Fact Check: ಭಾರತೀಯ ಉತ್ಪನ್ನಗಳನ್ನು ಬಳಸಬೇಡಿ ಎನ್ನುವ ಬಾಂಗ್ಲಾದೇಶದ ವೀಡಿಯೊ ಹಳೆಯದು
ಮುಸ್ಲಿಂ ವ್ಯಕ್ತಿಯೊಬ್ಬರು ಭಾರತೀಯ ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಅಂಗಡಿಕಾರರ ಬಳಿ ಹೇಳುತ್ತಿರುವ ವೀಡಿಯೊ ವೈರಲ್ ಆಗಿದೆ.
By Vinay Bhat Published on 19 Aug 2024 4:50 PM ISTClaim: ಬಾಂಗ್ಲಾದೇಶದ ಮುಸ್ಲಿಮರು ಭಾರತೀಯ ವಸ್ತುಗಳನ್ನು ಬಹಿಷ್ಕರಿಸಲು ಕರೆ ನೀಡುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗುತ್ತಿದೆ.
Fact: ಫೆಬ್ರವರಿ 2024 ರಲ್ಲಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಬಾಂಗ್ಲಾದೇಶದ ರಾಜಕೀಯ ಪಕ್ಷವಾದ ಗೊನ ಅಧಿಕಾರ್ ಪರಿಷದ್ ನೇತೃತ್ವದ ಅಭಿಯಾನ ಇದಾಗಿದೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಅಶಾಂತಿಯ ನಡುವೆ, ಹೊಸದಾಗಿ ಮಧ್ಯಂತರ ಸರ್ಕಾರ ಜಾರಿಗೆ ಬಂದಿದೆ. ಎಲ್ಲರೂ ತಾಳ್ಮೆಯಿಂದ ವರ್ತಿಸಿ ಎಂದು ಅಲ್ಲಿನ ಸರ್ಕಾರ ಒತ್ತಾಯಿಸುತ್ತಿದೆ. ಏತನ್ಮಧ್ಯೆ, ಮುಸ್ಲಿಂ ವ್ಯಕ್ತಿಯೊಬ್ಬರು ಭಾರತೀಯ ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಅಂಗಡಿಕಾರರ ಬಳಿ ಹೇಳುತ್ತಿರುವ ವೀಡಿಯೊ ವೈರಲ್ ಆಗಿದೆ.
ಅರುಣ್ ಕುಮಾರ್ ಹಿಂದೂ ಎಂಬವರು ತಮ್ಮ X (ಹಿಂದೆ ಟ್ವಿಟರ್) ಖಾತೆಯಲ್ಲಿ ಆಗಸ್ಟ್ 18, 2024 ರಂದು ಜಿತೇಂದ್ರ ಪ್ರತಾಮ್ ಸಿಂಗ್ ಎಂಬವರ ವೀಡಿಯೊವನ್ನು ರೀಟ್ವೀಟ್ ಮಾಡಿ ಈ ರೀತಿ ಶೀರ್ಷಿಕೆ ನೀಡಿದ್ದಾರೆ: "ಬಾಂಗ್ಲಾದೇಶದ ಹೊಸ ಸರ್ಕಾರ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿ ಅಭಿಯಾನವನ್ನು ಪ್ರಾರಂಭಿಸಿದೆ. ಪ್ಯಾರಾಚೂಟ್ ಆಯಿಲ್, ಡಾಬರ್ ಹನಿ, ಉಜಾಲಾ ವಾಷಿಂಗ್ ಪೌಡರ್ ಮುಂತಾದ ಬ್ರಾಂಡ್‌ಗಳನ್ನು ಮಾರಾಟ ಮಾಡಬೇಡಿ ಎಂದಿದ್ದಾರೆ BNP ನಾಯಕರು. ಬಾಂಗ್ಲಾದೇಶ ಪಾಕಿಸ್ತಾನಕ್ಕಿಂತ ದೊಡ್ಡ ಬೆದರಿಕೆಯಾಗುತ್ತಿದೆ ಎಂಬುದನ್ನು ಭಾರತ ಸರ್ಕಾರ ಅರ್ಥಮಾಡಿಕೊಳ್ಳಬೇಕು’’ ಎಂದು ಬರೆದುಕೊಂಡಿದ್ದಾರೆ.
