Fact Check: ಇಸ್ಲಾಮನ್ನು ದೇಶದಿಂದ ನಾಶ ಮಾಡಲು ಜಪಾನ್ ಹೊಸ ಕಾನೂನು ಜಾರಿ ಮಾಡಿದೆಯೇ?, ಸತ್ಯ ಇಲ್ಲಿದೆ
ಜಪಾನಿನ ಸಂಸತ್ ಸದಸ್ಯರು ಹರ್ಷೋದ್ಗಾರ ಮಾಡುತ್ತಿರುವುದನ್ನು ಕಾಣಬಹುದು. ಜಪಾನ್ ತನ್ನ ದೇಶದಿಂದ ಇಸ್ಲಾಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಹೊಸ ಕಾನೂನುಗಳನ್ನು ಜಾರಿಗೆ ತಂದಿದೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಶೇರ್ ಮಾಡಲಾಗುತ್ತಿದೆ.
By - Vinay Bhat |
Claim:ಇಸ್ಲಾಮನ್ನು ದೇಶದಿಂದ ನಾಶ ಮಾಡಲು ಜಪಾನ್ ಹೊಸ ಕಾನೂನು ಜಾರಿ ಮಾಡಿದೆ.
Fact:ಹಕ್ಕು ಸುಳ್ಳು. ಜಪಾನ್ ಅಂತಹ ಯಾವುದೇ ಕಾನೂನನ್ನು ಅಂಗೀಕರಿಸಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಜಪಾನಿನ ಸಂಸತ್ ಸದಸ್ಯರು ಹರ್ಷೋದ್ಗಾರ ಮಾಡುತ್ತಿರುವುದನ್ನು ಕಾಣಬಹುದು. ಜಪಾನ್ ತನ್ನ ದೇಶದಿಂದ ಇಸ್ಲಾಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಹೊಸ ಕಾನೂನುಗಳನ್ನು ಜಾರಿಗೆ ತಂದಿದೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಶೇರ್ ಮಾಡಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಇಸ್ಲಾಮನ್ನು ನಮ್ಮ ದೇಶದಿಂದ ಶುದ್ಧವಾಗಿ ನಾಶ ಮಾಡಲು ಜಪಾನ್ ಹೊಸ ಕಾನೂನು ಕಾನೂನು ಜಾರಿ ಮಾಡಿದೆ. ಹಲಾಲ್ ಹತ್ಯೆ, ನಮಾಜ್ ಪ್ರಾರ್ಥನೆ ಮಾಡಲು ಲೌಡ್ ಸ್ಪೀಕರ್ ಶಬ್ದ ದೊಡ್ಡ ಮಸ್ಜಿದ್ಗಳಲ್ಲಿ ನಿರ್ಬಂಧಿಸಿದೆ. ಇಸ್ಲಾಂ ಯೂರೋಪ್ ದೇಶಗಳಲ್ಲಿ ಮಾಡುತ್ತಿರುವುದನ್ನು ಜಪಾನ್ ನೋಡಿದೆ. ಕಾಲ ಮಿಂಚಿ ಹೋಗುವ ಮುನ್ನ ಎಚ್ಚೆತ್ತಿಕೊಂಡ ಜಪಾನ್’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಜಪಾನ್ ಅಂತಹ ಯಾವುದೇ ಕಾನೂನನ್ನು ಅಂಗೀಕರಿಸಿಲ್ಲ. ವೈರಲ್ ವೀಡಿಯೊ, ಜಪಾನ್‌ನ ಮೊದಲ ಮಹಿಳಾ ಪ್ರಧಾನಿ ಸನೇ ತಕೈಶಿ ಅವರು ಜನವರಿ 23 ರಂದು ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸುವುದಾಗಿದೆ.
ವೈರಲ್ ವೀಡಿಯೊವನ್ನು ಪರಿಶೀಲಿಸಲು, ನಾವು ವೀಡಿಯೊದ ಪ್ರಮುಖ ಚೌಕಟ್ಟುಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಾಟ ನಡೆಸಿದ್ದೇವೆ. ಆಗ ಜನವರಿ 23 ರಂದು ಅಮೇರಿಕನ್ ಪಬ್ಲಿಕ್ ಟೆಲಿವಿಷನ್(APT) ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊ ಸಿಕ್ಕಿದೆ.
