾಜ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗಿದೆ. ವೀಡಿಯೊದಲ್ಲಿ ಕಂಟೈನರ್ ಮೇಲೆ ಕಾಲು ಚಾಚಿ ಕುಳಿತಿರುವ ವ್ಯಕ್ತಿಯೊಬ್ಬರನ್ನು ಕಾಣಬಹುದು. ಆಗ ಅಲ್ಲಿ ಪೊಲೀಸ್ ಸಿಬ್ಬಂದಿ ಬಂದು ಮಾತಿನಚಕಮಕಿ ನಡೆಯುತ್ತದೆ. ಬಳಿಕ ಆ ವ್ಯಕ್ತಿಯನ್ನು ಒಬ್ಬ ಪೊಲೀಸ್ ಅಧಿಕಾರಿ ಕಂಟೈನರ್ನಿಂದ ಕೆಳಗೆ ತಳ್ಳುತ್ತಾರೆ.
ಫೇಸ್ಬುಕ್ನಲ್ಲಿ ಕೆಲ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ಹಲೋ, ಭಾರತದ ಮುಸಲ್ಮಾನರೇ, ಎಲ್ಲಿಬೇಕೆಂದರಲ್ಲಿ ನಮಾಜ್ ಮಾಡುತ್ತಿರುವ ವ್ಯಕ್ತಿಯನ್ನ ಇಸ್ಲಾಮಿಕ್ ದೇಶವಾದ ಪಾಕಿಸ್ತಾನದಲ್ಲಿ ಪೋಲಿಸರು ಏನು ಮಾಡಿದರು ನೋಡಿ..’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗಿನ ವೈರಲ್ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ತಪ್ಪುದಾರಿಗೆಳೆಯುವ ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆಗಾಗಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಪೊಲೀಸ್ ಕ್ರಮ ಕೈಗೊಂಡಿರುವುದು ಈ ವೀಡಿಯೊದಲ್ಲಿದೆ.
ನಿಜಾಂಶ ತಿಳಿಯಲು ನಾವು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ನವೆಂಬರ್ 27, 2024 ರಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್‌ನ ಎಕ್ಸ್ ಹ್ಯಾಂಡಲ್‌ನಲ್ಲಿ ನಾವು ಅದೇ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಇಮ್ರಾನ್ ಖಾನ್ ಅವರು PTI ರಾಜಕೀಯ ಪಕ್ಷದ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷರಾಗಿದ್ದಾರೆ. ಎಕ್ಸ್ನಲ್ಲಿ ಹೀಗೆ ಬರೆಯಲಾಗಿದೆ: ‘‘ಮುಗ್ಧ, ಅಮಾಯಕ ಪ್ರತಿಭಟನಾಕಾರನು ಕಂಟೇನರ್‌ನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಸಶಸ್ತ್ರ ಅರೆಸೈನಿಕ ಅಧಿಕಾರಿಯೊಬ್ಬರು ಮೂರು ಮಹಡಿಗಳಿಗೆ ಸಮಾನವಾದ ಎತ್ತರದಿಂದ ಕ್ರೂರವಾಗಿ ಅವರನ್ನು ತಳ್ಳಿದ್ದಾರೆ. ಈ ಆಘಾತಕಾರಿ ಕ್ರೂರ ಕೃತ್ಯವು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ: ಅಧಿಕಾರಿಗಳು, ಮಿಲಿಟರಿಯಲ್ಲಿನ ಮೇಲಧಿಕಾರಿಗಳು, ಮೊಹ್ಸಿನ್ ನಖ್ವಿ ಮತ್ತು PML-N ಈ ಭಯಾನಕ ಹಿಂಸಾಚಾರದ ಮೂಲಕ ಮತ್ತು ಅವರು ತಮ್ಮ ನಾಗರಿಕರಿಗೆ, ಅಸಂಖ್ಯಾತ ಇತರ ಜನರಿಗೆ ಏನನ್ನು ಹೇಳಲು ಹೊರಟಿದ್ದೀರಿ’’ ಎಂದು ಬರೆದುಕೊಂಡಿದೆ.
ಈ ಸುಳಿವನ್ನು ತೆಗೆದುಕೊಂಡು, ನಾವು ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದ್ದೇವೆ. ಆಗ ಇಂಡಿಪೆನ್ಡೆಂಟ್ ವೆಬ್ಸೈಟ್ ನವೆಂಬರ್ 28, 2024 ರಂದು ಪ್ರಕಟಿಸಿದ ವರದಿಯನ್ನು ಕಂಡುಕೊಂಡಿದ್ದೇವೆ. ಇದರಲ್ಲಿ ನೀಡಿರುವ ಮಾಹಿತಿ ಪ್ರಕಾರ, ಪಾಕಿಸ್ತಾನದ ಭದ್ರತಾ ಪಡೆಗಳು ಸುಮಾರು 1,000 ಪ್ರತಿಭಟನಕಾರನನ್ನು ಬಂಧಿಸಿದ ಸಂದರ್ಭ 25 ಅಡಿ ಎತ್ತರದ ಶಿಪ್ಪಿಂಗ್ ಕಂಟೈನರ್‌ಗಳ ಗೋಪುರದಿಂದ ಪ್ರತಿಭಟನಾಕಾರನನ್ನು ತಳ್ಳಿದರು ಎಂದು ವರದಿ ಹೇಳಿದೆ. ಇಸ್ಲಾಮಾಬಾದ್‌ನಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಾವಿರಾರು ಬೆಂಬಲಿಗರು ಪ್ರತಿಭಟನೆ ನಡೆಸಿದ ಘಟನೆಗೆ ಇದು ಸಂಭವಿಸಿದೆ.
ಜಾಗರಣ್ ಇಂಗ್ಲೀಷ್ ಕೂಡ ಇದೇ ಘಟನೆಯನ್ನು ವರದಿ ಮಾಡಿದೆ. ಹೀಗಾಗಿ ವೈರಲ್ ಪೋಸ್ಟ್ ತಪ್ಪುದಾರಿಗೆಳೆಯುತ್ತಿದೆ ಎಂದು ನಾವು ತೀರ್ಮಾನಿಸುತ್ತೇವೆ.