Fact Check: ಸರ್ಕಾರದಿಂದ ರಕ್ತದ ಅವಶ್ಯಕತೆಗೆ 104 ಎಂಬ ವಿಶೇಷ ಸಂಖ್ಯೆ?, ಸತ್ಯ ಇಲ್ಲಿದೆ ನೋಡಿ
ಭಾರತದಲ್ಲಿ ರಕ್ತದ ಅವಶ್ಯಕತೆಗಾಗಿ ಸರ್ಕಾರವು 104 ಸಹಾಯವಾಣಿ ಸಂಖ್ಯೆಯೊಂದಿಗೆ ಹೊಸ 'ಬ್ಲಡ್ ಆನ್ ಕಾಲ್' ಸೇವೆಯನ್ನು ಪ್ರಾರಂಭಿಸಿದೆ ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
By - Vinay Bhat |
Claim:ರಕ್ತದ ಅವಶ್ಯಕತೆಗಾಗಿ ಸರ್ಕಾರವು 104 ಸಹಾಯವಾಣಿ ಸಂಖ್ಯೆಯೊಂದಿಗೆ ಹೊಸ 'ಬ್ಲಡ್ ಆನ್ ಕಾಲ್' ಸೇವೆಯನ್ನು ಪ್ರಾರಂಭಿಸಿದೆ.
Fact:ಇದು ಸಂಪೂರ್ಣ ಸುಳ್ಳು ಎಂಬುದು ತಿಳಿದುಬಂದಿದೆ. ರಕ್ತದ ಅವಶ್ಯಕತೆಗೆ ಇಂತಹ ಯಾವುದೇ ಹೆಲ್ಪ್ ಲೈನ್ ಚಾಲ್ತಿಯಲ್ಲಿ ಇಲ್ಲ.
ಭಾರತದಲ್ಲಿ ರಕ್ತದ ಅವಶ್ಯಕತೆಗಾಗಿ ಸರ್ಕಾರವು 104 ಸಹಾಯವಾಣಿ ಸಂಖ್ಯೆಯೊಂದಿಗೆ ಹೊಸ 'ಬ್ಲಡ್ ಆನ್ ಕಾಲ್' ಸೇವೆಯನ್ನು ಪ್ರಾರಂಭಿಸಿದೆ ಎಂಬ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫೇಸ್ಬುಕ್ ಬಳಕೆದಾರರೊಬ್ಬರು, ‘‘ಸರ್ಕಾರದ ಹೊಸ ಯೋಜನೆ- ಇಂದಿನಿಂದ ಭಾರತದಲ್ಲಿ ರಕ್ತದ ಅವಶ್ಯಕತೆಗಳಿಗಾಗಿ "104" ಎಂಬ ವಿಶೇಷ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಈ ಸೇವೆಯ ಹೆಸರನ್ನು "Blood_On_Call" ಎಂದು ಕರೆಯುತ್ತಾರೆ. ಈ ಸಂಖ್ಯೆಗೆ ಕರೆ ಮಾಡಿದ ನಂತರ, 40 ಕಿಲೋಮೀಟರ್ ವ್ಯಾಪ್ತಿಯೊಳಗೆ, ನಾಲ್ಕು ಗಂಟೆಗಳ ಒಳಗೆ ರಕ್ತವನ್ನು ತಲುಪಿಸಲಾಗುತ್ತದೆ. ಒಂದು ಬಾಟಲಿಗೆ ₹450/- ಮತ್ತು ಸಾರಿಗೆ ಶುಲ್ಕವಾಗಿ ₹100/- ವಿಧಿಸಲಾಗುತ್ತದೆ. ದಯವಿಟ್ಟು ಈ ಸಂದೇಶವನ್ನು ನಿಮ್ಮ ಸ್ನೇಹಿತರು, ಬಂಧುಗಳು ಮತ್ತು ಗುಂಪುಗಳಲ್ಲಿ ಹಂಚಿಕೊಳ್ಳಿ. ಗಮನಿಸಿ — ಈ ಸೌಲಭ್ಯ ಅನೇಕ ಜೀವಗಳನ್ನು ಉಳಿಸಬಹುದು’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಇದು ಸಂಪೂರ್ಣ ಸುಳ್ಳು ಎಂಬುದು ತಿಳಿದುಬಂದಿದೆ. ರಕ್ತದ ಅವಶ್ಯಕತೆಗೆ ಇಂತಹ ಯಾವುದೇ ಹೆಲ್ಪ್ ಲೈನ್ ಚಾಲ್ತಿಯಲ್ಲಿ ಇಲ್ಲ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ನಲ್ಲಿ ಹುಡುಕಾಟವನ್ನು ನಡೆಸಿದಾಗ, 104 ಕರೆ ಮಾಡಿದರೆ ರಕ್ತ ತಲುಪಿಸುವ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ನಮಗೆ ಸಿಗಲಿಲ್ಲ. ಕರ್ನಾಟಕ ರಾಜ್ಯಗಳಲ್ಲಿ ಸರ್ಕಾರದಿಂದ ಯಾವುದೇ ಪ್ರಕಟಣೆಗಳಿಲ್ಲ ಎಂದು ನಾವು ಖಚಿತ ಪಡಿಸಿಕೊಂಡಿದ್ದೇವೆ.
