Fact Check: ಅಕ್ರಮವಾಗಿ ಪ್ರವೇಶಿಸುತ್ತಿದ್ದ ರೋಹಿಂಗ್ಯಾ ಮುಸ್ಲಿಮರು ಕೊಲ್ಹಾಪುರದಲ್ಲಿ ಟ್ರಕ್​ನಲ್ಲಿ ಸಿಕ್ಕಿಬಿದ್ದಿದ್ದು ನಿಜವೇ?

ಬಾಂಗ್ಲಾದೇಶದಿಂದ ಭಾರತಕ್ಕೆ ರೋಹಿಂಗ್ಯಾ ಮುಸ್ಲಿಮರು ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ನಾವು ಕಂಡುಕೊಂಡಿದ್ದೇವೆ. ಮಕ್ಕಳು ಬಿಹಾರ ಮತ್ತು ಬಂಗಾಳದಿಂದ ಬಂದಿದ್ದರು.

By Vinay Bhat  Published on  7 Oct 2024 4:53 PM IST
Fact Check: ಅಕ್ರಮವಾಗಿ ಪ್ರವೇಶಿಸುತ್ತಿದ್ದ ರೋಹಿಂಗ್ಯಾ ಮುಸ್ಲಿಮರು ಕೊಲ್ಹಾಪುರದಲ್ಲಿ ಟ್ರಕ್​ನಲ್ಲಿ ಸಿಕ್ಕಿಬಿದ್ದಿದ್ದು ನಿಜವೇ?
Claim: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಸಾಗಿಸುತ್ತಿದ್ದ ಟ್ರಕ್ ವೊಂದು ಸಿಕ್ಕಿಬಿದ್ದಿದೆ.
Fact: ಟ್ರಕ್ನಲ್ಲಿದ್ದವರು ಬಿಹಾರ ಮತ್ತು ಬಂಗಾಳದಿಂದ ಬಂದಿದ್ದರು. ಬೇಸಿಗೆ ರಜೆ ಮುಗಿಸಿ ಮನೆಯಿಂದ ಮದ್ರಸಕ್ಕೆ ಹಿಂತಿರುಗುತ್ತಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ಹಲವಾರು ಅಪ್ರಾಪ್ತ ಬಾಲಕರು ಪೊಲೀಸರ ಸಮ್ಮುಖದಲ್ಲಿ ಟ್ರಕ್‌ನಿಂದ ಇಳಿಯುವುದನ್ನು ಕಾಣಬಹುದು. ವಿಡಿಯೋದ ಜೊತೆಗೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಸಾಗಿಸುತ್ತಿದ್ದ ಟ್ರಕ್ ವೊಂದು ಸಿಕ್ಕಿಬಿದ್ದಿದೆ. ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುತ್ತಿದ್ದವರನ್ನು ಪೊಲೀಸರು ಹಿಡಿದಿದ್ದಾರೆ ಎಂದು ಬರೆಯಲಾಗಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಅಕ್ಟೋಬರ್ 6, 2024 ರಂದು ಈ ವಿಡಿಯೋವನ್ನು ಹಂಚಿಕೊಂಡಿದ್ದು, ‘‘ಬಾಂಗ್ಲಾದೇಶದಿಂದ ಬಂದ ಐವತ್ತಕ್ಕೂ ರೋಹಿಣಿ ಮುಸ್ಲಿಮರನ್ನು ಸಿನಿಮಾ ರೀತಿ ಬಂಧಿಸಿದ ಮಹಾರಾಷ್ಟ್ರ ಪೊಲೀಸರು’’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಎಕ್ಸ್ ಬಳಕೆದಾರರೊಬ್ಬರು ಕೂಡ ಇದೇ ವಿಡಿಯೋ ಅಪ್ಲೋಡ್ ಮಾಡಿ, ‘‘ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಸಾಗಿಸುತ್ತಿದ್ದ ಟ್ರಕ್ ವೊಂದು ಸಿಕ್ಕಿಬಿದ್ದಿದೆ. ಮಮತಾ ಬ್ಯಾನರ್ಜಿ ಬಾಂಗ್ಲಾದೇಶದಿಂದ ಅವರನ್ನು ಕರೆತಂದು ಇಡೀ ದೇಶಕ್ಕೆ ತುಂಬುತ್ತಿದ್ದಾರೆ. ನಾವು ಹಿಂದೂಗಳು ಎಚ್ಚೆತ್ತುಕೊಳ್ಳುವುದು ಯಾವಾಗ? ದೇಶ ದೊಡ್ಡ ಅಪಾಯದಲ್ಲಿದೆ. ಹಿಂದೂ ಸಹೋದರರೇ ಎಚ್ಚರದಿಂದಿರಿ’’ ಎಂದು ಹೇಳಿಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ತನಿಖೆಯ ಆರಂಭದಲ್ಲಿ, ನಾವು ವೈರಲ್ ವಿಡಿಯೋದ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಅನೇಕ ಮಾಧ್ಯಮ ವರದಿಗಳಲ್ಲಿ ವಿಡಿಯೋಕ್ಕೆ ಸಂಬಂಧ ಪಟ್ಟ ಸುದ್ದಿಯನ್ನು ನೋಡಿದ್ದೇವೆ.