ಬಾಂಗ್ಲಾದೇಶದ ಹೊಸ ಸರ್ಕಾರು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಿ ಅಭಿಯಾನವನ್ನು ಪ್ರಾರಂಭಿಸಿದೆ. ಪ್ಯಾರಾಚೂಟ್ ಆಯಿಲ್, ಡಾಬರ್ ಹನಿ, ಉಜಾಲಾ ವಾಷಿಂಗ್ ಪೌಡರ್ ಮುಂತಾದ ಬ್ರಾಂಡ್‌ಗಳನ್ನು ಮಾರಾಟ ಮಾಡಬೇಡಿ ಎಂದಿದ್ದಾರೆ BNP ನಾಯಕರು. ಬಾಂಗ್ಲಾದೇಶ ಪಾಕಿಸ್ತಾನಕ್ಕಿಂತ ದೊಡ್ಡ ಬೆದರಿಕೆಯಾಗುತ್ತಿದೆ ಎಂಬುದನ್ನು ಭಾರತ ಸರ್ಕಾರ ಅರ್ಥಮಾಡಿಕೊಳ್ಳಬೇಕು https://t.co/5iXCthULz0
— ಅರುಣ್ ಕುಮಾರ್ ಹಿಂದೂ 🚩 (@arukumrhin11669) August 18, 2024
ಇದೇ ರೀತಿಯ ಪೋಸ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
Fact Check:
ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ವೈರಲ್ ವೀಡಿಯೊ ಮೂಲತಃ ಫೆಬ್ರವರಿ 2024 ರಲ್ಲಿ ಬಾಂಗ್ಲಾದೇಶದ ರಾಜಕೀಯ ಪಕ್ಷ 'ಗೊನ ಅಧಿಕಾರ್ ಪರಿಷತ್' ಆಯೋಜಿಸಿದ್ದ ಪ್ರತಿಭಟನೆಯದ್ದಾಗಿದೆ.
ನಾವು ಈ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಫೆಬ್ರವರಿ 22, 2024 ರಂದು ತಮನ್ನಾ ಫಿರ್ದೌಸ್ ಶಿಖಾ ಎಂಬ ಫೇಸ್‌ಬುಕ್ ಬಳಕೆದಾರರಿಂದ ಹಂಚಿಕೊಂಡ ವೀಡಿಯೊವನ್ನು ಕಂಡುಕೊಂಡಿದ್ದಾರೆ. ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಅಂಗಡಿಯವರಿಗೆ ಮನವಿಯನ್ನು ಮಾಡುತ್ತಿರುವುದು ಈ ವೀಡಿಯೊ ತೋರಿಸುತ್ತದೆ. "ಅಂಗಡಿಗಳಿಗೆ ತೆರಳಿ ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ" ಎಂಬ ಶೀರ್ಷಿಕೆ ಇದಕ್ಕೆ ನೀಡಲಾಗಿದೆ.
ಹೀಗಾಗಿ ಈ ವೀಡಿಯೊ ಇತ್ತೀಚಿನದಲ್ಲ ಎಂಬುದನ್ನು ಸೂಚಿಸುತ್ತದೆ. ತಮನ್ನಾ ಅವರು ಗೊನ ಅಧಿಕಾರ ಪರಿಷತ್ (Gono Odhikar Parishad) ಪಕ್ಷದ ನಾಯಕಿಯಾಗಿದ್ದಾರೆ, ಅವರು ತಮ್ಮ ಪ್ರೊಫೈಲ್‌ನಲ್ಲಿ ಹಂಚಿಕೊಂಡ ಹಲವಾರು ಪೋಸ್ಟ್‌ಗಳಿಂದನಮಗೆ ಇದು ತಿಳಿದುಬಂತು. ಪಕ್ಷ ಆಯೋಜಿಸಿದ್ದ ಪ್ರತಿಭಟನೆಗಳಲ್ಲೂ ಇವರು ಭಾಗವಹಿಸಿದ್ದಾರೆ.
