ಫೆಬ್ರವರಿ 13, 2025 ರಂದು, ದೆಹಲಿ ಪೊಲೀಸರು ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಕೊಲೆ ಯತ್ನದ ಆರೋಪಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡ ಕುರಿತು ವಿಚಾರಣೆ ನಡೆಸಿದ್ದರು. ಆದಾಗ್ಯೂ, ವಿಚಾರಣೆಗೆ ಮುನ್ನ, ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಫೆಬ್ರವರಿ 24 ರವರೆಗೆ ಅವರ ಬಂಧನಕ್ಕೆ ತಡೆ ನೀಡಿತು. ಇದರ ನಡುವೆ, ಸಾಮಾಜಿಕ ಮಾಧ್ಯಮದಲ್ಲಿ ಅಮಾನತುಲ್ಲಾ ಖಾನ್ ಅವರ ವೀಡಿಯೊ ಒಂದು ವ್ಯಾಪಕವಾಗಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಹಂಚಿಕೊಳ್ಳುವಾಗ, ಬಳಕೆದಾರರು ಎಎಪಿ ಶಾಸಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಫೆಬ್ರವರಿ 15, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಇದು ನಮ್ಮ ಏರಿಯಾ. ಇಲ್ಲಿಂದ ಹೊರಟು ಹೋಗಿ, ಇಲ್ಲದಿದ್ದರೆ ಜೀವಂತವಾಗಿ ಹೊರಗೆ ಹೋಗುವುದು ನಿಮಗೆ ಕಷ್ಟವಾಗಬಹುದು. ನಮ್ಮ ಒಂದು ಕೂಗಿಗೆ ಎಷ್ಟು ಜನ ಸೇರುತ್ತಾರೆಂದರೆ ನೀವು ಎಲ್ಲಿದ್ದಿರೀ ಎಂದು ನಿಮಗೇ ತಿಳಿಯುವುದಿಲ್ಲ ಎಂದು ತನ್ನನ್ನು ಬಂಧಿಸಲು ಹೋದ ದೆಹಲಿ ಪೊಲೀಸರಿಗೆ ಬೆದರಿಕೆ ಹಾಕಿದ್ದ. ದೆಹಲಿಯ ಶಾಸಕ ಅಮಾನತುಲ್ಲಾ ಖಾನ್ ನನ್ನು ದೇಹಲಿ ಪೋಲಿಸರು ಬಂಧಿಸಿ ತಮ್ಮ ವಶಕ್ಕೆ ಪಡೆಯುತ್ತಿರುವ ಕ್ಷಣ...’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಏಪ್ರಿಲ್ 2023 ರಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಸಿಬಿಐ ಸಮನ್ಸ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಪೊಲೀಸರು ಬಂಧಿಸಿದ ವೀಡಿಯೊ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ವಿವಿಧ ಕ್ರೀ ಫ್ರೇಮ್ ಬಳಸಿ ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಏಪ್ರಿಲ್ 16, 2023 ರಂದು ಅಮನತುಲ್ಲಾ ಖಾನ್ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಇದೇ ವೈರಲ್ ವೀಡಿಯೊವನ್ನು ಪೋಸ್ಟ್ ಪೋಸ್ಟ್ ಮಾಡಿರುವುದು ಕಂಡುಬಂತು. ಇದು ಉತ್ತಮ ಕ್ವಾಲಿಟಿಯಲ್ಲಿದೆ. ಈ ಪೋಸ್ಟ್‌ನಲ್ಲಿ, ಖಾನ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಿಬಿಐ ಮತ್ತು ಇಡಿ ಕ್ರಮಗಳನ್ನು ಟೀಕಿಸುತ್ತಾ, ‘‘ದೆಹಲಿ ಮುಖ್ಯಮಂತ್ರಿ ಶ್ರೀ ಅರವಿಂದ್ ಕೇಜ್ರಿವಾಲ್ ಅವರನ್ನು ಬೆದರಿಸಲು ಸಿಬಿಐ ಮತ್ತು ಇಡಿ ನಡೆಸಿದ ವಿಫಲ ಪ್ರಯತ್ನದ ವಿರುದ್ಧ ಪ್ರತಿಭಟನೆ. ಬಿಜೆಪಿ ಸರ್ಕಾರದ ಸರ್ವಾಧಿಕಾರದ ವಿರುದ್ಧ ನಾವು ನಮ್ಮ ಧ್ವನಿಯನ್ನು ಎತ್ತುವುದನ್ನು ಮುಂದುವರಿಸುತ್ತೇವೆ’’ ಎಂದು ಬರೆದುಕೊಂಡಿದ್ದಾರೆ.
