ಸ್ಯಾಂಡಲ್ವುಡ್ ನಟಿ ಹಾಗೂ ನಿರೂಪಕಿ ಅನುಶ್ರೀ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಇದೇ ಆಗಸ್ಟ್ 28 ರಂದು ಬೆಂಗಳೂರು ಹೊರವಲಯದ ರೆಸಾರ್ಟ್ ಒಂದರಲ್ಲಿ ಮದುವೆ ನಡೆಯಲಿದೆ. ಹೀಗಿರುವಾಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಪೋಸ್ಟ್ ವೈರಲ್ ಆಗುತ್ತಿದೆ. ಇದರಲ್ಲಿ ಅನುಶ್ರೀ ಮದುವೆ ಆಗುತ್ತಿರುವ ಹುಡುಗ ಮುಸ್ಲಿಂ ಧರ್ಮದವನು ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಅನುಶ್ರೀ ಹಾಗೂ ಅವರ ಭಾವಿ ಪತಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದ ಮೇಲೆ ‘‘ಮುಸ್ಲಿಂ ಧರ್ಮದ ಹುಡುಗನನ್ನು ಮದುವೆ ಆಗುತ್ತಿದ್ದಾರಾ ಅನುಶ್ರೀ’’ ಎಂದು ಬರೆದಿದೆ. ಇದಕ್ಕೆ ‘‘ಈ ನಮ್ಮ ಹಿಂದೂ ಹೆಣ್ಣುಮಕ್ಕಳಿಗೆ ಹಿಂದೂ ಉಡುಗೊರೆ ಸಿಗಲ್ವಾ.. ಯಾಕೆ ಈ ತರ ಲವ್ ಜಿಹಾದ್ಗೆ ಬಲಿ ಹಾಕ್ತಾರೋ ಗೊತ್ತಿಲ್ಲ’’ ಎಂದು ಕ್ಯಾಪ್ಶನ್ ನೀಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಪೋಸ್ಟ್ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅನುಶ್ರೀ ಮದುವೆ ಆಗುತ್ತಿರುವ ಹುಡುಗನ ಹೆಸರು ರೋಷನ್ ಎಂದಾಗಿದ್ದು ಅವರು ಹಿಂದೂ ಧರ್ಮದವರಾಗಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಗೂಗಲ್ನಲ್ಲಿ ‘Anushree Marriage’ ಎಂಬ ಕೀವರ್ಡ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಆಗಸ್ಟ್ 22 ರಂದು ಕನ್ನಡಪ್ರಭ ‘‘ಜೀ ಕನ್ನಡ ವಾಹಿನಿಯ ನಿರೂಪಕಿ ಅನುಶ್ರೀ ಮದುವೆ ಆಗುತ್ತಿರುವ ವಿಷಯ ಬಹಿರಂಗವಾಗಿದೆ. ಮದುವೆ ದಿನಾಂಕ ಫಿಕ್ಸ್ ಆಗಿದ್ದು ಆಗಸ್ಟ್ 28ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೊಡಗು ಮೂಲದ ರೋಷನ್ ಎಂಬುವವರ ಜೊತೆ ಅನುಶ್ರೀ ಮದುವೆ ಆಗಲಿದ್ದಾರೆ. ಆಗಸ್ಟ್ 28ರಂದು ಬೆಂಗಳೂರು ಹೊರವಲಯದ ರೆಸಾರ್ಟ್ ನಲ್ಲಿ ಬೆಳಗ್ಗೆ 10:56 ರ ಶುಭ ಮೂಹೂರ್ತದಲ್ಲಿ ಮದುವೆ ಕಾರ್ಯಕ್ರಮ ನೆರವೇರಲಿದೆ’’ ಎಂಬ ಮಾಹಿತಿ ಇದರಲ್ಲಿದೆ.
ಆಗಸ್ಟ್ 22 ರಂದು ಈಟಿವಿ ಭಾರತ್ ಕನ್ನಡ ಕೂಡ ‘‘ಕೊಡಗಿನ ರೋಷನ್ ಜೊತೆಗೆ ಅನುಶ್ರೀ ವಿವಾಹ; ಆಮಂತ್ರಣ ಪತ್ರಿಕೆ ಹೀಗಿದೆ ನೋಡಿ’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ. ಆಮಂತ್ರಣ ಪತ್ರಿಕೆಯ ಫೋಟೋ ಕೂಡ ಇದರಲ್ಲಿದೆ. ಆಮಂತ್ರಣ ಪತ್ರಿಕೆಯಲ್ಲಿ ಹುಡುಗನ ತಂದೆಯ ಹೆಸರು ಶ್ರೀ ರಾಮಮೂರ್ತಿ ಎಂದು ಬರೆಯಲಾಗಿದೆ. ಸುದ್ದಿಯಲ್ಲಿ ಕೂಡ ‘ರಾಮಮೂರ್ತಿ ಎಂಬವರ ಪುತ್ರ ರೋಷನ್ ಅವರು ಆ.28ರಂದು ಬೆಳಗ್ಗೆ 10:56ರ ಶುಭ ಮುಹೂರ್ತದಲ್ಲಿ ಅನುಶ್ರೀ ಜೊತೆ ಸಪ್ತಪದಿ ತುಳಿಯಲಿದ್ದಾರೆ’ ಎಂಬ ಮಾಹಿತಿ ಇದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಅನುಶ್ರೀ ಅವರನ್ನು ಮದುವೆ ಆಗುತ್ತಿರುವ ಹುಡುಗ ಮುಸ್ಲಿಂ ಧರ್ಮದವನು ಎಂದು ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.