ಸಾಮಾಜಿಕ ಮಾಧ್ಯಮದಲ್ಲಿ ಒಂದು ಫೋಟೋ ವೈರಲ್ ಆಗುತ್ತಿದ್ದು, ಇದರಲ್ಲಿ ರಸ್ತೆಯ ಮಧ್ಯೆ ಮೇಲ್ಸೇತುವೆಯನ್ನು ಕಾಣಬಹುದು. ಈ ಮೇಲ್ಸೇತುವೆ ಹುಲ್ಲು ಮತ್ತು ಮರಗಳಿಂದ ಆವೃತವಾಗಿದೆ. ಈ ಫೋಟೋವನ್ನು ಹಂಚಿಕೊಂಡ ಅನೇಕ ಬಳಕೆದಾರರು, ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಾಣಿಗಳ ಚಲನೆಗಾಗಿ ಈ ಸೇತುವೆಯನ್ನು ನಿರ್ಮಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ನಮ್ಮ ದೇಶ ಬದಲಾಗುತ್ತಿದೆ.. ಭಾರತದ ಮೊದಲ ಪ್ರಾಣಿ ಸೇತುವೆ ಅನ್ನು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ನಿರ್ಮಿಸಲಾಗಿದೆ. ಪ್ರಾಣಿಗಳು ಡಿಕ್ಕಿ ಹೊಡೆಯದಂತೆ ರಕ್ಷಿಸಲು ಇದನ್ನು ನಿರ್ಮಿಸಲಾಗಿದೆ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ಪ್ರಾಣಿ ಸೇತುವೆ ಭಾರತದಲ್ಲಿಲ್ಲ, ಇದು ಸಿಂಗಾಪುರದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಫೋಟೋವನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಇದೇ ವೈರಲ್ ಫೋಟೋ ನಮಗೆ Reddit ನಲ್ಲಿ ಕಂಡಿತು. ಇದನ್ನು 9 ವರ್ಷದ ಹಿಂದೆ ಅಪ್ಲೋಡ್ ಮಾಡಲಾಗಿದೆ. ವಿವರಣೆಯ ಪ್ರಕಾರ, ಇದು ಸಿಂಗಾಪುರದಲ್ಲಿರುವ The Eco-Link@BKE ಸೇತುವೆಯ ಫೋಟೋ. ಹಾಗೆಯೆ allthatsinteresting.com ನಲ್ಲಿಯೂ ಇದೇ ಫೋಟೋ ಕಂಡುಕೊಂಡಿದ್ದೇವೆ. ಇದರಲ್ಲಿ ಕೂಡ ಈ ಫೋಟೋ ಸಿಂದಾಪುರದ್ದು ಎಂದು ನಮೋದಿಸಲಾಗಿದೆ.
ಈ ಮಾಹಿತಿಯ ಆಧಾರದ ಮೇಲೆ ಇನ್ನಷ್ಟು ಹುಡುಕಿದಾಗ, ದಿ ಡ್ರೈವ್ ಮತ್ತು ಟುಡೇಆನ್‌ಲೈನ್ ಪ್ರಕಟಿಸಿದ ಮಾಧ್ಯಮ ವರದಿಗಳು ನಮಗೆ ಕಂಡುಬಂದವು. ಈ ಎರಡೂ ವರದಿಗಳ ಪ್ರಕಾರ, ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವ ವಾಹನಗಳಿಂದಾಗಿ ಅನೇಕ ಪ್ರಾಣಿಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿವೆ. ಆದ್ದರಿಂದ, ಈ ಸೇತುವೆಯನ್ನು ಸಿಂಗಾಪುರದಲ್ಲಿ ಪ್ರಾಣಿಗಳು ರಸ್ತೆ ದಾಟಲು ನಿರ್ಮಿಸಲಾಗಿದೆ. ಇದನ್ನು 2011 ಮತ್ತು 2013 ರ ನಡುವೆ ನಿರ್ಮಿಸಲಾಯಿತು ಎಂದು ಬರೆಯಲಾಗಿದೆ. ಈ ಎರಡು ಸುದ್ದಿಗಳಲ್ಲಿ ವೈರಲ್ ಫೋಟೋಕ್ಕೆ ಹೋಲಿಕೆಯಾಗುವ ಮತ್ತೊಂದು ಆ್ಯಂಗಲ್ನ ಫೋಟೋ ಕಾಣಬಹುದು.
ಯೂಟ್ಯೂಬ್ನಲ್ಲಿ ಹುಡುಕಿದಾಗ, ಅಕ್ಟೋಬರ್ 8, 2017 ರಂದು LET ME KNOW ಹೆಸರಿನ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊ ನಮಗೆ ಸಿಕ್ಕಿತು. ಇದರಲ್ಲಿ ಕೂಡ ಅದೇ ವೈರಲ್ ಫೋಟೋವನ್ನು ಹಂಚಿಕೊಳ್ಳಲಾಗಿದ್ದು, ವೀಡಿಯೊದ ವಿವರಣೆಯು ಸಿಂಗಾಪುರದಲ್ಲಿ ಪ್ರಾಣಿಗಳು ಸುಲಭವಾಗಿ ರಸ್ತೆ ದಾಟಲು ಪ್ರಾಣಿ ಸೇತುವೆಯನ್ನು ನಿರ್ಮಿಸಲಾಗಿದೆ ಎಂದು ಹೇಳುತ್ತದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವೈರಲ್ ಆಗುತ್ತಿರುವ ಫೋಟೋ ಭಾರತದ್ದಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಇದು ಸಿಂಗಾಪುರದಲ್ಲಿ ನಿರ್ಮಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.
ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಈರೀತಿಯ ಸೇತುವೆ ಇದೆಯೇ?
ಕನ್ನಡ ಏಷ್ಯಾನೆಟ್ ಜುಲೈ 2 ರಂದು ಪ್ರಕಟಿಸಿರುವ ಸುದ್ದಿಯ ಪ್ರಕಾರ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೇಶದ ಮೊದಲ ವನ್ಯಜೀವಿ ಮೇಲ್ಸೇತುವೆ ಕಾರಿಡಾರ್ ಅನ್ನು ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ನಿರ್ಮಿಸಲು ಯೋಜನೆ ರೂಪಿಸಿದೆ. ಸುಮಾರು 12 ಕಿಲೋಮೀಟರ್ ವಿಭಾಗವು ರಣಥಂಬೋರ್ ಟೈಗರ್ ರಿಸರ್ವ್‌ನ ಬಫರ್ ವಲಯದ ಮೂಲಕ ಹಾದುಹೋಗುತ್ತದೆ. ಅಂತೆಯೆ ಜಿರಾಕ್‌ಪುರ ಬೈಪಾಸ್ ಯೋಜನೆಯ ಭಾಗವಾಗಿ ಪಂಜಾಬ್ ಕೂಡ ತನ್ನ ಮೊದಲ ನಗರ ವನ್ಯಜೀವಿ ಕಾರಿಡಾರ್ ಅನ್ನು ನಿರ್ಮಿಸಲು ಯೋಜಿಸಿದೆ.