Fact Check: ತೆಲಂಗಾಣದ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ಹುಡುಗಿಯರ ಮತಾಂತರಕ್ಕೆ ಯತ್ನಿಸಿದ್ದು ನಿಜವೇ?, ಇಲ್ಲಿದೆ ಸತ್ಯಾಂಶ
ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿನಿಯರಿಗೆ ನಮಾಜ್ ಮಾಡಲು ಕಲಿಸಿ ಮತಾಂತರ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಎಲ್ಲ ಕಡೆ ವೀಡಿಯೊ ಹರಿದಾಡುತ್ತಿದೆ.
By Vinay Bhat Published on 13 Sept 2024 9:08 PM ISTClaim: ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿನಿಯರಿಗೆ ನಮಾಜ್ ಮಾಡಲು ಕಲಿಸಿ ಮತಾಂತರ ಮಾಡುತ್ತಿದ್ದಾರೆ.
Fact: ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಯ ಆಡಳಿತ ಮಂಡಳಿಯಿಂದ ಅನುಮತಿ ಪಡೆದು ನಮಾಜ್ ಮಾಡಿದ್ದಾರೆ. ಇದರಲ್ಲಿ ಯಾವುದೇ ಹಿಂದೂ ವಿದ್ಯಾರ್ಥಿನಿಯರು ಪಾಲ್ಗೊಂಡಿಲ್ಲ.
ವ್ಯಕ್ತಿಯೋರ್ವ ಬಾಗಿಲು ತೆಗೆದು ಶಾಲೆಯ ಕ್ಲಾಸ್ ರೂಮ್ ಒಳಗೆ ಬಂದಾಗ ಕೆಲ ಬುರ್ಖಾ ಧರಿಸಿರುವ ವಿದ್ಯಾರ್ಥಿನಿಯರು ನಮಾಜ್ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ತೆಲಂಗಾಣದಲ್ಲಿ ನಡೆದ ಘಟನೆ ಎನ್ನಲಾಗುತ್ತಿದ್ದು, ಇಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿನಿಯರಿಗೆ ನಮಾಜ್ ಮಾಡಲು ಕಲಿಸಿ ಮತಾಂತರ ಮಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಎಲ್ಲ ಕಡೆ ವೀಡಿಯೊ ಹರಿದಾಡುತ್ತಿದೆ.
ಶ್ರೀ ರಾಮ ಸೇನೆ ಉಡುಪಿ ಎಂಬ ಫೇಸ್ಬುಕ್ ಖಾತೆಯಲ್ಲಿ ಸೆಪ್ಟೆಂಬರ್ 12, 2024 ರಂದು ಈ ವೀಡಿಯೊ ಅಪ್ಲೋಡ್ ಮಾಡಲಾಗಿದೆ. ಜೊತೆಗೆ ‘ತೆಲಂಗಾಣದಲ್ಲಿ ಶಾಲೆಯಲ್ಲಿ ಇಸ್ಲಾಂ ಮತಾಂತರ ಯತ್ನ. ಮುಚ್ಚಿದ ಬಾಗಿಲುಗಳ ಹಿಂದೆ, ಕ್ಲಾಸ್ ನಂತರ ಹಿಂದೂ ಹುಡುಗಿಯರಿಗೆ ಪ್ರಾರ್ಥನೆ ಕಲಿಸಿದ ಮುಸ್ಲಿಂ ಹುಡುಗಿಯರ ಬಂಧನ. ವಿದ್ಯಾರ್ಥಿ_ಜಿಹಾದ್’ ಎಂದು ಬರೆದುಕೊಂಡಿದ್ದಾರೆ.ಹಾಗೆಯೆ ಅರವಿಂದ ನಟರಾಜ್ ಎಂಬ ಎಕ್ಸ್ ಖಾತೆಯಲ್ಲಿ ಕೂಡ ಇದೇ ವೀಡಿಯೊ ಕಂಡುಬಂದಿದ್ದು, ‘ತೆಲಂಗಾಣದ ಶಾಲೆಯೊಂದರಲ್ಲಿ ಇಸ್ಲಾಮಿಕ್ ಮತಾಂತರದ ಆಚರಣೆಗಳು. ಮುಸ್ಲಿಂ ಹುಡುಗಿಯರು ಹಿಂದೂ ಹುಡುಗಿಯರಿಗೆ ತರಗತಿಗಳ ನಂತರ ಮುಚ್ಚಿದ ಬಾಗಿಲುಗಳ ಹಿಂದೆ ಪ್ರಾರ್ಥನೆ ಮಾಡಲು ಕಲಿಸುತ್ತಿರುವುದು ಕಂಡುಬಂದಿದೆ.’ ಎಂದು ಶೀರ್ಷಿಕೆ ನೀಡಿದ್ದಾರೆ.