ಕೀವರ್ಡ್ ಹುಡುಕಾಟದಲ್ಲಿ ನಮಗೆ ಫೆಬ್ರವರಿ 15, 2024 ರಂದು ಬಾಂಗ್ಲಾದೇಶದ ಪ್ರೋಥೋಮ್ ಅಲೋ ವೆಬ್ಸೈಟ್ನಲ್ಲಿ ಪ್ರಕಟವಾದ ಲೇಖನ ಕಂಡುಬಂತು. ಇದರಲ್ಲಿ "ಪೀಪಲ್ಸ್ ರೈಟ್ ಕೌನ್ಸಿಲ್ ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದೆ" ಎಂಬ ಶೀರ್ಷಿಕೆಯೊಂದಿಗೆ ವರದಿಯನ್ನು ಮಾಡಿದೆ. ವರದಿಯ ಪ್ರಕಾರ, ಗೊನ ಅಧಿಕಾರ ಪರಿಷತ್ತು ಬಹಿಷ್ಕಾರಕ್ಕೆ ಕರೆ ನೀಡುವ ಕರಪತ್ರಗಳನ್ನು ವಿತರಿಸಿತು. ಭಾರತೀಯ ಉತ್ಪನ್ನಗಳ ಮತ್ತು ಶೇಕ್ ಹಸೀನಾ ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿದರು. ನ್ಯಾಷನಲ್ ಪ್ರೆಸ್ ಕ್ಲಬ್ ಮುಂಭಾಗದಲ್ಲಿ ಪ್ರಾರಂಭವಾದ ವಿತರಣೆಯು ಪುರಾಣ ಪಲ್ಟನ್ ಮೋರ್ ಮತ್ತು ಬೈತುಲ್ ಮುಕರ್ರಂ ಪ್ರದೇಶಗಳಲ್ಲಿ ಮುಂದುವರೆಯಿತು ಎಂದು ಬರೆಯಲಾಗಿದೆ.
ವರದಿಯ ಪ್ರಕಾರ, ಜನವರಿಯಲ್ಲಿ ಬಾಂಗ್ಲಾದೇಶದ ಚುನಾವಣೆಯ ನಂತರ, ಶೇಖ್ ಹಸೀನಾ ಅವರು ವಿಪಕ್ಷಗಳ ಬಹಿಷ್ಕಾರದ ಹೊರತಾಗಿಯೂ ನಾಲ್ಕನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಆಗ ಬಾಂಗ್ಲಾದೇಶದ ರಾಜಕೀಯದಲ್ಲಿ ಭಾರತವು ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿ "ಇಂಡಿಯಾ ಔಟ್" ಪ್ರಚಾರವು ಪ್ರಾರಾಂಭವಾಯಿತು. ಜೊತೆಗೆ ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕಾಗಿ ವಿರೋಧ ಪಕ್ಷದವರು ಮುಂದಾದರು.
ತಮನ್ನಾ ಅವರ ಖಾತೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಈ ವೈರಲ್ ವೀಡಿಯೊದಲ್ಲಿರುವ ವ್ಯಕ್ತಿ ಮುಹಮ್ಮದ್ ತಾರಿಕ್ ರೆಹಮಾನ್ ಎಂದು ಕಂಡುಕೊಂಡಿದ್ದೇವೆ, ಅವರು ಗೊನೊ ಅಧಿಕಾರ್ ಪರಿಷತ್ ಪಕ್ಷದ ಬೆಂಬಲಿಗರಾಗಿದ್ದಾರೆ.ಫೆಬ್ರವರಿ ಮತ್ತು ಮಾರ್ಚ್ 2024 ರ ನಡುವೆ, ಗೊನ ಅಧಿಕಾರ ಪರಿಷತ್ ಪಕ್ಷವು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನವನ್ನು ನಡೆಸುತ್ತಿದೆ ಎಂದು ಪ್ರೋಥೋಮ್ ಅಲೋ ಮತ್ತು ಅಜ್ಕರ್ ಪತ್ರಿಕಾ ಮುಂತಾದ ಬಾಂಗ್ಲಾದೇಶದ ಸುದ್ದಿವಾಹಿನಿಗಳು ವರದಿ ಮಾಡಿವೆ.
ಹೀಗಾಗಿ ಬಾಂಗ್ಲಾದೇಶದ ಮುಸ್ಲಿಮರು ಸಾಮೂಹಿಕವಾಗಿ ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂಬ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ. ವೈರಲ್ ವೀಡಿಯೊ ಗೊನ ಅಧಿಕಾರ ಪರಿಷತ್ ನೇತೃತ್ವದ ರಾಜಕೀಯ ಅಭಿಯಾನದ ಭಾಗವಾಗಿದೆ ಮತ್ತು ಕೋಮು ಕೋನವನ್ನು ಹೊಂದಿಲ್ಲ ಎಂಬುದನ್ನು ನಾವು ಖಚಿತ ಪಡಿಸುತ್ತೇವೆ.