ಸ್ಯಾಂಡಲ್ವುಡ್ನ ಖ್ಯಾತ ನಟ ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಪ್ರಯುಕ್ತ 2011 ರಲ್ಲಿ ಬಿಡುಗಡೆ ಆಗಿದ್ದ ಇವರ ನಟನೆಯ ವಿಷ್ಣುವರ್ಧನ ಸಿನಿಮಾ ರೀ- ರಿಲೀಸ್ ಆಗಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ವಿಷ್ಣುವರ್ಧನ ಸಿನಿಮಾ ರೀ- ರಿಲೀಸ್ನಲ್ಲಿ ಬಂದ ಎಲ್ಲ ಹಣವನ್ನು ಸುದೀಪ್ ಅವರು ಹಿರಿಯ ನಟ ಹರೀಶ್ ರಾಯ್ ಅವರಿಗೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹರೀಶ್ ರಾಯ್ ಅವರು ಥೈರಾಯ್ಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಇತ್ತೀಚೆಗಷ್ಟೆ ಅವರು ಸಾಮಾಜಿಕ ಜಾಲತಾಣದ ಮೂಲಕ ಸಹಾಯ ಹಸ್ತ ಚಾಚಿದ್ದರು.
ಫೇಸ್ಬುಕ್ ಬಳಕೆದಾರರೊಬ್ಬರು ಹರೀಶ್ ರಾಯ್ ಹಾಗೂ ಸುದೀಪ್ ಅವರ ಫೋಟೋ ಹಂಚಿಕೊಂಡು, ‘‘ವಿಷ್ಣುವರ್ಧನ ಸಿನಿಮಾ RE-RELEASE ನಲ್ಲಿ ಬರುವ ಸಂಪೂರ್ಣ ಹಣವನ್ನು ಹರೀಶ್ ರಾಯ್ ಅವರ ಚಿಕಿತ್ಸೆಗೆ ನೀಡುವುದಾಗಿ ಕಿಚ್ಚ ಸುದೀಪ್ ಪ್ರಕಟಿಸಿದ್ದಾರೆ’’ ಎಂದು ಬರೆಯಲಾಗಿದೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ಅನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಸುದೀಪ್ ಅವರು ಈರೀತಿಯ ಯಾವುದೇ ಹೇಳಿಕೆ ನೀಡಿಲ್ಲ. ಇದನ್ನು ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ.
ವಿಷ್ಣುವರ್ಧನ ಸಿನಿಮಾದ ರೀ- ರಿಲೀಸ್ ಬಂದ ಎಲ್ಲ ಹಣವನ್ನು ಸುದೀಪ್ ಅವರು ಹರೀಶ್ ರಾಯ್ ಅವರಿಗೆ ನೀಡಲಿದ್ದಾರೆಯೇ ಎಂದು ಪರಿಶೀಲಿಸಲು ನಾವು ಮೊದಲಿಗೆ ಗೂಗಲ್ನಲ್ಲಿ ಈ ಕುರಿತು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆದರೆ, ಈ ಬಗ್ಗೆ ಯಾವುದೇ ವಿಶ್ವಾಸರ್ಹ ವರದಿ ನಮಗೆ ಕಂಡುಬಂದಿಲ್ಲ. ಸುದೀಪ್ ಅವರು ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದರೆ ಅದು ಮಾಧ್ಯಮದಲ್ಲಿ ದೊಡ್ಡ ಸುದ್ದಿ ಆಗಿರುತ್ತಿತ್ತು. ಆದರೆ, ಈ ಕುರಿತು ಒಂದೇ ಒಂದು ವರದಿ ಆಗಿಲ್ಲ.
ಬಳಿಕ ನಾವು ಸುದೀಪ್ ಅವರ ಸಾಮಾಜಿಕ ಮಾಧ್ಯಮ ಖಾತೆಯನ್ನು ಪರಿಶೀಲಿಸಿದ್ದೇವೆ. ಇದರಲ್ಲೂ ಹರೀಶ್ ರಾಯ್ಗೆ ಸಹಾಯ ಮಾಡುವ ಬಗ್ಗೆ ಎಲ್ಲೂ ಪೋಸ್ಟ್ ಕಂಡುಬಂದಿಲ್ಲ.
