ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾನರ್‌ಗಳನ್ನು ಹಿಡಿದುಕೊಂಡು ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸುತ್ತಿರುವ ವೀಡಿಯೊ ಒಂದು ವೈರಲ್ ಆಗುತ್ತಿದೆ. ಸಾವಿರಾರು ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿರುವುದನ್ನು ಕಾಣಬಹುದು. ಅನೇಕ ಬಳಕೆದಾರರು, ಇದು ಬಾಂಗ್ಲಾದೇಶದ ಚಿತ್ತಗಾಂಗ್ನಲ್ಲಿ ಭಾರತದ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧದ ಪ್ರತಿಭಟನೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಏಪ್ರಿಲ್ 7, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘#Chattogram ವಕ್ಫ್ ಬಿಲ್ ವಿರೋಧಿಸಿ #Chattogram ಮುಸಲ್ಮಾನರಿಂದ ಬ್ರಹತ್ ಪ್ರತಿಭಟನೆ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ಪ್ರತಿಭಟನೆಗೂ ವಕ್ಫ್ಗೂ ಯಾವುದೇ ಸಂಬಂಧವಿಲ್ಲ. ನವೆಂಬರ್ 2024 ರಲ್ಲಿ ಜುಲೈ ಹತ್ಯಾಕಾಂಡಕ್ಕೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಚಿತ್ತಗಾಂಗ್ ಛತ್ರ ಶಿಬಿರ್ ರ್ಯಾಲಿಯ ವೀಡಿಯೊ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಆಗ ಬಾಂಗ್ಲಾದೇಶ ಫೇಸ್‌ಬುಕ್ ಬಳಕೆದಾರರೊಬ್ಬರು ಇದೇ ವೈರಲ್ ವೀಡಿಯೊವನ್ನು 27 ನವೆಂಬರ್ 2024 ರಂದು ಹಂಚಿಕೊಂಡಿರುವುದು ಸಿಕ್ಕಿದೆ. ಕಾಮೆಂಟ್ ಸೆಕ್ಷನ್ನಲ್ಲಿ ಇದಕ್ಕೆ ಅವರು ಈ ರೀತಿ ಕ್ಯಾಪ್ಶನ್ ನೀಡಿದ್ದಾರೆ: ‘‘ರಾಷ್ಟ್ರೀಯ ವಿದ್ಯಾರ್ಥಿ ಐಕ್ಯತಾ ಸಪ್ತಾಹದ ಆಚರಣೆಯ ಸಂದರ್ಭದಲ್ಲಿ ಜುಲೈ ಜಿ-ಎನ್ ಹತ್ಯೆಯ ವಿಚಾರಣೆ ಮತ್ತು ಹುತಾತ್ಮ ಸೈಫುಲ್ ಇಸ್ಲಾಂ ಅಲಿಫ್ ಹತ್ಯೆಯ ವಿಚಾರಣೆಗೆ ಒತ್ತಾಯಿಸಿ ಚಿತ್ತಗಾಂಗ್‌ನಲ್ಲಿ ಛತ್ರ ಶಿಬಿರ್ ಅವರ ಪ್ರತಿಭಟನಾ ಮೆರವಣಿಗೆ ಮತ್ತು ರ್ಯಾಲಿಯನ್ನು ಆಯೋಜಿಸಲಾಯಿತು.’’
ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್ನಲ್ಲಿ ಕೀವರ್ಸ್ ಸರ್ಚ್ ನಡೆಸಿದ್ದೇವೆ. ಆಗ ನವೆಂಬರ್ 28, 2024 ರಂದು ಬಾಂಗ್ಲಾದೇಶದ ಸ್ಥಳೀಯ ಸುದ್ದಿ ಮಾಧ್ಯಮ ಚಾನೆಲ್ 24 ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊ ವರದಿ ಕಂಡುಬಂತು. ಈ ವೀಡಿಯೊ ವರದಿಯಲ್ಲಿ ವೈರಲ್ ವೀಡಿಯೊ ಕೂಡ ಇದೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ವೀಡಿಯೊ ಚಿತ್ತಗಾಂಗ್‌ನಲ್ಲಿ ನಡೆದ ರ್ಯಾಲಿಯನ್ನು ತೋರಿಸುತ್ತದೆ. ವೀಡಿಯೊದ ಶೀರ್ಷಿಕೆ ಹೀಗಿದೆ: "ರಾಷ್ಟ್ರೀಯ ವಿದ್ಯಾರ್ಥಿ ಐಕ್ಯತಾ ಸಪ್ತಾಹದ ಆಚರಣೆಯ ಸಂದರ್ಭದಲ್ಲಿ ಚಿತ್ತಗಾಂಗ್‌ನಲ್ಲಿ ಛತ್ರ ಶಿಬಿರ್ ಪ್ರತಿಭಟನೆ."
