Fact Check: ಕೋಲ್ಕತ್ತಾ ಅತ್ಯಾಚಾರ ಸಂತ್ರಸ್ತೆಯ ಶವವನ್ನು ಆಸ್ಪತ್ರೆಯಿಂದ ತಂದೆ ತೆಗೆದುಕೊಂಡು ಹೋಗುತ್ತಿದ್ದಾರೆಂಬ ವೀಡಿಯೊ ಫೇಕ್

ಕೋಲ್ಕತ್ತಾದ ಅತ್ಯಾಚಾರ-ಹತ್ಯೆ ಪ್ರಕರಣದ ಸಂತ್ರಸ್ತೆಯ ತಂದೆ, ತಮ್ಮ ಮಗಳ ಶವವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಅರ್ಥದೊಂದಿಗೆ ವೀಡಿಯೊ ಹರಿದಾಡುತ್ತಿದೆ.

By Vinay Bhat  Published on  23 Aug 2024 10:47 AM GMT
Fact Check: ಕೋಲ್ಕತ್ತಾ ಅತ್ಯಾಚಾರ ಸಂತ್ರಸ್ತೆಯ ಶವವನ್ನು ಆಸ್ಪತ್ರೆಯಿಂದ ತಂದೆ ತೆಗೆದುಕೊಂಡು ಹೋಗುತ್ತಿದ್ದಾರೆಂಬ ವೀಡಿಯೊ ಫೇಕ್
Claim: ಕೋಲ್ಕತ್ತಾದ ಅತ್ಯಾಚಾರ-ಹತ್ಯೆ ಪ್ರಕರಣದ ಸಂತ್ರಸ್ತೆಯ ತಂದೆ, ತಮ್ಮ ಮಗಳ ಶವವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗುತ್ತಿದ್ದಾರೆ.
Fact: ವಿಶಾಖಪಟ್ಟಣದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಗನ ದೇಹವನ್ನು ದಾನ ಮಾಡಿದ ತಂದೆಗೆ ಆಸ್ಪತ್ರೆ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ ವಿಡಿಯೋ ಇದು.

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಮೃತದೇಹವನ್ನು ಸ್ಟ್ರೆಚರ್ ಮೇಲೆ ಹೊರತೆಗೆಯುತ್ತಿರುವ ವೀಡಿಯೊ ಇದೀಗ ಎಲ್ಲೆಡೆ ಶೇರ್ ಆಗುತ್ತಿದೆ. ಒಬ್ಬ ವ್ಯಕ್ತಿ ಸ್ಟ್ರೆಚರ್‌ನ ಮುಂದೆ ನಡೆದುಕೊಂಡು ಬರುತ್ತಿದ್ದು ಸರತಿ ಸಾಲಿನಲ್ಲಿ ನಿಂತಿರುವ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕೈ ಮುಗಿಯುತ್ತಿರುವುದನ್ನು ಕಾಣಬಹುದು.

ಇವರು ಕೋಲ್ಕತ್ತಾದ ಅತ್ಯಾಚಾರ-ಹತ್ಯೆ ಪ್ರಕರಣದ ಸಂತ್ರಸ್ತೆಯ ತಂದೆ, ಅವರು ತಮ್ಮ ಮಗಳ ಶವವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಅರ್ಥದೊಂದಿಗೆ ವೀಡಿಯೊ ಹರಿದಾಡುತ್ತಿದೆ.

ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಅರುಣ್ ಕುಮಾರ್ ಎಂಬವರು ಆಗಸ್ಟ್ 22, 2024 ರಂದು ಈ ವೀಡಿಯೊವನ್ನು ರೀಪೋಸ್ಟ್ ಮಾಡಿಕೊಂಡಿದ್ದು, ‘ಇದು ಕೋಲ್ಕತ್ತಾ ವೈದ್ಯೆ ಮೌಮಿತಾ ಅವರ ತಂದೆ. ಸಾವಿನ ದುಃಖದ ನಡುವೆ ಆ ತಂದೆಯ ಧೈರ್ಯ ನೋಡಿ. ನಮ್ಮ ತಂಗಿಯ ತಂದೆಗೆ ಈ ಹೋರಾಟವನ್ನು ಮಾಡಲು ಆ ದೇವರು ಇನ್ನಷ್ಟು ಶಕ್ತಿ ನೀಡಲಿ.’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಫೇಸ್​ಬುಕ್​ನಲ್ಲಿ ಕೂಡ ಇದೇ ವೀಡಿಯೊ ಅನೇಕರು ಹಂಚಿಕೊಂಡಿದ್ದಾರೆ. ರಾಜ್ ರೌನಿಯಾರ್ ಎಂಬ ಎಫ್​ಬಿ ಖಾತೆಯಲ್ಲಿ ‘ಇದು ಮರಣಾನಂತರವೂ ಬದುಕಿರುವ ಆ ತಂದೆಯ ಧೈರ್ಯ, ತಂಗಿಯ ತಂದೆಗೆ ಈ ಹೋರಾಟವನ್ನು ಮಾಡಲು ಮಹಾದೇವ್ ಜೀ ಶಕ್ತಿ ನೀಡಲಿ.’ ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೊ ಅಪ್ಲೋಡ್ ಮಾಡಲಾಗಿದೆ.

ಹಾಗೆಯೆ ಇವರು ಕೋಲ್ಕತ್ತಾ ವೈದ್ಯೆಯ ತಂದೆ ಎಂಬ ಅಡಿಬರಹದೊಂದಿಗೆ ಕೆಲ ವೀಡಿಯೊಗಳನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ವೈರಲ್ ವೀಡಿಯೊ ಸುಳ್ಳು ಮಾಹಿತಿಯೊಂದಿಗೆ ಶೇರ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊಕ್ಕೆ ಮತ್ತು ಕೋಲ್ಕತ್ತಾ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ. ಇದು ಜೂನ್ 2024 ರ ವಿಶಾಖಪಟ್ಟಣದ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ಆಗುತ್ತಿರುವ ವೀಡಿಯೊದ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಂಡು ಗೂಗಲ್‍ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಕೋಲ್ಕತ್ತಾ ಪ್ರಕರಣಕ್ಕೆ ಸಂಬಂಧಿಸಿದಂತೇ ಅನೇಕ ವೀಡಿಯೊ ಕಾಣಿಸಿಕೊಂಡಿತು. ಇದರ ನಡುವೆ ಜೂನ್ 19, 2024 ರಂದು ಇದೇ ವೀಡಿಯೊ ಇನ್​ಸ್ಟಾಗ್ರಾಮ್​ನಲ್ಲಿ ವೈರಲ್ ಆಗಿರುವುದು ಸಿಕ್ಕಿತು. ಹೀಗಾಗಿ ಕೋಲ್ಕತ್ತಾ ಘಟನೆ ನಡೆಯುವ ಒಂದೂವರೆ ತಿಂಗಳ ಮೊದಲೇ ಈ ವೈರಲ್ ವೀಡಿಯೊ ಅಂತರ್ಜಾಲದಲ್ಲಿ ಲಭ್ಯವಿತ್ತು ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.

Its_mdhaka ಎಂಬ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ವೀಡಿಯೊವನ್ನು ಜೂನ್ 19, 2024 ರಂದು ಹಂಚಿಕೊಳ್ಳಲಾಗಿದೆ. ವೀಡಿಯೊ ಮೇಲೆ ಕ್ಯಾಪ್ಷನ್ ಕೂಡ ನೀಡಲಾಗಿದ್ದು, ‘28 ವರ್ಷದ ವಿಪಿನ್ ಮೆಹ್ತಾ, ರಸ್ತೆ ಅಪಘಾತದಲ್ಲಿ ಎರಡು ದಿನ ಆಸ್ಪತ್ರೆಯಲ್ಲಿದ್ದು ಸಾವನ್ನಪ್ಪಿದ್ದಾರೆ. ಬಳಿಕ ಇವರ ದೇಹವನ್ನು ದಾನ ಮಾಡಲಾಗಿದೆ. ಮೆಹ್ತಾ ಅವರು ಮೂಲತಃ ರಾಜಸ್ಥಾನದ ಜಲೋರ್‌ನವರಾಗಿದ್ದರು ಆದರೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವಾಸಿಸುತ್ತಿದ್ದರು’ ಎಂದು ಬರೆಯಲಾಗಿದೆ.