ಹೀಗಾಗಿ ಈ ವೀಡಿಯೊ ಇತ್ತೀಚಿನ ಯಾವುದೇ ಘಟಗನೆಗೆ ಸಂಬಂಧಿಸಿಲ್ಲ ಎಂಬುದು ತಿಳಿಯಿತು. ಇದರಿಂದ ಸುಳಿವು ಪಡೆದುಕೊಂಡು ನಾವು ಗೂಗಲ್‌ನಲ್ಲಿ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಆಗ ಏಪ್ರಿಲ್ 17, 2023 ರಂದು ದಿ ಹಿಂದೂ ಪತ್ರಿಕೆಯ ವರದಿ ಸಿಕ್ಕಿತು. "ಸಿಬಿಐ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದ್ದನ್ನು ಪ್ರತಿಭಟಿಸಲು ಎಎಪಿ ಸರ್ವ ಪ್ರಯತ್ನ ನಡೆಸುತ್ತದೆ; 1,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ" ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಲಾಗಿದೆ.
ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ಕೇಂದ್ರ ತನಿಖಾ ದಳ (ಸಿಬಿಐ) ಪ್ರಧಾನ ಕಚೇರಿಯಲ್ಲಿ ನಡೆದ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭಾನುವಾರ ವಿಚಾರಣೆಗೆ ಒಳಪಡಿಸಿದ್ದನ್ನು ವಿರೋಧಿಸಿ ದೆಹಲಿ ಮತ್ತು ಪಂಜಾಬ್‌ನ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರು ರಾಷ್ಟ್ರ ರಾಜಧಾನಿಯ ಬೀದಿಗಿಳಿದು ಪ್ರತಿಭಟನೆ ನಡೆಸಿದರು’’ ಎಂದು ಬರೆಯಲಾಗಿದೆ.
ಇಂಡಿಯಾ ಟುಡೆ ಕೂಡ ಏಪ್ರಿಲ್ 16, 2023 ರಂದು ‘‘ಭಾರೀ ಭದ್ರತೆಯ ನಡುವೆ ವಿಚಾರಣೆಗಾಗಿ ಸಿಬಿಐ ಕಚೇರಿಯಲ್ಲಿ ಕೇಜ್ರಿವಾಲ್, ಪ್ರತಿಭಟನಾ ನಿರತ ಎಎಪಿ ಕಾರ್ಯಕರ್ತರ ಬಂಧನ’’ ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ.
ದಿಲ್ಲಿ ತಕ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಏಪ್ರಿಲ್ 16, 2023 ರಂದು ‘‘ಪೊಲೀಸರು ಅಮಾನತುಲ್ಲಾ ಖಾನ್ ಅವರನ್ನು ಎಳೆದುಕೊಂಡು ಹೋದರು’’ ಎಂಬ ಶೀರ್ಷಿಕೆಯೊಂದಿಗೆ ಇದೇ ವೈರಲ್ ವೀಡಿಯೊವನ್ನು ಅಪ್‌ಲೋಡ್ ಮಾಡಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಅರವಿಂದ್ ಕೇಜ್ರಿವಾಲ್ ಅವರ ಸಿಬಿಐ ಸಮನ್ಸ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಪೊಲೀಸರು ಎಳೆದೊಯ್ದ ಏಪ್ರಿಲ್ 2023 ರ ವೀಡಿಯೊವನ್ನು ಇತ್ತೀಚಿನದ್ದು ಎಂದು ಸುಳ್ಳು ಹೇಳಿಕೆಯೊಂದಿಗೆ ವೈರಲ್ ಮಾಡಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.