Fact Check: ಮೋದಿ, ಅಮಿತ್ ಶಾಗೆ ಬಾಂಗ್ಲಾದೇಶ ಸೇನೆ ಎಚ್ಚರಿಕೆ ನೀಡಿದ್ದು ನಿಜವೇ?
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರಿಗೆ ಬಾಂಗ್ಲಾದೇಶ ಸೇನೆ ಎಚ್ಚರಿಕೆ ನೀಡಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಶೇರ್ ಮಾಡುತ್ತಿದ್ದಾರೆ.
By Vinay Bhat Published on 13 Dec 2024 3:59 PM ISTClaim: ಬಾಂಗ್ಲಾದೇಶದ ಸೈನ್ಯದ ಧೈರ್ಯ ಇಷ್ಟು ಹೆಚ್ಚಾಯಿತೆ. ಮೋದಿ ಅಮಿತ್ ಷಾ ಅವರ ಹೆಸರು ತುಗೊಂಡು ಲಲಕಾರ ಹಾಕುತ್ತಿದೆ.
Fact: ಈ ವೀಡಿಯೊದಲ್ಲಿ ಭಾರತಕ್ಕೆ ಎಚ್ಚರಿಕೆ ನೀಡಿದವರು ಬಾಂಗ್ಲಾದೇಶ ಸೇನೆಯ ಪ್ರಸ್ತುತ ಸದಸ್ಯರಲ್ಲ, ಇವರು ನಿವೃತ್ತ ಕರ್ನಲ್‌ಗಳು.
ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಪ್ರತಿಭಟನೆಗಳ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿವೆ. ಇದರ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರಿಗೆ ಬಾಂಗ್ಲಾದೇಶ ಸೇನೆ ಎಚ್ಚರಿಕೆ ನೀಡಿದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಶೇರ್ ಮಾಡುತ್ತಿದ್ದಾರೆ. ವೀಡಿಯೊದಲ್ಲಿ ಮಿಲಿಟರಿ ಕ್ಯಾಪ್ ಧರಿಸಿದ ಇಬ್ಬರು ಬೆಂಗಾಲಿ ಭಾಷೆಯಲ್ಲಿ ಭಾಷಣ ಮಾಡುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಾಂಗ್ಲಾದೇಶದ ಸೈನ್ಯದ ಧೈರ್ಯ ಇಷ್ಟು ಹೆಚ್ಚಾಯಿತೆ ಮೋದಿ ಅಮಿತ್ ಷಾ ಅವರ ಹೆಸರು ತುಗೊಂಡು ಲಲಕಾರ ಹಾಕುತ್ತಿದೆ ಒಂದು ಸಮಯ ಇತ್ತು ಬಾಂಗ್ಲಾದೇಶ ಭಾರತದ ವಿರುದ್ಧ ಒಂದು ಶಬ್ದ ಕೂಡ ಹೇಳುವ ತಾಕತ್ತು ಇರಲಿಲ್ಲ’’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಮತ್ತೋರ್ವ ಬಳಕೆದಾರ ಇದೇ ವೀಡಿಯೊವನ್ನು ಅಪ್ಲೋಡ್ ಮಾಡಿ ‘‘ನಮ್ಮ ದೇಶ ಭಾರತಕ್ಕಾಗಿ, ಇಂದು ಬಾಂಗ್ಲಾದೇಶ ಯುದ್ಧಕ್ಕೆ ಕರೆ ನೀಡುತ್ತಿದೆ, ಪ್ರತಿಯೊಬ್ಬ ಭಾರತೀಯನೂ ಯೋಚಿಸುವ ಸಮಯ’’ ಎಂದು ಹೇಳಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊದಲ್ಲಿ ಭಾರತಕ್ಕೆ ಎಚ್ಚರಿಕೆ ನೀಡಿದವರು ಬಾಂಗ್ಲಾದೇಶ ಸೇನೆಯ ಪ್ರಸ್ತುತ ಸದಸ್ಯರಲ್ಲ, ಇವರು ನಿವೃತ್ತ ಕರ್ನಲ್‌ಗಳು ಎಂಬುದು ನಮ್ಮ ತನಿಖೆಯಿಂದ ಕಂಡುಹಿಡಿದಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಮೂಲಕ ಸರ್ಚ್ ಮಾಡಿದ್ದೇವೆ. ಆಗ 7 ಡಿಸೆಂಬರ್ 2024 ರಂದು ಬಾಂಗ್ಲಾದೇಶದ ಸ್ಥಳೀಯ ಸುದ್ದಿ ವಾಹಿನಿ Ekhon TV ಯೂಟ್ಯೂಬ್ ಚಾನೆಲ್ ಇದೇ ವೈರಲ್ ವೀಡಿಯೊವನ್ನು ಮತ್ತೊಂದು ಆ್ಯಂಗಲ್ನಲ್ಲಿ ಅಪ್ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇದರ ಶೀರ್ಷಿಕೆಯಲ್ಲಿ "ಸಶಸ್ತ್ರ ಪಡೆಗಳ ಮಾಜಿ ಅಧಿಕಾರಿಗಳು ರಾಷ್ಟ್ರೀಯ ಏಕತೆಗೆ ಕರೆ ನೀಡಿದ್ದಾರೆ | ನಿವೃತ್ತ ಸೇನಾ ಅಧಿಕಾರಿಳು" ಎಂದು ಬರೆಯಲಾಗಿದೆ.
