ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊಂದು ಭಾರೀ ವೈರಲ್ ಆಗುತ್ತಿದೆ. ಇದರಲ್ಲಿ ಚಿರತೆಯೊಂದು ವಸತಿ ಪ್ರದೇಶದ ಮೂಲಕ ಓಡಿಹೋಗಿ ಮೋಟಾರ್ ಬೈಕ್ ಸವಾರನ ಮೇಲೆ ಅಟ್ಯಾಕ್ ಮಾಡುವುದನ್ನು ಕಾಣಬಹುದು. ಬಳಿಕ ಓರ್ವ ಚಿರತೆಯನ್ನು ಓಡಿಸಲು ಕಲ್ಲು ಎಸೆಯುತ್ತಾನೆ. ವೈರಲ್ ಪೋಸ್ಟ್ ಇದು ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಇತ್ತೀಚೆಗೆ ನಡೆದ ಘಟನೆ ಎಂದು ಹೇಳುತ್ತದೆ.
ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬೆಂಗಳೂರಿನ ಬನ್ನೇರುಘಟ್ಟ ಬಳಿ ಚಿರತೆ ಕಂಡುಬಂದಿದೆ’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ 2022 ರದ್ದಾಗಿದ್ದು, ಮೈಸೂರಿನಲ್ಲಿ ನಡೆದ ಘಟನೆ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ವಿವಿಧ ಕೀಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಆಗ ಇದೇ ವೈರಲ್ ವೀಡಿಯೊವನ್ನು ನಾವು ನವೆಂಬರ್ 4, 2022 ರಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಕಂಡುಕೊಂಡೆವು. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಮೈಸೂರಿನಲ್ಲಿ ಚಿರತೆ ಜನರ ಮೇಲೆ ದಾಳಿ ಮಾಡುವ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೈಸೂರಿನ ಕನಕ ನಗರದಲ್ಲಿ ಈ ಘಟನೆ ನಡೆದಿದೆ. ವೀಡಿಯೊದಲ್ಲಿ ಚಿರತೆ ಬೀದಿಯಲ್ಲಿ ಓಡಿಹೋಗಿ ಬೈಕ್‌ನಲ್ಲಿ ಬಂದ ವ್ಯಕ್ತಿಯ ಮೇಲೆ ಧಾವಿಸುತ್ತಿರುವುದು ಕಂಡುಬರುತ್ತದೆ. ದಿಗ್ಭ್ರಮೆಗೊಂಡ ಬೈಕ್ ಸವಾರ ತನ್ನ ವಾಹನದಿಂದ ಬೀಳುತ್ತಾನೆ. ನಂತರ ಚಿರತೆ ಓಡಿಹೋಗುವುದನ್ನು ಮತ್ತು ಸ್ಥಳೀಯರು ಅದನ್ನು ಬೆನ್ನಟ್ಟುವುದನ್ನು ಕಾಣಬಹುದು’’ ಎಂದು ಬರೆಯಾಗಿದೆ.
ಹಾಗೆಯೆ ನವೆಂಬರ್ 4, 2022 ರಂದು ದಿ ಎಕನಾಮಿಕ್ ಟೈಮ್ಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ಇದೇ ವೈರಲ್ ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು, ‘‘ಮೈಸೂರಿನ ಜನವಸತಿ ಪ್ರದೇಶಕ್ಕೆ ಚಿರತೆ ಪ್ರವೇಶಿಸಿ, ಕೆಲವು ಜನರ ಮೇಲೆ ದಾಳಿ ಮಾಡಿದೆ; ನಂತರ ಅರಣ್ಯ ಇಲಾಖೆಯಿಂದ ಸೆರೆಹಿಡಿಯಲ್ಪಟ್ಟಿದೆ" ಎಂಬ ವಿವರಣೆ ನೀಡಲಾಗಿದೆ.
ಇದೇ ವೀಡಿಯೊವನ್ನು ನವೆಂಬರ್ 2022 ರಲ್ಲಿ ಇತರ ಸುದ್ದಿ ವೆಬ್‌ಸೈಟ್‌ಗಳ ವಿವಿಧ ಯೂಟ್ಯೂಬ್ ಚಾನೆಲ್‌ಗಳಲ್ಲಿ ಅಪ್‌ಲೋಡ್ ಮಾಡಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು. ಇದು ಮೈಸೂರಿನಲ್ಲಿ ನಡೆದ ಘಟನೆ ಎಂದು ಇದರಲ್ಲಿ ಹೇಳಲಾಗಿದೆ.
ಇನ್ನು ನವೆಂಬರ್ 4, 2022 ರಂದು NDTV ಹಾಗೂ ನವೆಂಬರ್ 5, 2022 ರಂದು ಟೈಮ್ಸ್ಆಫರ್ ಇಂಡಿಯಾ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಇದು ಮೈಸೂರಿನಲ್ಲಿ ನಡೆದಿರುವ ಘಟನೆ ಎಂದು ಸುದ್ದಿ ಪ್ರಕಟಿಸಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಬೆಂಗಳೂರಿನಲ್ಲಿ ಇತ್ತೀಚೆಗೆ ಚಿರತೆ ಕಾಣಿಸಿಕೊಂಡಿದೆ ಎಂಬ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ವೈರಲ್ ಆಗಿರುವ ಈ ವೀಡಿಯೊ 2022 ರ ನವೆಂಬರ್ನಲ್ಲಿ ಮೈಸೂರಿನದ್ದಾಗಿದೆ.