ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಒಳ ಉಡುಪು ಧರಿಸಿದ ವ್ಯಕ್ತಿಯೊಬ್ಬ ಕಟ್ಟಡದ ಛಾವಣಿಯ ಮೇಲೆ ಓಡಾಡುತ್ತಿರುವುದನ್ನು ಕಾಣಬಹುದು. ಕೆಲವು ಸೆಕೆಂಡುಗಳ ನಂತರ, ಆ ವ್ಯಕ್ತಿ ಕೇಬಲ್‌ನಿಂದ ನೇತಾಡುತ್ತಾ ಕಟ್ಟಡದ ಇನ್ನೊಂದು ಬದಿಗೆ ಹೋಗುತ್ತಾನೆ. ಈ ವ್ಯಕ್ತಿ ತನ್ನ ವಿವಾಹಿತ ಗೆಳತಿಯನ್ನು ಭೇಟಿಯಾಗಲು ಬಂದಿದ್ದ, ಆದರೆ ಅಷ್ಟರಲ್ಲಿ ಮಹಿಳೆಯ ಪತಿ ಬಂದಿದ್ದರಿಂದ ಆ ವ್ಯಕ್ತಿ ಬಟ್ಟೆ ಇಲ್ಲದೆ ಓಡಿಹೋಗಬೇಕಾಯಿತು ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಗೆಳೆಯ ತನ್ನ ಗೆಳತಿಯನ್ನು ಭೇಟಿಯಾಗಲು ಹೋಗಿದ್ದ, ಇದ್ದಕ್ಕಿದ್ದಂತೆ ಅವಳ ಗಂಡ ಬಂದನು ಮತ್ತು ಇಡೀ ಆಟ ಹಾಳಾಗಿ ಹೋಯಿತು, ಅವನು ಅರೆಬೆತ್ತಲೆ ಸ್ಥಿತಿಯಲ್ಲಿ ಬಾಲ್ಕನಿಯಿಂದ ಹಾರಿ ಓಡಿದನು, ಅಲ್ಲಿನ ಸುತ್ತಮುತ್ತಲಿನ ಜನರು ವಿಡಿಯೋ ಮಾಡಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಇಂಡೋನೇಷ್ಯಾದ್ದಾಗಿದ್ದು, ಈ ವ್ಯಕ್ತಿ ಖಿನ್ನತೆಯಿಂದ ಬಳಲುತ್ತಿದ್ದರು.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟುಗಳನ್ನು ಹಿಮ್ಮುಖವಾಗಿ ಹುಡುಕಿದಾಗ, ನಾವು ಅದನ್ನು ವೀಡಿಯೊ ಸ್ಟ್ರೀಮಿಂಗ್ ವೆಬ್‌ಸೈಟ್ ನ್ಯೂಸ್‌ಫ್ಲೇರ್‌ನಲ್ಲಿ ಕಂಡುಕೊಂಡೆವು. ಇಲ್ಲಿ ಇದನ್ನು ಫೆಬ್ರವರಿ 17, 2025 ರಂದು ಹಂಚಿಕೊಳ್ಳಲಾಗಿದೆ. ಈ ಘಟನೆ ಇಂಡೋನೇಷ್ಯಾದ ಆಗ್ನೇಯ ಸುಲವೇಸಿ ಪ್ರಾಂತ್ಯದ ಬೌಬೌ ನಗರದಲ್ಲಿ ನಡೆದಿದ್ದು, ಇದು ಕಾಲಿಸ್ತಾ ಬೀಚ್ ಹೋಟೆಲ್ ಎಂದು ಇಲ್ಲಿ ಹೇಳಲಾಗಿದೆ.
ಈ ವ್ಯಕ್ತಿಯನ್ನು ಬಂಧಿಸಿರುವ ಬಗ್ಗೆ ಇಂಡೋನೇಷ್ಯಾದ ಇತರ ಹಲವು ಮಾಧ್ಯಮಗಳು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿಗಳನ್ನು ಪ್ರಕಟಿಸಿರುವುದು ಸಿಕ್ಕಿದೆ. ಕಟ್ಟಡಗಳ ಮೇಲೆ ಓಡುವಾಗ ಈ ವ್ಯಕ್ತಿ ಕೆಳಗೆ ಬಿದ್ದಿದ್ದಾನೆ ಎಂದು ಅವುಗಳಲ್ಲಿ ಹೇಳಲಾಗಿದೆ. ಇದರ ನಂತರ, ಅಲ್ಲಿದ್ದ ಜನರು ಅವನನ್ನು ಥಳಿಸಿದರು. ಆದರೆ ಅಷ್ಟರಲ್ಲಿ ಪೊಲೀಸರು ಅಲ್ಲಿಗೆ ಬಂದು ಆ ವ್ಯಕ್ತಿಯನ್ನು ಬಂಧಿಸಿ ಕರೆದುಕೊಂಡು ಹೋದರು. ಅಲ್ಲದೆ ಆ ವ್ಯಕ್ತಿಯು ಕಾಲಿಸ್ತಾ ಬೀಚ್ ಹೋಟೆಲ್‌ನಲ್ಲಿ ತಂಗಿದ್ದರು. ಆತನ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ, ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಬೌಬೌ ಪೊಲೀಸ್‌ನ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಆಯುಕ್ತ ಅಬ್ದುಲ್ ರಹಮದ್ ಹೇಳಿರುವುದು ವರದಿಯಲ್ಲಿದೆ.
ಈ ವ್ಯಕ್ತಿ ತನ್ನ ವಿವಾಹಿತ ಗೆಳತಿಯನ್ನು ಭೇಟಿಯಾಗಲು ಹೋಗಿದ್ದ ಮತ್ತು ಆಕೆಯ ಗಂಡ ಬಂದ ಕಾರಣ ನಂತರ ಅಲ್ಲಿಂದ ಓಡಿಹೋಗಬೇಕಾಯಿತು ಎಂದು ಈ ಸುದ್ದಿ ವರದಿಗಳಲ್ಲಿ ಎಲ್ಲಿಯೂ ಬರೆದಿಲ್ಲ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವಿವಾಹಿತ ಗೆಳತಿಯನ್ನು ಭೇಟಿಯಾಗಲು ಬಂದಿದ್ದ ವ್ಯಕ್ತಿ, ಆಕೆಯ ಗಂಡ ಬಂದಿದ್ದರಿಂದ ಬಟ್ಟೆ ಇಲ್ಲದೆ ಓಡಿಹೋಗಬೇಕಾಯಿತು ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.