ನಂತರ ನಾವು ಯೂಟ್ಯೂಬ್ನಲ್ಲಿ ಇದ್ದ ಶೀರ್ಷಿಕೆಯನ್ನು ಕಾಪಿ ಮಾಡಿ ಗೂಗಲ್ನಲ್ಲಿ ಹುಡುಕಾಟ ನಡೆಸಿದ್ದೇವೆ. ಆಗ ಇದಕ್ಕೆ ಸಂಬಂಧಿಸಿದ ಅನೇಕ ಸುದ್ದಿ ವರದಿಗಳನ್ನು ಕಂಡುಕೊಂಡಿದ್ದೇವೆ. ಬಾಂಗ್ಲಾದ ಮತ್ತೊಂದು ಸುದ್ದಿ ಮಾಧ್ಯಮ daily janakantha ಡಿಸೆಂಬರ್ 7, 2024 ರಂದು ಇದೇ ವೈರಲ್ ವೀಡಿಯೊದಲ್ಲಿ ಕಾಣಿಸುವ ವ್ಯಕ್ತಿಗಳ ಫೋಟೋದೊಂದಿಗೆ ‘‘ಬಾಂಗ್ಲಾದೇಶ ಇನ್ನು ಮುಂದೆ ಭಾರತೀಯ ಕೇಸರಿ ಸೇನೆಯನ್ನು ಸಹಿಸುವುದಿಲ್ಲ’’ ಎಂಬ ಶೀರ್ಷಿಕೆ ಬರೆದು ಸುದ್ದಿ ಪ್ರಕಟಿಸಿದೆ. ವರದಿಯ ಪ್ರಕಾರ, ವೈರಲ್ ವೀಡಿಯೊ 7 ಡಿಸೆಂಬರ್ 2024 ರಂದು ನಡೆದ ಪ್ರತಿಭಟನೆಯದ್ದಾಗಿದೆ. ಭಾರತದ ಆಕ್ರಮಣದ ವಿರುದ್ಧ ಏಕತೆ ಎಂಬ ಘೋಷಣೆಯಡಿ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯನ್ನು ಬಾಂಗ್ಲಾದೇಶ ಸೇನೆಯ ನಿವೃತ್ತ ಅಧಿಕಾರಿಗಳು ಮಾಡಿದ್ದಾರೆ. ಇದನ್ನು ಢಾಕಾದ RAOWA ಕ್ಲಬ್‌ನಲ್ಲಿ ಮಾಡಲಾಗಿದೆ. RAOWA ಬಾಂಗ್ಲಾದೇಶ ಸೇನೆಯ ನಿವೃತ್ತ ಅಧಿಕಾರಿಗಳ ಕಲ್ಯಾಣ ಸಂಘವಾಗಿದೆ. ಈ ಪ್ರತಿಭಟನೆ ವೇಳೆ ನರೇಂದ್ರ ಮೋದಿ, ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರಿಗೆ ಎಚ್ಚರಿಕೆ ನೀಡಿದವರ ಹೆಸರು ನಿವೃತ್ತ ಕರ್ನಲ್ ಮನೀಶ್ ದಿವಾನ್. ‘‘ಮೋದಿಜಿ, ಅಮಿತ್‌ಜಿ ಮತ್ತು ರಾಜನಾಥ್‌ಜಿ - ಬಾಂಗ್ಲಾದೇಶದ ಸೇನೆಯನ್ನು ನೀವು 72 ವರ್ಷಗಳ ಹಿಂದೆ ನೋಡಿರಬಹುದು. ಆದರೆ, ಆ ಸೇನೆ ಈಗಿಲ್ಲ. ನಾವು ಯಾವುದೇ ಶತ್ರುವನ್ನು ಎದುರಿಸಲು ಸಿದ್ಧರಿದ್ದೇವೆ. ನೀನು ಗಲಾಟೆ ಮಾಡಬೇಡ, ಹೆದರಬೇಡಿ. ಗಡಿಯಲ್ಲಿ ನಿಮ್ಮನ್ನು ತಡೆಯಲು ನಮ್ಮ ಸಶಸ್ತ್ರ ಪಡೆಗಳೊಂದಿಗೆ 17 ಕೋಟಿ ಜನರಿದ್ದೇವೆ.’’ ಎಂದು ಹೇಳಿರುವುದನ್ನು daily janakantha ಉಲ್ಲೇಖಿಸಿದೆ.