ಹಾಗೆಯೆ ನವೆಂಬರ್ 27, 2024 ರಂದು Jamaat Dhaka City South ಎಂಬ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಲಾದ ವೈರಲ್ ವೀಡಿಯೊದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ಜುಲೈ ಹತ್ಯಾಕಾಂಡದ ನ್ಯಾಯಕ್ಕೆ ಒತ್ತಾಯಿಸಿ ಚಿತ್ತಗಾಂಗ್ ಇಸ್ಲಾಮಿ ಛತ್ರ ಶಿಬಿರ್ ರ್ಯಾಲಿ ಎಂದು ವೀಡಿಯೊದ ಶೀರ್ಷಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ವೈರಲ್ ವೀಡಿಯೊವನ್ನು ಬೇರೆ ಕೋನದಿಂದ ಒಳಗೊಂಡ ಮತ್ತೊಂದು ವೀಡಿಯೊ ಕೂಡ ನಮಗೆ ಸಿಕ್ಕಿದೆ. ಈ ವೀಡಿಯೊವನ್ನು 27 ನವೆಂಬರ್ 2024 ರಂದು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಶೀರ್ಷಿಕೆಯ ಪ್ರಕಾರ, ವೀಡಿಯೊ ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ನಡೆದ ರ್ಯಾಲಿಯನ್ನು ತೋರಿಸುತ್ತದೆ.
ನವೆಂಬರ್ 27, 2024 ರಂದು ಇಸ್ಲಾಮಿ ಛತ್ರ ಶಿಬಿರ್ ನಡೆಸಿದ ರ್ಯಾಲಿಯ ಕುರಿತು ಬಾಂಗ್ಲಾ ಟ್ರಿಬ್ಯೂನ್ ಸುದ್ದಿ ಪ್ರಕಟಿಸಿದೆ. ರಾಷ್ಟ್ರೀಯ ವಿದ್ಯಾರ್ಥಿ ಐಕ್ಯತಾ ಸಪ್ತಾಹದ ಆಚರಣೆಗೆ ಸಂಬಂಧಿಸಿದಂತೆ ನಡೆದ ಈ ರ್ಯಾಲಿಗಳಲ್ಲಿ, ಜುಲೈನಲ್ಲಿ ದೇಶದಲ್ಲಿ ನಡೆದ ಸಾಮೂಹಿಕ ಹತ್ಯೆಗಳ ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಇಸ್ಲಾಮಿ ಛತ್ರ ಶಿಬಿರ್ ಒತ್ತಾಯಿಸಿತು. ಢಾಕಾದಲ್ಲಿ ನಡೆದ ರ್ಯಾಲಿಯ ವರದಿಯ ಪ್ರಕಾರ, ಇತರ ನಗರಗಳಲ್ಲಿಯೂ ಇದೇ ರೀತಿಯ ರ್ಯಾಲಿಗಳು ನಡೆದವು. ಇದಕ್ಕೆ ಸಂಬಂಧಿಸಿದ ವರದಿಯನ್ನು ನೀವು ಇಲ್ಲಿ, ಇಲ್ಲಿ ಓದಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗಿರುವ ವೀಡಿಯೊ ಭಾರತದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧದ ಪ್ರತಿಭಟನೆಯನ್ನು ತೋರಿಸುವುದಿಲ್ಲ. ಈ ವೀಡಿಯೊ 2024ರ ನವೆಂಬರ್ನದ್ದಾಗಿದ್ದು, ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ನಡೆದ ರ್ಯಾಲಿಯನ್ನು ತೋರಿಸುತ್ತದೆ.