ಕೀವರ್ಡ್ ಹುಡುಕಾಟದಲ್ಲಿ, ನಮಗೆ ಜನವರಿ 7, 2014 ರ ಟೈಮ್ಸ್ ಆಫ್ ಇಂಡಿಯಾವರದಿ ಕಂಡುಬಂದಿದೆ. ‘‘ರಕ್ತದ ಅಗತ್ಯವಿರುವವರು ಈ ಸಂಖ್ಯೆಗೆ ಕರೆ ಮಾಡಬಹುದು’’ ಎಂಬ ಶೀರ್ಷಿಕೆ ನೀಡಲಾಗಿದೆ. ಮಹಾರಾಷ್ಟ್ರ ಸರ್ಕಾರವು ರಾಜ್ಯಾದ್ಯಂತ ‘ಜೀವನ್ ಅಮೃತ್ ಸೇವಾ’ ಅಥವಾ ‘ಬ್ಲಡ್-ಆನ್-ಕಾಲ್' ಎಂಬ ಆರೋಗ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ರೋಗಿಗಳಿಗೆ ಅಗತ್ಯವಿರುವ ರಕ್ತವು ಈಗ ಕೇವಲ ಒಂದು ಫೋನ್ ಕರೆಯ ಮೂಲಕ ಸಿಗುತ್ತದೆ. ಪುಣೆಯ ಔಂಧ್ ಸಿವಿಲ್ ಆಸ್ಪತ್ರೆಯಲ್ಲಿ ಈ ಉದ್ದೇಶಕ್ಕಾಗಿ ಕಾಲ್ ಸೆಂಟರ್ ಅನ್ನು ಸ್ಥಾಪಿಸಲಾಗಿದೆ. ಜನರು ತಮ್ಮ ಅವಶ್ಯಕತೆಗಳೊಂದಿಗೆ ಕಾಲ್ ಸೆಂಟರ್ ಅನ್ನು ಸಂಪರ್ಕಿಸಲು 104 ಅನ್ನು ಡಯಲ್ ಮಾಡಬಹುದು ಮತ್ತು ಮಾಹಿತಿಯನ್ನು ಆಯಾ ಜಿಲ್ಲಾ ರಕ್ತ ಬ್ಯಾಂಕ್‌ಗಳಿಗೆ ರವಾನಿಸಲಾಗುತ್ತದೆ ಎಂಬ ಮಾಹಿತಿ ಇದರಲ್ಲಿದೆ.
