ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್‌ಗೆ ಜಾಮೀನು ನೀಡಲಾಗಿದೆ ಎಂದು ಹೇಳುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಲಾರೆನ್ಸ್ ಬಿಷ್ಣೋಯ್ಗೆ ಪೊಲೀಸ್ ಅಧಿಕಾರಿಗಳು ಬೆಂಗಾವಲು ನೀಡುತ್ತಿರುವುದನ್ನು ತೋರಿಸಲಾಗಿದೆ. ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಲಾರೆನ್ಸ್ ಬಿಷ್ಣೋಯ್ ಜಾಮೀನು ಪಡೆದಿದ್ದಾರೆ, ಸನಾತನ ಧರ್ಮದ ವಿರೋಧಿಗಳೇ, ದಯವಿಟ್ಟು ಎಚ್ಚರಿಕೆಯಿಂದ ಮಾತನಾಡಿ.’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2020 ರ ವೀಡಿಯೊ ಆಗಿದ್ದು, ಬಿಷ್ಣೋಯ್ ಅವರನ್ನು ಫಜಿಲ್ಕಾ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗಿನದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಲಾರೆನ್ಸ್ ಬಿಷ್ಣೋಯ್‌ಗೆ ಜಾಮೀನು ಸಿಕ್ಕ ಬಗ್ಗೆ ಗೂಗಲ್‌ನಲ್ಲಿ ಕೀವರ್ಡ್ ಸಹಾಯದಿಂದ ಹುಡುಕಿದ್ದೇವೆ. ಆದರೆ, ಈ ಸಂದರ್ಭ ಇದಕ್ಕೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ಸುದ್ದಿ ಸಿಗಲಿಲ್ಲ. ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸಬರಮತಿ ಕೇಂದ್ರ ಜೈಲಿನಲ್ಲಿದ್ದಾರೆ ಎಂಬುದು ಉಲ್ಲೇಖನೀಯ. ಹಾಗೆಯೆ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಈ ವರ್ಷದ ಆಗಸ್ಟ್‌ನಲ್ಲಿ ಗೃಹ ಸಚಿವಾಲಯವು ಬಿಷ್ಣೋಯ್ ಚಲನೆಯನ್ನು ನಿಷೇಧಿಸುವ ಆದೇಶವನ್ನು ಇನ್ನೊಂದು ವರ್ಷ ವಿಸ್ತರಿಸಿತು ಎಂಬ ಮಾಹಿತಿ ಸಿಕ್ಕಿತು.
ಬಳಿಕ ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಆಗ ಫೆಬ್ರವರಿ 24, 2020 ರಂದು ಆರ್‌ಬಿ ಲೈವ್ ಮೀಡಿಯಾದಿಂದ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾದ ವೀಡಿಯೊದ ದೀರ್ಘ ಆವೃತ್ತಿ ಸಿಕ್ಕಿತು. ಆರ್‌ಬಿ ಲೈವ್ ಮೀಡಿಯಾ ಒದಗಿಸಿದ ಮಾಹಿತಿಯ ಪ್ರಕಾರ, ಸೆಕ್ಷನ್ 307 ರ ಅಡಿಯಲ್ಲಿ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಬಿ ಲಾರೆನ್ಸ್ ಬಿಷ್ಣೋಯ್ ಅವರನ್ನು ಪಂಜಾಬ್‌ನ ಫಜಿಲ್ಕಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು, ಅಲ್ಲಿ ಅವರನ್ನು ಮತ್ತು ಇತರ 4 ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು.
ಇದೇ ವಿವರಣೆಯ ಕೀವರ್ಡ್ ಗಳನ್ನು ಬಳಸಿ ನಾವು ಗೂಗಲ್ ನಲ್ಲಿ ಹುಡುಕಾಟ ನಡೆಸಿದಾಗ, ಮಾರ್ಚ್ 2, 2020ರ ಇನ್ನೊಂದು ಯೂಟ್ಯೂಬ್ ವೀಡಿಯೊ ಕಂಡುಬಂತು. ಎಲ್ ಬಿಜಿ ಡಿಜೆ ಸಾಂಗ್ ಎಂಬ ಚಾನೆಲ್ ನಲ್ಲಿ ‘‘ಫಜಿಲ್ಕಾ ನ್ಯಾಯಾಲಯದಲ್ಲಿ ಲಾರೆನ್ಸ್ ಬಿಷ್ಣೋಯ್ ಇತ್ತೀಚಿನ ವೀಡಿಯೋ 2020’’ ಎಂಬ ವಿವರಣೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಈ ಮಾಹಿತಿಯನ್ನು ಫೆಬ್ರವರಿ 25, 2020 ರಂದು ನ್ಯೂಸ್ 18 ಪಂಜಾಬ್ ವರದಿಯಲ್ಲಿಯೂ ನೀಡಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗಿರುವ ವೀಡಿಯೊ 2020 ರಲ್ಲಿ ಬಿಷ್ಣೋಯ್ ಅವರನ್ನು ಫಜಿಲ್ಕಾ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದ್ದು ಎಂದು ನಾವು ಖಚಿತವಾಗಿ ಹೇಳುತ್ತೇವೆ.