ವೀಡಿಯೊದೊಂದಿಗೆ ನೀಡಲಾದ ಮಾಹಿತಿಯೆಂದರೆ, ಜಪಾನಿನ ಸಂಸತ್ತಿನ ಕೆಳಮನೆಯನ್ನು ಅಧಿಕೃತವಾಗಿ ವಿಸರ್ಜಿಸಲಾಗಿದೆ, ಇದು ಫೆಬ್ರವರಿ 8 ರಂದು ನಡೆಯಲಿರುವ ಸ್ನ್ಯಾಪ್ ಚುನಾವಣೆಗೆ ದಾರಿ ಮಾಡಿಕೊಡುತ್ತದೆ. ಈ ಅನಿರೀಕ್ಷಿತ ನಡೆಯನ್ನು ಜಪಾನಿನ ರಾಜಕೀಯದಲ್ಲಿ ಪ್ರಮುಖ ಬದಲಾವಣೆ ಎಂದು ಪರಿಗಣಿಸಲಾಗುತ್ತಿದೆ, ಏಕೆಂದರೆ ಪ್ರಧಾನಿ ದೇಶದ ಭವಿಷ್ಯದ ದಿಕ್ಕನ್ನು ನಿರ್ಧರಿಸಲು ಮತದಾರರಿಗೆ ಮನವಿ ಮಾಡಿದ್ದಾರೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್ ಮಾಧ್ಯಮದಲ್ಲಿ ವೈರಲ್ ವೀಡಿಯೊಂದಿಗೆ ಸುದ್ದಿ ಪ್ರಕಟವಾಗಿರುವುದು ಕಂಡಿದೆ. ಜಪಾನ್‌ನ ಮೊದಲ ಮಹಿಳಾ ಪ್ರಧಾನಿ ಸನೇ ತಕೈಸಿ ಅವರು ಜನವರಿ 23, 2026 ರಂದು ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸುವುದಾಗಿ ಘೋಷಿಸಿದರು ಎಂಬ ಮಾಹಿತಿ ಇದರಲ್ಲಿದೆ.
ಗ್ಲೋಬಲ್ ನ್ಯೂಸ್ ಮತ್ತು ಸಿಎನ್ಎನ್-ನ್ಯೂಸ್ 18 ಕೂಡ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಇದೇ ವೈರಲ್ ವೀಡಿಯೊ ಹಂಚಿಕೊಂಡಿದ್ದು, ಇದು ಜಪಾನಿನ ಸಂಸತ್ತನ್ನು ವಿಸರ್ಜಿಸಲು ಅಂಗೀಕರಿಸಲಾದ ನಿರ್ಣಯದ ವೀಡಿಯೊ ಎಂದು ತಿಳಿದುಬಂದಿದೆ.
ಬಳಿಕ ನಾವು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿ ಜಪಾನ್ ಸರ್ಕಾರ ಸಂಸತ್ತಿನಲ್ಲಿ ಕಾನೂನು ಜಾರಿಗೆ ತಂದಿದೆಯೇ ಎಂದು ಕೀವರ್ಡ್‌ಗಳ ಮೂಲಕ ಹುಡುಕಿದೆವು. ಆದರೆ ಈರೀತಿಯ ಯಾವ ಶಾಸನವನ್ನು ಅಂಗೀಕರಿಸಲಾಗಿದೆ ಎಂಬ ಸುದ್ದಿಗಳು ನಮಗೆ ಸಿಗಲಿಲ್ಲ.
ನಾವು ಜಪಾನ್ ತನ್ನ ದೇಶದಿಂದ ಇಸ್ಲಾಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಹೊಸ ಕಾನೂನುಗಳನ್ನು ಜಾರಿಗೆ ತಂದಿದೆಯೇ ಎಂದು ಜಪಾನಿನ ಸಂವಿಧಾನವನ್ನು ನೋಡಿದ್ದೇವೆ. ಅದರಲ್ಲಿ ಆರ್ಟಿಕಲ್20-ರಲ್ಲಿ ಧರ್ಮ ಸ್ವಾತಂತ್ರ್ಯದ ಬಗ್ಗೆ ಉಲ್ಲೇಖಿಸಲಾಗಿದೆ. "ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಲಾಗಿದೆ. ಯಾವುದೇ ಧಾರ್ಮಿಕ ಸಂಘಟನೆಯು ರಾಜ್ಯದಿಂದ ವಿಶೇಷ ಹಕ್ಕುಗಳನ್ನು ಪಡೆಯಬಾರದು. ಯಾವುದೇ ರಾಜಕೀಯ ಅಧಿಕಾರವನ್ನು ಚಲಾಯಿಸಬಾರದು. ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾರನ್ನೂ ಒತ್ತಾಯಿಸಬಾರದು. ರಾಜ್ಯ ಮತ್ತು ಅದರ ಸಂಸ್ಥೆಗಳು ಧಾರ್ಮಿಕ ಶಿಕ್ಷಣ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಬೇಕು" ಎಂದು ಅದು ಹೇಳಿದೆ. ಇಸ್ಲಾಂ ಧರ್ಮವನ್ನು ನಿಷೇಧಿಸಲಾಗಿದೆ ಮತ್ತು ನಿರ್ಬಂಧಿಸಲಾಗಿದೆ ಎಂಬ ಮಾಹಿತಿಯು ಇದರಲ್ಲಿಲ್ಲ.