2022 ರ ವರದಿಗಳ ಪ್ರಕಾರ, ಮಹಾರಾಷ್ಟ್ರ ಸರ್ಕಾರವು 2022 ರಲ್ಲಿ ಈ ಸೇವೆಗಳನ್ನು ನಿಲ್ಲಿಸಿತು. ಮಹಾರಾಷ್ಟ್ರದಲ್ಲಿ ಟೋಲ್-ಫ್ರೀ ಸಂಖ್ಯೆ 104 ನಲ್ಲಿ ಲಭ್ಯವಿರುವ ರಕ್ತ-ಆನ್-ಕಾಲ್ ಸೇವೆಯನ್ನು ಏಪ್ರಿಲ್ 1, 2022 ರಿಂದ ರಾಜ್ಯ ಸರ್ಕಾರವು ನಿಲ್ಲಿಸಿತು. ಈ ವಿಷಯದ ಕುರಿತು ಮಾತನಾಡಿದ ರಾಜ್ಯ ರಕ್ತ ವರ್ಗಾವಣೆ ಮಂಡಳಿಯ (SBTC) ಸಹಾಯಕ ನಿರ್ದೇಶಕ ಡಾ. ಅರುಣ್ ಥೋರಟ್, ಇದು ಆರ್ಥಿಕವಾಗಿ ಹೊರೆಯಾಗಿದ್ದರಿಂದ ಸೇವೆಯನ್ನು ನಿಲ್ಲಿಸಲಾಗುತ್ತಿದೆ ಎಂದು ಹೇಳಿದರು.
ಹುಡುಕಾಟದ ವೇಳೆ, ಈ ಹಿಂದೆ ಕೂಡ ಇದೇರೀತಿಯ ಹೇಳಿಕೆ ಬೇರೆ ರಾಜ್ಯಗಳಲ್ಲಿ ವೈರಲ್ ಆಗಿತ್ತು ಎಂಬುದು ಕಂಡುಬಂದಿದೆ. ಆ ಸಂದರ್ಭ ವೈರಲ್ ಹೇಳಿಕೆ ಸುಳ್ಳು ಎಂದು ಪತ್ರಿಕಾ ಮಾಹಿತಿ ಬ್ಯೂರೋ (PIB) ನವೆಂಬರ್ 5, 2024 ರಂದು ಎಕ್ಸ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದೆ. ಅದು ಅವುಗಳನ್ನು ದಾರಿತಪ್ಪಿಸುವಂತಿದೆ ಎಂದು ಹೇಳಿದೆ. ಸರ್ಕಾರವು ಅಂತಹ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
Claim: Govt. of India has launched a pan-India helpline number 1⃣0⃣4⃣ "Blood on Call" to meet the requirement for blood#PIBFactCheck☑️This claim is #misleading☑️GOI is not running any such scheme !!☑️This number is used for various helpline services in some states pic.twitter.com/zTDVKTwhF8
— PIB Fact Check (@PIBFactCheck) November 5, 2024
ಅದೇ ರೀತಿ ಕರ್ನಾಟಕದಲ್ಲಿ 104 ಎಂಬ ಹೆಲ್ಪ್ ಲೈನ್ ರಕ್ತ ತಲುಪಿಸುವ ಕುರಿತು ಇಲ್ಲ ಬದಲಾಗಿ ಇದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಂದಿದ್ದು, ಆರೋಗ್ಯ ಸೇವೆಗಳಿಗೆ ಮೀಸಲಾಗಿರಿಸಿದೆ. ಕೋವಿಡ್ ಸಂದರ್ಭದಲ್ಲಿ ಕೋವಿಡ್-19 ರಾಜ್ಯ ನಿಯಂತ್ರಣ ಕೊಠಡಿಯ ಸಂಖ್ಯೆಯಾಗಿ ಇದು ಕಾರ್ಯನಿರ್ವಹಣೆಯಲ್ಲಿತ್ತು ಎಂದು ಗೊತ್ತಾಗಿದೆ. ಈ ಮಾಹಿತಿಯು ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣದ ಸಹಾಯವಾಣಿ ಸಂಪರ್ಕ ವಿಭಾಗದಲ್ಲಿದೆ.
ಪರಿಶೀಲನೆಗಾಗಿ ನಾವು 104ಗೆ ಡಯಲ್ ಮಾಡಿ ನೋಡಿಡಿದ್ದೇವೆ. ಆದರೆ, ಈ ಸಂದರ್ಭ ಕರೆ ಯಾವದಕ್ಕೂ ಕನೆಕ್ಟ್ ಆಗದೇ ಇರುವುದನ್ನು ಕಂಡುಕೊಂಡೆವು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ರಾಜ್ಯದಲ್ಲಿ ರಕ್ತದ ಅವಶ್ಯಕತೆಗೆ 104 ಹೆಲ್ಪ್ ಲೈನ್ಗೆ ಕರೆ ಮಾಡಬಹುದು ಎಂದು ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.