ಬಳಿಕ ನಾವು ಯೂಟ್ಯೂಬ್ನಲ್ಲಿ ‘ಸುದೀಪ್ ಹರೀಶ್ ರಾಯ್’ ಎಂಬ ಕೀವರ್ಡ್ ಬಳಸಿ ಇತ್ತೀಚಿನ ಸುದ್ದಿ ಹುಡುಕಿದ್ದೇವೆ. ಈ ಸಂದರ್ಭ ಈ ವೈರಲ್ ಪೋಸ್ಟ್ ಬಗ್ಗೆ ಕಿಚ್ಚ ಸುದೀಪ್ ಅವರು ಸ್ಪಷ್ಟನೆ ನೀಡಿರುವ ವೀಡಿಯೊ ಸಿಕ್ಕಿತು. ಮಿ. ಡಿ ಪಿಚ್ಚರ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಸೆ. 1 ರಂದು ಅಪ್ಲೋಡ್ ಮಾಡಿದ ವೀಡಿಯೊದಲ್ಲಿ ಸುದೀಪ್ ಅವರಿಗೆ ಪತ್ರಕರ್ತರೊಬ್ಬರು, ‘‘ವಿಷ್ಟುವರ್ಧನ್ ಸಿನಿಮಾದ ರೀ-ರಿಲೀಸ್ನಲ್ಲಿ ಬಂದ ಹಣವನ್ನು ಹರೀಶ್ ರಾಯ್ ಅವರ ಮೆಡಿಕಲ್ ಖರ್ಚಿಗೆ ಕೊಡುತ್ತೀರಿ ಎಂದು ಸುದ್ದಿಯಾಗಿತ್ತು ಅದು ನಿಜವೇ?’’ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸುದೀಪ್, ‘‘ಇಲ್ಲ ಅದು ಸುಳ್ಳು.. ವಿಷ್ಟುವರ್ಧನ್ ಸಿನಿಮಾ ರಿಲೀಸ್ಗು ನನಗೂ ಯಾವುದೇ ಸಂಬಂಧವಿಲ್ಲ. ಸಿನಿಮಾ ರಿಲೀಸ್ ಮಾಡುತ್ತಿರುವುದು ನಿರ್ದೇಶಕರ ನಿರ್ಧಾರ.. ಅವರು ನನ್ನ ಹುಟ್ಟುಹಬ್ಬದ ಖುಷಿಗೆ ರಿಲೀಸ್ ಮಾಡುತ್ತಿದ್ದಾರೆ. ಈ ಸಿನಿಮಾ ರೀ-ರಿಲೀಸ್ಗು ನನಗೂ ಯಾವುದೇ ಸಂಬಂಧವಿಲ್ಲ.. ಅಲ್ಲದೆ ಹಣ ಕೊಡುವ ಆರೀತಿಯ ಸ್ಟೇಟ್ಮೆಂಟ್ ಕೂಡ ನಾನು ಎಲ್ಲೂ ಕೊಟ್ಟಿಲ್ಲ’’ ಎಂದು ಸ್ಪಷ್ಟಪಡಿಸಿದ್ದಾರೆ. ಈ ವೀಡಿಯೊದ 36ನೇ ಸೆಕೆಂಡ್ ಬಳಿಕ ಈ ಮಾತುಕತೆ ಕೇಳಬಹುದು.
ಹಾಗೆಯೆ ನ್ಯಾಷನಲ್ ಟಿವಿ ಯೂಟ್ಯೂಬ್ ಚಾನೆಲ್ನಲ್ಲಿ ಕೂಡ ಸೆ. 1 ರಂದು ‘‘ನಾನೂ ಹರೀಶ್ ರೈಗೆ ಯಾವುದೇ ಹಣ ಸಹಾಯ ಮಾಡಿಲ್ಲ: ಕಿಚ್ಚ ಸುದೀಪ್’’ ಎಂಬ ಹೆಡ್ಲೈನ್ನೊಂದಿಗೆ ಸುದೀಪ್ ಅವರ ಸ್ಪಷ್ಟನೆಯ ವೀಡಿಯೊ ಕಂಡುಕೊಂಡಿದ್ದೇವೆ.
ಕ್ಯಾನ್ಸರ್ನಿಂದ ಬಳಲುತ್ತಿರುವ ಹರೀಶ್ ರಾಯ್ ಅವರಿಗೆ ಇತರೆ ನಟರು ಸಹಾಯ ಮಾಡಿದ್ದಾರ ಎಂದು ಹುಡುಕಿದಾಗ, ಹರೀಶ್ ರಾಯ್ ಕ್ಯಾನ್ಸರ್ ಚಿಕಿತ್ಸೆಗೆ ಧ್ರುವ ಸರ್ಜಾ ₹11 ಲಕ್ಷ ನೆರವು ನೀಡಿದ್ದಾರೆ ಎಂದು ಆಗಸ್ಟ್ 31 ರಂದು ವಿಜಯ ಕರ್ನಾಟಕ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ವಿಷ್ಣುವರ್ಧನ ಸಿನಿಮಾ ರೀ-ರಿಲೀಸ್ನಲ್ಲಿ ಬಂದ ಹಣವನ್ನು ಹರೀಶ್ ರಾಯ್ ಚಿಕಿತ್ಸೆಗೆ ನೀಡುವುದಾಗಿ ಸುದೀಪ್ ಹೇಳಿದ್ದಾರೆ ಎಂಬ ಪೋಸ್ಟ್ ಸಂಪೂರ್ಣ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.