ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಶೇರ್ ಆಗುತ್ತಿದೆ. ಇದರಲ್ಲಿ ಪೆಟ್ರೋಲ್ ಪಂಪ್ ಆವರಣದಲ್ಲಿ ರಾತ್ರಿ ವೇಳೆ ಸಿಂಹವೊಂದು ತಿರುಗಾಡುತ್ತಿರುವುದನ್ನು ಕಾಣಬಹುದು. ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದು, ಇದು ಸೊರಬ-ಸಾಗರ ರಸ್ತೆಯಲ್ಲಿ ಕಂಡು ಬಂದಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗೆಯೆ ಕರ್ನಾಟಕದ ಬೇರೆ ಬೇರೆ ಜಾಗದ್ದು ಹೇಳುವ ಶೀರ್ಷಿಕೆಯೊಂದಿಗೆ ಇದೇ ವೀಡಿಯೊ ವೈರಲ್ ಆಗುತ್ತಿದೆ.
ಪ್ರಜಾಧ್ವನಿ ಟಿವಿ ಎಂಬ ಫೇಸ್ಬುಕ್ ಖಾತೆಯಲ್ಲಿ ಸೆಪ್ಟೆಂಬರ್ 11 ರಂದು ಈ ವೀಡಿಯೊ ಹಂಚಿಕೊಳ್ಳಲಾಗಿದೆ. ಈ ವೀಡಿಯೊ ಮೇಲೆ ‘ಸೊರಬ-ಸಾಗರ ರಸ್ತೆಯಲ್ಲಿ ಕಾಡಿನ ರಾಜನ ರಾಜನಡಿಗೆ’ ಎಂಬ ಬರೆಯಲಾಗಿದೆ.
ಹಾಗೆಯೆ ಝೀ ಕನ್ನಡ ನ್ಯೂಸ್ ಕೂಡ ಇದೇ ವೀಡಿಯೊವನ್ನು ಅಪ್ಲೋಡ್ ಮಾಡಿ ‘ಪಾವಗಡ ಪೆಟ್ರೋಲ್ ಬಂಕ್‌ನಲ್ಲಿ ಅಡ್ಡಾಡಿದ ಸಿಂಹ’ ಎಂಬ ಶೀರ್ಷಿಕೆ ನೀಡಿದೆ.
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಉತ್ತರ ಪ್ರದೇಶದ ಗಜ್ರೌಲಾದ ಹಸನ್‌ಪುರ ಪ್ರದೇಶದ ಪೆಟ್ರೋಲ್ ಪಂಪ್ ಬಳಿ ಸಿಂಹ ಕಾಣಿಸಿಕೊಂಡಿದೆ ಎಂಬ ಹೇಳಿಕೆಯೊಂದಿಗೆ ಕೂಡ ಇದೇ ವೀಡಿಯೊ ವೈರಲ್ ಆಗುತ್ತಿದೆ.
Fact Check:
ನ್ಯೂಸ್ ಮೀಟರ್ ನಡೆಸಿದ ತನಿಖೆಯಲ್ಲಿ ವೈರಲ್ ಆಗುತ್ತಿರುವ ವೀಡಿಯೊದ ಎಲ್ಲ ಮಾಹಿತಿಯು ತಪ್ಪಾಗಿದೆ ಎಂದು ತಿಳಿದುಬಂದಿದೆ. ಇದರ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ನಾವು ವೀಡಿಯೊದ ನಿರ್ದಿಷ್ಟ ಭಾಗದಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಮಿರರ್ ನೌ ಒಂದು ವಾರದ ಹಿಂದೆ ಮಾಡಿರುವ ವರದಿ ಕಂಡು ಬಂತು. ‘ಗುಜರಾತ್‌ನ ಗಿರ್ ಗ್ರಾಮದ ಪೆಟ್ರೋಲ್ ಪಂಪ್‌ನಲ್ಲಿ ಸಿಂಹ ಕಾಣಿಸಿಕೊಂಡಿದೆ’ ಎಂಬ ಹೇಳಿಕೆಯೊಂದಿಗೆ ವೀಡಿಯೊ ಅಪ್ಲೋಡ್ ಮಾಡಲಾಗಿದೆ.
ಈ ಮಾಹಿತಿ ಆಧಾರದ ಮೇಲೆ ನಾವು ಗುಜರಾತಿ ಭಾಷೆಯಲ್ಲಿ ಹುಡುಕಿದೆವು. ಆಗ, ಆಗಸ್ಟ್ 20 ರಂದು ನ್ಯೂಸ್ 18 ಗುಜರಾತಿ ಈ ಕುರಿತು ಯೂಟ್ಯೂಬ್ನಲ್ಲಿ ವರದಿ ಮಾಡಿರುವುದು ಸಿಕ್ಕಿದೆ. ಅದರಂತೆ, “ಘಟನೆಯು ಅಮ್ರೇಲಿಯ ಥಾರಿ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಥರಿ-ವಿಸಾವದರ್ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ಗೆ ಮಧ್ಯರಾತ್ರಿ ಸಿಂಹವೊಂದು ಹಠಾತ್ತನೆ ನುಗ್ಗಿದೆ’’ ಎಂದು ವರದಿಯಲ್ಲಿದೆ. ಇದೇ ದಿವ್ಯ ಭಾಸ್ಕರ್ ಗುಜರಾತಿ ಮಾಧ್ಯಮವೂ ಪ್ರಕಟಿಸಿದೆ.
ಹೀಗಾಗಿ ಸೊರಬ-ಸಾಗರ ರಸ್ತೆಯಲ್ಲಿ ಅಥವಾ ಪಾವಗಡ ಪೆಟ್ರೋಲ್ ಬಂಕ್ ಬಳಿ ಸಿಂಹ ತಿರುಗಾಡುತ್ತಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಎಂಬ ನಾವು ಖಚಿತವಾಗಿ ಹೇಳುತ್ತೇವೆ. ಇದು ಗುಜರಾತ್‌ನ ಗಿರ್ ಗ್ರಾಮದ ಪೆಟ್ರೋಲ್ ಪಂಪ್‌ನಲ್ಲಿ ಕಾಣಿಸಿಕೊಂಡಿದೆ.