Fact Check: ಲಾಹೋರ್ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ ಎಂದು 2024ರ ವೀಡಿಯೊ ವೈರಲ್
ಲಾಹೋರ್‌ನ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊ ಈಗ ಹರಿದಾಡುತ್ತಿದೆ.
By Vinay Bhat
Claim:ಲಾಹೋರ್ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದೆ.
Fact:ಇದು 9 ಮೇ 2024 ರಂದು ಸಂಭವಿಸಿದ ಘಟನೆ ಆಗಿದೆ.
ಪಹಲ್ಗಾಮ್ನಲ್ಲಿ ಭಯೋತ್ಪಾದಕ ಅಟ್ಟಹಾಸದ ನಂತರ ಭಾರತ ಸೇರಿದಂತೆ ಪಾಕಿಸ್ತಾನದಲ್ಲೂ ಕೆಲ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದ್ದು, ಕಟ್ಟಡದ ಒಳಗಡೆ ಹೊಗೆ ಹರಡಿರುವುದನ್ನು ಕಾಣಬಹುದು. ಜೊತೆಗೆ ದೊಡ್ಡ ದೊಡ್ಡ ಲಗೇಜ್ ಹಿಡಿದುಕೊಂಡು ಸಾಕಷ್ಟು ಮಂದಿ ನಿಂತಿರುವುದನ್ನು ಕಾಣಬಹುದು. ಲಾಹೋರ್‌ನ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊ ಈಗ ಹರಿದಾಡುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಏಪ್ರಿಲ್ 26, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಾಕಿಸ್ತಾನ ಲಾಹೋರ್ ವಿಮಾನ ನಿಲ್ದಾಣದಲ್ಲಿ ಬೆಂಕಿ. ಎಲ್ಲಾ ವಿಮಾನ ಹಾರಾಟ ಸ್ಥಗಿತ. ಆಟ ಶುರುವಾಗಿದೆ.... ಆಟ ಮುಗಿಯೋ ಹೊತ್ತಿಗೆ ಪಾಕಿಸ್ತಾನದ ಕಥೆನೂ ಮುಗಿದಿರುತ್ತೆ’’ ಎಂದು ಬರೆದುಕೊಂಡಿದ್ದಾರೆ. (Archive)
ಹಾಗೆಯೆ ಕನ್ನಡದ ಪ್ರಸಿದ್ಧ ಸುದ್ದಿ ಮಾಧ್ಯಮ ಪಬ್ಲಿಕ್ ಟಿವಿ ಕೂಡ ಏಪ್ರಿಲ್ 26, 2025 ರಂದು ‘‘ಪಾಕಿಸ್ತಾನದ ಲಾಹೋರ್ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ- ರನ್‌ವೇ ಬಂದ್, ವಿಮಾನಗಳ ಹಾರಾಟ ಸ್ಥಗಿತ’’ ಎಂದು ವೈರಲ್ ಆಗುತ್ತಿರುವ ಸ್ಕ್ರೀನ್ ಶಾಟ್ನೊಂದಿಗೆ ಸುದ್ದಿ ಪ್ರಕಟಿಸಿದೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. 9 ಮೇ 2024 ರಂದು ಸಂಭವಿಸಿದ ಘಟನೆ ಇದಾಗಿದ್ದು, ಬೆಂಕಿಯ ಘಟನೆಗೆ ವಲಸೆ ಕೌಂಟರ್‌ನ ಸೀಲಿಂಗ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಕಾರಣ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಆಗ OsintTV ಎಂಬಎಕ್ಸ್ ಖಾತೆಯಲ್ಲಿ ಮೇ 9, 2024 ರಂದು ಇದೇ ವೈರಲ್ ವೀಡಿಯೊದ ಪೂರ್ಣ ಆವೃತ್ತಿ ನಮಗೆ ಸಿಕ್ಕಿದೆ.
ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ‘‘ಲಾಹೋರ್ ಅಲ್ಲಾಮಾ ಇಕ್ಬಾಲ್ ವಿಮಾನ ನಿಲ್ದಾಣದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ಇಡೀ ವಲಸೆ ವ್ಯವಸ್ಥೆಯೇ ನಾಶವಾಗಿದೆ. ಹೊಗೆಯನ್ನು ತೆರವುಗೊಳಿಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಲಾಹೋರ್‌ಗೆ ಒಳಬರುವ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳನ್ನು ದೇಶಾದ್ಯಂತ ಪರ್ಯಾಯ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಯಿತು. ಲಾಹೋರ್‌ಗೆ ತೆರಳುತ್ತಿದ್ದ ಶ್ರೀಲಂಕಾದ ಏರ್‌ಲೈನ್ಸ್ ವಿಮಾನವನ್ನು ಮಧ್ಯದಲ್ಲೇ ಹಿಂದಕ್ಕೆ ತಿರುಗಿಸಲಾಯಿತು. ದುಬೈನಿಂದ ಲಾಹೋರ್‌ಗೆ ತೆರಳುತ್ತಿದ್ದ ಎರಡು ವಿಮಾನಗಳನ್ನು ಇಸ್ಲಾಮಾಬಾದ್‌ಗೆ ಕಳುಹಿಸಲಾಯಿತು’’ ಎಂದು ಹೇಳಲಾಗಿದೆ.