தெலுங்கானாவில் உள்ள ஒரு பள்ளியில் இஸ்லாமிய மதமாற்ற முறைகள், மூடிய கதவுகளுக்குப் பின் வகுப்புகளுக்குப் பிறகு இந்துப் பெண்களுக்கு நமாஸ் செய்ய கற்றுக்கொடுக்கும் முஸ்லீம் பெண்கள் கண்டு பிடிக்கப்பட்டனர். pic.twitter.com/ubDUMWFX7g
— ARAVINTH NATARAAJ 🧡💚 MODIJI FAMILY (@ilove_bjpnation) September 8, 2024
Fact Check:
ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇಲ್ಲಿ ಯಾವುದೇ ಮತಾಂತರದ ಘಟನೆಯಾಗಲಿ ಅಥವಾ ಹಿಂದೂ ವಿದ್ಯಾರ್ಥಿನಿಯರಿಗೆ ನಮಾಜ್ ಮಾಡಲು ಹೇಳಿಕೊಡುವಂತಹ ಘಟನೆ ನಡೆದಿಲ್ಲ.
ಸಿಯಸತ್ ಯೂಟ್ಯೂಬ್ ಚಾನೆಲ್ನಲ್ಲೂ ಈ ವೀಡಿಯೊ ಅಪ್ಲೋಡ್ ಮಾಡಲಾಗಿದೆ.
ಇನ್ನು ABP Live ಕೂಡ ಈ ಘಟನೆ ಬಗ್ಗೆ ವರದಿ ಮಾಡಿದೆ. ‘ತೆಲಂಗಾಣದ ವನಪರ್ತಿ ಪಟ್ಟಣದ ಚಾಣಕ್ಯ ಪ್ರೌಢಶಾಲೆಯಲ್ಲಿ ಶಾಲಾ ಆವರಣದಲ್ಲಿ ನಮಾಜ್ ಮಾಡುತ್ತಿದ್ದ ಕೆಲವು ಮುಸ್ಲಿಂ ಬಾಲಕಿಯರ ಮೇಲೆ ಬಜರಂಗದಳ ಸದಸ್ಯರು ಹಲ್ಲೆ ನಡೆಸಿದ್ದಾರೆ. ಈ ಘಟನೆಯನ್ನು ಬಹಿರಂಗಪಡಿಸಿದ ಮಜ್ಲಿಸ್ ಬಚಾವೋ ತೆಹ್ರೀಕ್ (ಎಂಬಿಟಿ) ವಕ್ತಾರ ಅಮ್ಜೆದ್ ಉಲ್ಲಾ ಖಾನ್, ಭಾಗಿಯಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ’ ಎಂದು ಸುದ್ದಿಯಲ್ಲಿದೆ.
ಈ ಕುರಿತು ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ವನಪರ್ತಿ ಟೌನ್ ಪೊಲೀಸರನ್ನು ಸಂಪರ್ಕಿಸಿದ್ದೇವೆ. ಈ ಘಟನೆ ಬಗ್ಗೆ ಮಾಹಿತಿ ನೀಡಿದ ಅವರು, ‘ಶಾಲೆಯ ಒಳಗೆ ನಮಾಜ್ ಮಾಡಿದ್ದು ಮುಸ್ಲಿಂ ವಿದ್ಯಾರ್ಥಿನಿಯರು. ಅವರು ಶಾಲೆಯ ಆಡಳಿತ ಮಂಡಳಿಯಿಂದ ಅನುಮತಿ ಪಡೆದುಕೊಂಡಿದ್ದರು. ಇದರಲ್ಲಿ ಯಾವುದೇ ಹಿಂದೂ ವಿದ್ಯಾರ್ಥಿನಿಯರು ಪಾಲ್ಗೊಂಡಿಲ್ಲ. ಮತಾಂತರ ಮಾಡಿಸುವಂತಹ ಯಾವುದೇ ಘಟನೆ ನಡೆದಿಲ್ಲ’ ಎಂದು ಹೇಳಿದ್ದಾರೆ.
ನಮಾಜ್ ಮಾಡುತ್ತಿದ್ದ ಕೆಲವು ಮುಸ್ಲಿಂ ಬಾಲಕಿಯರ ಮೇಲೆ ಬಜರಂಗದಳ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಇದೇ ವೀಡಿಯೊವನ್ನು ಮಾಧ್ಯಮಗಳು ಪ್ರಸಾರ ಮಾಡಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಹೀಗಾಗಿ ತೆಲಂಗಾಣದ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಂದೂ ಹುಡುಗಿಯರ ಮತಾಂತರಕ್ಕೆ ಯತ್ನಿಸಿದ್ದು ಮತ್ತು ನಮಾಜ್ ಮಾಡಲು ಕಲಿಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.