ಈ ಮಾಹಿತಿಯನ್ನು ಆದರಿಸಿ ನಾವು ಗೂಗಲ್ ಸರ್ಚ್​ನಲ್ಲಿ ಹುಡುಕಿದಾಗ ಜೂನ್ 2, 2024 ರಂದು ನ್ಯೂಸ್ 18 ನಲ್ಲಿ ಪ್ರಕಟವಾದ ಲೇಖನ ಸಂಪೂರ್ಣ ವಿಷಯವನ್ನು ತಿಳಿಸಿತು. ಸುದ್ದಿಯ ಪ್ರಕಾರ, ವಿಪಿನ್ ಮೆಹ್ತಾ ಅವರಿಗೆ ವಿಶಾಖಪಟ್ಟಣಂನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯವಾಗಿದೆ. ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ವಿಪಿನ್ ಸಾವಿನ ನಂತರ ಅವರ ತಂದೆ ಪ್ರವೀಣ್ ಮೆಹ್ತಾ ತನ್ನ ಮಗನ ದೇಹವನ್ನು ಇತರರ ಜೀವ ಉಳಿಸಲು ದಾನ ಮಾಡಿದರು. ಪ್ರವೀಣ್ ಅವರ ಈ ಶ್ಲಾಘನೀಯ ಕೆಲಸಕ್ಕಾಗಿ, ಆಸ್ಪತ್ರೆಯ 300 ಸದಸ್ಯರು ಗೌರವ ರಕ್ಷೆ ನೀಡುವ ಮೂಲಕ ವಿಪಿನ್ ಮೆಹ್ತಾ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಹೊರ ಕಳುಹಿಸಿದರು ಎಂದು ಬರೆಯಲಾಗಿದೆ. ಸದ್ಯ ವೈರಲ್ ವಿಡಿಯೋದಲ್ಲಿ ಗೋಚರಿಸುತ್ತಿರುವಂತೆ ಸ್ಟ್ರೆಚರ್ ಮುಂದೆ ಕೈಮುಗಿದು ಹೋಗುತ್ತಿರುವವರು ವಿಪಿನ್ ತಂದೆ ಪ್ರವೀಣ್ ಮೆಹ್ತಾ ಆಗಿದ್ದಾರೆ.

ದೈನಿಕ್ ಭಾಸ್ಕರ್ ಕೂಡ ಈ ಬಗ್ಗೆ ಸುದ್ದಿ ಪ್ರಕಟಿಸಿದೆ. ಇದು ವಿಶಾಖಪಟ್ಟಣಂನ ಪಿನಾಕಲ್ ಆಸ್ಪತ್ರೆಯ ವೀಡಿಯೊ ಎಂದು ಕ್ಯಾಪ್ಷನ್ ನೀಡಿದೆ.

ಹೀಗಾಗಿ ವೈರಲ್ ಆಗುತ್ತಿರುವ ವಿಡಿಯೋ ಕೋಲ್ಕತ್ತಾದ ಅತ್ಯಾಚಾರ-ಕೊಲೆ ಪ್ರಕರಣದ ಸಂತ್ರಸ್ತೆಯ ತಂದೆಯದ್ದಲ್ಲ. ಇದು ಜೂನ್ 2024 ರ ವೀಡಿಯೊ ಆಗಿದ್ದು, ಇಲ್ಲಿ ವ್ಯಕ್ತಿಯೊಬ್ಬರು ತಮ್ಮ ಮಗನ ದೇಹವನ್ನು ದಾನ ಮಾಡಿದ್ದಕ್ಕಾಗಿ ಆಸ್ಪತ್ರೆ ಸಿಬ್ಬಂದಿಗಳು ಶ್ಲಾಘಿಸುತ್ತಿರುವ ವೀಡಿಯೊ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಕೋಲ್ಕತ್ತಾದ ಅತ್ಯಾಚಾರ-ಹತ್ಯೆ ಪ್ರಕರಣದ ಸಂತ್ರಸ್ತೆಯ ತಂದೆ, ತಮ್ಮ ಮಗಳ ಶವವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗುತ್ತಿದ್ದಾರೆ.
Claimed By:X User
Claim Reviewed By:News Meter
Claim Source:Social Media
Claim Fact Check:False
Fact:ವಿಶಾಖಪಟ್ಟಣದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಗನ ದೇಹವನ್ನು ದಾನ ಮಾಡಿದ ತಂದೆಗೆ ಆಸ್ಪತ್ರೆ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ ವಿಡಿಯೋ ಇದು.
Next Story