0.50 ಸೆಕೆಂಡ್ಗಳಿಂದ ವೈರಲ್ ವೀಡಿಯೊದ ದೃಶ್ಯವನ್ನು ನೋಡಬಹುದು.
ಈ ಮಾಹಿತಿಯ ಆಧಾರದ ಮೇಲೆ ಗೂಗಲ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ ಮೇ 9 ಮತ್ತು 10 ರಂದು ಅನೇಕ ಮಾಧ್ಯಮಗಳು ವೈರಲ್ ವೀಡಿಯೊಕ್ಕೆ ಹೋಲುವ ಸ್ಕ್ರೀನ್ ಶಾಟ್ನೊಂದಿಗೆ ಈ ಘಟನೆಯ ಕುರಿತು ಸುದ್ದಿ ಮಾಡಿವುದು ಸಿಕ್ಕಿದೆ. ಮೇ 9, 2024 ರಂದು ಸಿಎನ್ಎನ್ನ್ಯೂಸ್ 18 ತನ್ನ ಯೂಟ್ಯೂವ್ ಚಾನೆಲ್ನಲ್ಲಿ ವೀಡಿಯೊ ಸುದ್ದಿ ಪ್ರಕಟಿಸಿದ್ದು, ‘‘ಲಾಹೋರ್ ವಿಮಾನ ನಿಲ್ದಾಣದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿಯನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಲಾಯಿತು ಮತ್ತು ಯಾವುದೇ ಜೀವ ಹಾನಿ ಸಂಭವಿಸಿಲ್ಲ. ವಲಸೆ ಕೌಂಟರ್‌ನ ಸೀಲಿಂಗ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದರಿಂದಾಗಿ ವಿಮಾನ ನಿಲ್ದಾಣದ ಕಟ್ಟಡದಿಂದ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು’’ ಎಂದು ಹೇಳಲಾಗಿದೆ.
ಇಂಡಿಯಾ ಟುಡೆ ಕೂಡ ವೈರಲ್ ವೀಡಿಯೊಕ್ಕೆ ಹೋಲು ಸ್ಕ್ರೀನ್ ಶಾಟ್ನೊಂದಿಗೆ ಮೇ 9, 2024 ರಂದು ಸುದ್ದಿ ಪ್ರಕಟಿಸಿದ್ದು, ‘‘ಲಾಹೋರ್‌ನ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ವ್ಯವಸ್ಥೆಯಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಪಾಕಿಸ್ತಾನದ ಲಾಹೋರ್ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಯಿತು. ವಲಸೆ ಕೌಂಟರ್‌ನ ಸೀಲಿಂಗ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆ ಬೆಳಿಗ್ಗೆ 5.23 ಕ್ಕೆ ನಡೆದಿದ್ದು, ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಬೆಂಕಿಯನ್ನು ನಂದಿಸಲಾಯಿತು’’ ಎಂದು ಬರೆಯಲಾಗಿದೆ.
ವೈರಲ್ ವೀಡಿಯೊಕ್ಕೆ ಹೋಲುವ ದೃಶ್ಯದೊಂದಿಗೆ ಮೇ 10, 2024 ರಂದು ಪಾಕ್ ಸ್ಥಳೀಯ ಮಾಧ್ಯಮ ಕೂಡ ಇದೇ ವರದಿಯನ್ನು ಮಾಡಿವುದನ್ನು ಇಲ್ಲಿ, ಇಲ್ಲಿ ನೋಡಬಹುದು.
ಇನ್ನು ಪಾಕಿಸ್ತಾನದ ಲಾಹೋರ್ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದೆ ಎಂದು ಯಾವುದೇ ಸ್ಥಳೀಯ ಮಾಧ್ಯಮವು ವರದಿ ಮಾಡಿಲ್ಲ. ಹೀಗಾಗಿ ಈ ಸುದ್ದಿ ಹಳೆಯದಾಗಿದ್ದು, ಇತ್ತೀಚಿನದ್ದಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.