18 ಮೇ 2023 ರಂದು ಟಿವಿ9 ಹಿಂದಿಯಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ‘‘ಬಿಹಾರ ಮತ್ತು ಪಶ್ಚಿಮ ಬಂಗಾಳದ ಗಡಿಯಿಂದ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ 63 ಮಕ್ಕಳನ್ನು ಟ್ರಕ್‌ನಲ್ಲಿ ಕರೆತರಲಾಯಿತು. ಇವರು ಕೊಲ್ಲಾಪುರದಲ್ಲಿರುವ ಮದರಸಾದಲ್ಲಿ ಓದುತ್ತಿದ್ದರು. ಬೇಸಿಗೆ ರಜೆಯಲ್ಲಿ ಮಕ್ಕಳು ತಮ್ಮ ತಮ್ಮ ಗ್ರಾಮಗಳಿಗೆ ಹೋಗಿದ್ದರು. ಅಲ್ಲಿಂದ ರೈಲಿನಲ್ಲಿ ರೈಲು ನಿಲ್ದಾಣ ತಲುಪಿದ ಬಳಿಕ ಅವರನ್ನು ಲಾರಿಯಲ್ಲಿ ತುಂಬಿಕೊಂಡು ಕರೆದೊಯ್ಯಲಾಗುತ್ತಿತ್ತು. ಈ ಮಕ್ಕಳ ಆಧಾರ್ ಕಾರ್ಡ್ ಮತ್ತು ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ’’ ಎಂದು ವರದಿಯಲ್ಲಿದೆ.

ಹಾಗೆಯೆ ಇಂಡಿಯಾ ಟಿವಿ ಕೂಡ 18 ಮೇ 2023 ರಂದು ಈ ಕುರಿತು ಸುದ್ದಿ ಪ್ರಕಟಿಸಿದ್ದು, ‘‘ಈ ಘಟನೆಯು ಮೇ 17 ರಂದು ಮಧ್ಯಾಹ್ನ 2 ಗಂಟೆಗೆ ನಡೆದಿದೆ. ಎಲ್ಲಾ ಮಕ್ಕಳು 8-12 ವರ್ಷ ವಯಸ್ಸಿನವರು, ಅವರು ಬಿಹಾರ ಮತ್ತು ಪಶ್ಚಿಮ ಬಂಗಾಳದಿಂದ ರೈಲಿನಲ್ಲಿ ಕೊಲ್ಲಾಪುರವನ್ನು ತಲುಪಿದ್ದಾರೆ. ಅಲ್ಲಿಂದ ಲಾರಿಯಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಎಲ್ಲಾ ಮಕ್ಕಳು ಮದ್ರಸಾದಲ್ಲಿ ಓದುತ್ತಾರೆ. ಕೆಲ ಹಿಂದೂ ಸಂಘಟನೆಗಳು ಮಕ್ಕಳನ್ನು ಲಾರಿಯಲ್ಲಿ ಹಾಕಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಎಲ್ಲ ಮಕ್ಕಳು ಆ ಪ್ರದೇಶದ ಮದರಸಾದಲ್ಲಿ ಓದುತ್ತಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಬೇಸಿಗೆ ರಜೆಯಲ್ಲಿ ಎಲ್ಲರೂ ಅವರವರ ಮನೆಗಳಿಗೆ ಹೋಗಿದ್ದರು’’ ಎಂದು ಬರೆಯಲಾಗಿದೆ.

