(ಈ ಸತ್ಯ ಪರಿಶೀಲನೆಯು ಹಿಂಸಾಚಾರದ ಅಂಶಗಳನ್ನು ಒಳಗೊಂಡಿದೆ. ಹೀಗಾಗಿ ಕೃತ್ಯದ ಫೋಟೋ ಅಥವಾ ವಿಡಿಯೋವನ್ನು ಇಲ್ಲಿ ಸೇರಿಸಿಲ್ಲ.)
ಪುರುಷನೊಬ್ಬ ಮಹಿಳೆಯೊಬ್ಬಳನ್ನು ಮನಬಂದಂತೆ ಹೊಡೆಯುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೀಡಿಯೊದಲ್ಲಿ, ಪುರುಷ ಮೊದಲು ಮಹಿಳೆಗೆ ಕಪಾಳಮೋಕ್ಷ ಮಾಡಿ ನಂತರ ಆಕೆಯ ಮುಖ ಮತ್ತು ದೇಹಕ್ಕೆ ಒದ್ದು ಗುದ್ದುತ್ತಾನೆ. ದೃಶ್ಯದ ಕೊನೆಯಲ್ಲಿ, ಅವಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಘಟನೆ ಲವ್ ಜಿಹಾದ್ ಪ್ರಕರಣವಾಗಿದೆ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಲವ್ ಜಿಹಾದ್ಗೆ ಬಲಿಯಾದ ಹಿಂದೂ ಹೆಣ್ಣುಮಗಳ ಪರಿಸ್ಥಿತಿ ನೋಡಿ. ಎಚ್ಚರ ಹಿಂದೂ, ಪೋಷಕರೇ ಮತ್ತು ಸಹೋದರರೇ ನಿಮ್ಮ ಹೆಣ್ಣುಮಕ್ಕಳ ಬಗ್ಗೆ ಜಾಗ್ರತೆ ಇರಲಿ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಯಾವುದೇ ಕೋಮುಕೋನವಿಲ್ಲ, ಇಲ್ಲಿ ಮಹಿಳೆಯರನ್ನು ಥಳಿಸುತ್ತಿರುವ ವ್ಯಕ್ತಿಯ ಹೆಸರು ಪಂಕಜ್ ತ್ರಿಪಾಠಿ ಆಗಿದ್ದು ಆತ ಅವನು ಹಿಂದೂ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಕೆಲವು ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ, 25 ಡಿಸೆಂಬರ್ 2022 ರಂದು ಆಜ್ ತಕ್ ವೈರಲ್ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ಈ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಮೌಗಂಜ್ ಪ್ರದೇಶದ 19 ವರ್ಷದ ಬಾಲಕಿಯನ್ನು ಆಕೆಯ ಪ್ರಿಯಕರ ಪಂಕಜ್ ತ್ರಿಪಾಠಿ ಕ್ರೂರವಾಗಿ ಥಳಿಸುತ್ತಿರುವ ವೀಡಿಯೊ ವೈರಲ್ ಆಗಿದೆ. ಪೊಲೀಸರು 24 ವರ್ಷದ ತ್ರಿಪಾಠಿಯನ್ನು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಕ್ಲಿಪ್ ಅನ್ನು ಚಿತ್ರೀಕರಿಸಿದ ಹುಡುಗ ಭರತ್ ಸಾಕೇತ್ ಅವರನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಬರೆಯಲಾಗಿದೆ.
25 ಡಿಸೆಂಬರ್ 2022 ರಂದು ಎನ್‌ಡಿಟಿವಿ ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ವರದಿ ಮಾಡಿದ್ದು, "ಯುವಕ ಮತ್ತು ಮಹಿಳೆ ಬಹಳ ಸಮಯದಿಂದ ಸಂಪರ್ಕದಲ್ಲಿದ್ದರು. ಯುವಕ ಹುಡುಗಿಯನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದನು ಆದರೆ ಹುಡುಗಿಯ ಸಂಬಂಧಿಕರು ಒಪ್ಪುತ್ತಿರಲಿಲ್ಲ, ಆದ್ದರಿಂದ ಅವಳು ಕೂಡ ಆತನನ್ನು ಮದುವೆಯಾಗಲು ನಿರಾಕರಿಸಿದಳು. ಇದು ಯುವಕನ ಕೋಪಕ್ಕೆ ಕಾರಣವಾಗಿ ಆಕೆಗೆ ಹೊಡೆದಿದ್ದಾನೆ" ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋಂಕರ್ ಹೇಳಿದ್ದಾರೆ ಎಂದು ಎನ್‌ಡಿಟಿವಿ ಇಂಡಿಯಾ ವರದಿ ಮಾಡಿದೆ.
25 ಡಿಸೆಂಬರ್ 2022 ರಂದು ಎಬಿಪಿ ಲೈವ್ ಪ್ರಕಟಿಸಿದ ವರದಿಯಲ್ಲಿ, ‘‘19 ವರ್ಷದ ಮಹಿಳೆಯನ್ನು ಥಳಿಸಿದ ಆರೋಪದ ಮೇಲೆ 24 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಧೇರಾದಲ್ಲಿರುವ ತಮ್ಮ ಊರಿಗೆ ಹೋಗುತ್ತಿದ್ದಾಗ, ಆರೋಪಿ ಪಂಕಜ್ ತ್ರಿಪಾಠಿ ದಾರಿಯಲ್ಲಿ ಆಕೆಯನ್ನು ತೀವ್ರವಾಗಿ ಥಳಿಸಿದ್ದಾನೆ. ಈ ಪ್ರಕರಣದಲ್ಲಿ ಮೌಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಆಧರಿಸಿ, ಆರೋಪಿ ಪಂಕಜ್ ತ್ರಿಪಾಠಿಯನ್ನು ಬಂಧಿಸಲಾಗಿದೆ’’ ಎಂದು ಬರೆಯಲಾಗಿದೆ.
ಇತರೆ ಹಲವಾರು ಮಾಧ್ಯಮ ವರದಿಗಳಲ್ಲಿ ಆರೋಪಿಯನ್ನು ಪಂಕಜ್ ತ್ರಿಪಾಠಿ ಎಂದು ಗುರುತಿಸಿರುವುದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಮಧ್ಯಪ್ರದೇಶದ ರೇವಾದಲ್ಲಿ ಪಂಕಜ್ ತ್ರಿಪಾಠಿ ಎಂಬ ವ್ಯಕ್ತಿ ತನ್ನ 19 ವರ್ಷದ ಗೆಳತಿಯನ್ನು ಕ್ರೂರವಾಗಿ ಥಳಿಸಿದ್ದಾನೆ. ಈ ಘಟನೆಯ ವೀಡಿಯೊವನ್ನು ಬಳಕೆದಾರರು ಲವ್ ಜಿಹಾದ್ ಎಂದು ತಪ್ಪಾಗಿ ಹಂಚಿಕೊಂಡಿದ್ದಾರೆ ಮತ್ತು ಈ ಘಟನೆಯಲ್ಲಿ ಯಾವುದೇ ಕೋಮು ಕೋನವಿಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.