Fact Check: ತಮಿಳುನಾಡಿನ ಪ್ರಾಚೀನ ಪೊಟ್ಟಲ್‌ಪುತ್ತೂರ್ ದೇವಾಲಯ ಮಸೀದಿಯಾಗಿ ರೂಪಾಂತರಗೊಂಡಿರುವುದು ನಿಜವೇ?
ವೀಡಿಯೊದಲ್ಲಿ ದೇವಸ್ಥಾನದಂತೆ ಕಾಣುವ ಒಳಾಂಗಣವಿದ್ದು, ಇಲ್ಲಿರುವ ಕಂಬಗಳು ಸಂಪೂರ್ಣ ಹಸಿರು ಮಯವಾಗಿದೆ. ತಮಿಳುನಾಡಿನ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ಹಲವರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.
By Vinay Bhat Published on 19 Nov 2024 4:03 PM ISTClaim: ತಮಿಳುನಾಡಿನ ಪ್ರಾಚೀನ ಪೊಟ್ಟಲ್‌ಪುತ್ತೂರ್ ದೇವಾಲಯ ಮಸೀದಿಯಾಗಿ ರೂಪಾಂತರಗೊಂಡಿದೆ.
Fact: ಇಲ್ಲಿ ದೇವಸ್ಥಾನವನ್ನು ಮಸೀದಿಯಾಗಿ ಪರಿವರ್ತಿಸಲಾಗಿಲ್ಲ. ಬದಲಾಗಿ ಇದೊಂದು ದರ್ಗಾ ಆಗಿದ್ದು, 17ನೇ ಶತಮಾನದಿಂದಲೂ ಇದೆ.
ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ವಕ್ಫ್ ಜಮೀನಿನ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಈ ಬೆಳವಣಿಗೆಗಳ ನಡುವೆ, ದೇವಸ್ಥಾನದಂತಹ ಸ್ಥಳಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ವೀಡಿಯೊದಲ್ಲಿ ದೇವಸ್ಥಾನದಂತೆ ಕಾಣುವ ಒಳಾಂಗಣವಿದ್ದು, ಇಲ್ಲಿರುವ ಕಂಬಗಳು ಸಂಪೂರ್ಣ ಹಸಿರು ಮಯವಾಗಿದೆ. ತಮಿಳುನಾಡಿನ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆ ಎಂದು ಹಲವರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಶೇರ್ ಮಾಡಿ, ‘‘ತಮಿಳುನಾಡು:-ಪ್ರಾಚೀನ ಪೊಟ್ಟಲ್‌ಪುತ್ತೂರ್ ದೇವಾಲಯವು ಮಸೀದಿಯಾಗಿ ರೂಪಾಂತರಗೊಂಡಿದೆ.’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇಲ್ಲಿ ದೇವಸ್ಥಾನವನ್ನು ಮಸೀದಿಯಾಗಿ ಪರಿವರ್ತಿಸಲಾಗಿಲ್ಲ. ಬದಲಾಗಿ ಇದೊಂದು ದರ್ಗಾ ಆಗಿದ್ದು, 17ನೇ ಶತಮಾನದಿಂದಲೂ ಇದೆ.
ನಿಜಾಂಶವನ್ನು ತಿಳಯಲು ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಆಗ ತಮಿಳುನಾಡು ಸರ್ಕಾರದ ಅಧಿಕೃತ ಫ್ಯಾಕ್ಟ್-ಚೆಕ್ ಎಕ್ಸ್ ಹ್ಯಾಂಡಲ್‌ನಲ್ಲಿ ಈ ವಿಚಾರಕ್ಕೆ ಸಂಬಂಧ ಪಟ್ಟ ಪೋಸ್ಟ್ ಕಂಡಿದೆ. ಈ ಪೋಸ್ಟ್ ಪ್ರಕಾರ, ‘‘ವೈರಲ್ ಹಕ್ಕು ಸುಳ್ಳಾಗಿದೆ ಮತ್ತು ವೀಡಿಯೊ ವಾಸ್ತವವಾಗಿ ತಿರುನಲ್ವೇಲಿಯ ತೆಂಕಶಿಯಲ್ಲಿರುವ ಪೊಟ್ಟಲ್ಪುದೂರ್ ಮೊಹೈದೀನ್ ಅಂಡವರ್ ದರ್ಗಾದ್ದಾಗಿದೆ. ಈ ದರ್ಗಾವನ್ನು 17 ನೇ ಶತಮಾನದಲ್ಲಿ (1674 AD) ಇಸ್ಲಾಮಿಕ್ ವಿದ್ವಾಂಸ ಮೊಹಿದೀನ್ ಅಬ್ದುಲ್ ಖಾದಿರ್ ಜಿಲಾನಿ ಅವರ ನೆನಪಿಗಾಗಿ ನಿರ್ಮಿಸಲಾಗಿದೆ. ಇದು ದ್ರಾವಿಡ ವಾಸ್ತುಶಿಲ್ಪದ ಪರಂಪರೆಯಿಂದ ಪ್ರೇರಿತವಾದ ನಿರ್ಮಾಣಕ್ಕೆ ಹೆಸರುವಾಸಿಯಾಗಿದೆ. ಇದಲ್ಲದೆ, ಈ ದರ್ಗಾಕ್ಕೆ ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಕೂಡ ಪೂಜೆ ಮಾಡಲು ಭೇಟಿ ನೀಡುತ್ತಾರೆ’’ ಎಂದು ಬರೆಯಲಾಗಿದೆ.
Circulating rumor!, “Ancient temple captured and converted into a mosque in Tenkasi” @tnpoliceoffl https://t.co/X4jSIiJ5nP pic.twitter.com/wHMvEbOHpO
— TN Fact Check (@tn_factcheck) May 3, 2024
ತನಿಖೆಯನ್ನು ಮುಂದುವರೆಸಿ ಕೀವರ್ಡ್ ಹುಡುಕಾಟ ನಡೆಸಿದಾಗ ಜುಲೈ 2, 2013 ರಂದು ಟೂರಿಸಂ ಬೆಲ್ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಈ ದರ್ಗಾದ ವೀಡಿಯೊವನ್ನು ಕಂಡಿದ್ದೇವೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿರುವ ಕ್ಲಿಪ್ಗೂ ಈ ಯೂಟ್ಯೂಬ್ ವೀಡಿಯೊದ ಮಧ್ಯೆ ಮಧ್ಯೆ ಇರುವ ಕ್ಲಿಪ್ಗೂ ಹೋಲಿಕೆ ಆಗುತ್ತದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ತಮಿಳುನಾಡಿನ ತೆಂಕಶಿಯಲ್ಲಿರುವ ಪುರಾತನ ಹಿಂದೂ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಿದ್ದಾರೆ ಎಂಬ ವೈರಲ್ ಹೇಳಿಕೆ ಸುಳ್ಳು ಎಂದು ನ್ಯೂಸ್ ಮೀಟರ್ ಖಚಿತವಾಗಿ ಹೇಳುತ್ತದೆ. ಇದೊಂದು ದರ್ಗಾ ಆಗಿದ್ದು, 17ನೇ ಶತಮಾನದಿಂದಲೂ ಇದೆ. ಈ ಜಾಗಕ್ಕೆ ಎಲ್ಲಾ ಧರ್ಮದವರು ಭೇಟಿ ನೀಡುತ್ತಾರೆ.