ಹೆಚ್ಚಿನ ತನಿಖೆ ನಡೆಸಿದಾಗ ನಮಗೆ ಲೋಕಮತ್ ಮತ್ತು IANS ಯೂಟ್ಯೂಬ್ ಚಾನೆಲ್​ನಲ್ಲಿ ಕೊಲ್ಲಾಪುರದ ಪೊಲೀಸ್ ವರಿಷ್ಠಾಧಿಕಾರಿ ಮಂಗೇಶ್ ಚವಾಣ್ ಅವರು ಈ ಘಟನೆ ಕುರಿತು ಸಂಪೂರ್ಣ ಮಾಹಿತಿ ನೀಡಿರುವುದು ಸಿಕ್ಕಿದೆ. ಇದರಲ್ಲಿ ಮಕ್ಕಳು ಬಿಹಾರ ಮತ್ತು ಬಂಗಾಳದಿಂದ ಬಂದಿದ್ದಾರೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

‘‘ಇದರಲ್ಲಿ 69 ಮಕ್ಕಳು ಇದ್ದರು. ಈ ಟ್ರಕ್ ಅನ್ನು ಪೂರ್ವಕರ್ ಕಾಲೋನಿಯ ಮಹಾರಾಜ ಚೌಕದಲ್ಲಿ ನಿಲ್ಲಿಸಲಾಗಿದೆ. 7 ರಿಂದ 13 ವರ್ಷದೊಳಗಿನ ಮಕ್ಕಳನ್ನು ಕಂಡ ಭಾರತೀಯ ಜನತಾ ಪಕ್ಷದ ಪ್ರಾದೇಶಿಕ ಸದಸ್ಯ ವಿಜೇಂದರ್ ಮಾನೆ ಟ್ರಕ್ ಚಾಲಕನನ್ನು ಪ್ರಶ್ನಿಸಿದಾಗ, ಟ್ರಕ್ ಚಾಲಕ ಯಾವುದೇ ಉತ್ತರ ನೀಡಲಿಲ್ಲ. ಆಗ ಜಿಲ್ಲಾ ಪೊಲೀಸ್ ಮುಖ್ಯಸ್ಥ ಶೈಲೇಶ್ ಬಾಲ್ಕೋಡ್ ಅವರಿಗೆ ಮಾಹಿತಿ ನೀಡಿದರು. ನಂತರ ಎಲ್ಲರನ್ನೂ ಬಂಧಿಸಿ ಶಿರೋಳಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಮಕ್ಕಳನ್ನು ತಪಾಸಣೆಗೊಳಪಡಿಸಿದ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಸಾಗರ್ ಪಾಟೀಲ್ ಅವರು ಆಧಾರ್ ಕಾರ್ಡ್ ಹೊಂದಿರುವುದಾಗಿ ತಿಳಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿರುವ ಮದರಸಾದಲ್ಲಿ ಕಲಿಯಲು ಬಿಹಾರ ಮತ್ತು ಬಂಗಾಳದಿಂದ ಮಕ್ಕಳು ಬಂದಿದ್ದರು. ಮಕ್ಕಳು ಬೇಸಿಗೆ ರಜೆ ಮುಗಿಸಿ ಮನೆಗೆ ಮರಳುತ್ತಿದ್ದರು’’ ಎಂದು ಪೊಲೀಸರು ಹೇಳಿರುವುದು ಈ ವಿಡಿಯೋದಲ್ಲಿದೆ.

ಹೀಗಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ರೋಹಿಂಗ್ಯಾ ಮುಸ್ಲಿಮರು ಅಕ್ರಮವಾಗಿ ಪ್ರವೇಶಿಸಿದ್ದಾರೆ ಎಂದು ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ನಾವು ಕಂಡುಕೊಂಡಿದ್ದೇವೆ. ಮಕ್ಕಳು ಬಿಹಾರ ಮತ್ತು ಬಂಗಾಳದಿಂದ ಬಂದಿದ್ದರು. ಇವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿರುವ ಮದರಸಾದಲ್ಲಿ ಓದುತ್ತಿದ್ದಾರೆ. ಬೇಸಿಗೆ ರಜೆ ಮುಗಿಸಿ ಮನೆಯಿಂದ ಮದ್ರಸಕ್ಕೆ ಹಿಂತಿರುಗುತ್ತಿದ್ದಾಗ ನಡೆದ ಘಟನೆ ಇದಾಗಿದೆ.

Claim Review:ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಸಾಗಿಸುತ್ತಿದ್ದ ಟ್ರಕ್ ವೊಂದು ಸಿಕ್ಕಿಬಿದ್ದಿದೆ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ಟ್ರಕ್ನಲ್ಲಿದ್ದವರು ಬಿಹಾರ ಮತ್ತು ಬಂಗಾಳದಿಂದ ಬಂದಿದ್ದರು. ಬೇಸಿಗೆ ರಜೆ ಮುಗಿಸಿ ಮನೆಯಿಂದ ಮದ್ರಸಕ್ಕೆ ಹಿಂತಿರುಗುತ್ತಿದ್ದರು.
Next Story