ಈ ವೈರಲ್ ವೀಡಿಯೊವನ್ನು ಹೊಂದಿರುವ ಹೇಳಿಕೆಯನ್ನು ಅನೇಕ ಸುದ್ದಿ ವರದಿಗಳಲ್ಲಿ ನಾವು ಗಮನಿಸಿದ್ದೇವೆ. ಅದನ್ನು ನೀವು ಇಲ್ಲಿ, ಇಲ್ಲಿ ಓದಬಹುದು.
ಬಾಂಗ್ಲಾದೇಶ ಸೇನೆಯು ಅಧಿಕೃತವಾಗಿ ಭಾರತಕ್ಕೆ ಎಚ್ಚರಿಕೆ ನೀಡುವ ಯಾವುದೇ ಹೇಳಿಕೆ ನೀಡಿದ್ದರೆ, ಖಂಡಿತವಾಗಿಯೂ ಅದರ ಬಗ್ಗೆ ಸುದ್ದಿ ಪ್ರಕಟವಾಗುತ್ತಿತ್ತು. ಆದರೆ ಇದಕ್ಕೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ವರದಿ ನಮಗೆ ಸಿಕ್ಕಿಲ್ಲ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ನವೆಂಬರ್ 6, 2024 ರಂದು, ಭಾರತದ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಮತ್ತು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಜಮಾನ್ ಅವರು ವೀಡಿಯೊ ಕರೆ ಮೂಲಕ ಸಂಭಾಷಣೆ ನಡೆಸಿದರು. ಈ ಸಭೆಯಲ್ಲಿ ಉಭಯ ದೇಶಗಳ ಹಿತಾಸಕ್ತಿಗಳ ಕುರಿತು ಚರ್ಚಿಸಲಾಯಿತು. ಶೇಖ್ ಹಸೀನಾ ಅವರು ಆಗಸ್ಟ್ 5, 2024 ರಂದು ದೇಶವನ್ನು ತೊರೆದ ನಂತರ ಇದು ಮೊದಲ ಸಭೆಯಾಗಿದೆ. ಅದೇ ಸಮಯದಲ್ಲಿ, 9 ಡಿಸೆಂಬರ್ 2024 ರಂದು, ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಸಭೆಯು ಢಾಕಾದಲ್ಲಿ ನಡೆಯಿತು.
ಈ ಮೂಲಕ ವೈರಲ್ ಆಗಿರುವ ವೀಡಿಯೊದಲ್ಲಿರುವವರು ಬಾಂಗ್ಲಾದೇಶ ಸೇನಾ ಮುಖ್ಯಸ್ಥರಲ್ಲ, ನಿವೃತ್ತ ಸೇನಾಧಿಕಾರಿ ಎಂಬುದು ಸ್ಪಷ್ಟವಾಗಿದೆ.