ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಾಮಾಜಿಕ ಮಾಧ್ಯಮದ ಕಾರಣದಿಂದಾಗಿ ಕೆಲ ವ್ಯಕ್ತಿಗಳು ವೈರಲ್ ಆದರು. ಅವರ ಜನಪ್ರಿಯತೆ ರಾತ್ರೋರಾತ್ರಿ ಗಗನಕ್ಕೇರಿತು. ಅವರಲ್ಲಿ ಒಬ್ಬರು ಇಂದೋರ್ ನಿವಾಸಿ ಮೊನಾಲಿಸಾ ಭೋಂಸ್ಲೆ. ಮಹಾ ಕುಂಭಕ್ಕೆ ರುದ್ರಾಕ್ಷಿ ಮಾರಾಟ ಮಾಡಲು ಬಂದಿದ್ದ ಇವರು ಸುಂದರ ಕಣ್ಣುಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾದರು. ಇದೀಗ ಹೊಸ ಗೆಟಪ್ನಲ್ಲಿ ಮೊನಾಲಿಸಾ ಭೋಂಸ್ಲೆ ಎಂದು ವೀಡಿಯೊ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಇವರು ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಫೆಬ್ರವರಿ 4, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಇದು ಮೊನಾಲಿಸಾ ನಾ?.. ಹೊಸ ಗೆಟಪ್ನಲ್ಲಿ ವೈರಲ್ ಹುಡುಗಿ’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊವನ್ನು ಡಿಜಿಟಲ್ ಎಡಿಟ್ ಮಾಡಲಾಗಿದ್ದು, ನೈಜ್ಯ ವೀಡಿಯೊದಲ್ಲಿ ಪಂಜಾಬಿ ಮತ್ತು ಹಿಂದಿ ನಟಿ ವಾಮಿಕಾ ಗಬ್ಬಿ ಇದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಜನವರಿ 17, 2025 ರಂದು ಪ್ರಸಿದ್ಧ ಮನರಂಜನಾ ಮಾಧ್ಯಮ ಫಿಲ್ಮಿ ಗ್ಯಾನ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇದೇ ವೈರಲ್ ವೀಡಿಯೊಕ್ಕೆ ಹೋಲುವ ಮತ್ತೊಂದು ವೀಡಿಯೊ ನಮಗೆ ಸಿಕ್ಕಿದೆ. ವೀಡಿಯೊ ಶೀರ್ಷಿಕೆಯಲ್ಲಿ ಇವರು ನಟಿ ವಾಮಿಕಾ ಗಬ್ಬಿ ಎಂದು ಬರೆಯಲಾಗಿದೆ.
ಹಾಗೆಯೆ ಇದೇ ಸಂದರ್ಭ ರೇಡಿಯಾ ಸಿಟಿ ಬುಝ್ ಕೂಡ ಇದೇ ವೀಡಿಯೊವನ್ನು ಹಂಚಿಕೊಂಡು ‘‘ವಾಮಿಕಾ ಗಬ್ಬಿಯ ಮುದ್ದಾದ ನೋಟ ಹೃದಯಗಳನ್ನು ಕದಿಯುತ್ತಿವೆ’’ ಎಂದು ಬರೆದುಕೊಂಡಿದೆ. ‘ಕಪ್ಪು ಬಟ್ಟೆಯಲ್ಲಿ ಕಂಗೊಳಿಸಿದ ವಾಮಿಕಾ ಗಬ್ಬಿ’ ಎಂದು ನ್ಯೂಸ್ 18 ಕೂಡ ಶಾರ್ಟ್ಸ್ ಪ್ರಕಟಿಸಿರುವುದನ್ನು ನೀವು ಇಲ್ಲಿ ನೋಡಬಹುದು.
ನಾವು ವೈರಲ್ ವೀಡಿಯೊವನ್ನು ಮತ್ತು ವಾಮಿಕಾ ಗಬ್ಬಿ ಎಂದು ಹೇಳಿರುವ ವೀಡಿಯೊದೊಂದಿಗೆ ಹೋಲಿಕೆ ಮಾಡಿ ನೋಡಿದ್ದೇವೆ. ಸೂಕ್ಷ್ಮವಾಗಿ ಪರಿಶೀಲಿಸಿದಾಗ, ವೈರಲ್ ವೀಡಿಯೊದಲ್ಲಿ ನಟಿ ವಾಮಿಕಾ ಗಬ್ಬಿಯ ಮುಖವನ್ನು ಮೊನಾಲಿಸಾ ಭೋಂಸ್ಲೆ ಅವರ ಮುಖದೊಂದಿಗೆ ಡಿಜಿಟಲ್ ಎಡಿಟ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ನೈಜ್ಯ ವೀಡಿಯೊದಲ್ಲಿ ಮುಖ ಬೆಳ್ಳಗಿದೆ ಅದೇ ವೈರಲ್ ವೀಡಿಯೊದಲ್ಲಿ ಮುಖವನ್ನು ಕೊಂಚ ಕಪ್ಪು ಮಾಡಲಾಗಿದೆ. ಹಾಗೆಯೆ ಕಣ್ಣುಗಳನ್ನು ಕೂಡ ಎಡಿಟ್ ಮಾಡಿರುವುದು ಕಾಣಬಹುದು. ನೈಜ್ಯ ವೀಡಿಯೊಕ್ಕೆ ಹೋಲಿಸಿದರೆ ವೈರಲ್ ವೀಡಿಯೊದಲ್ಲಿರುವ ಕೂದಲು ಸಿಲ್ಕಿಯಾಗಿದೆ.
ನಟಿ ವಾಮಿಕಾ ಗಬ್ಬಿ ಇದೇ ಉಡುಪನ್ನು ಧರಿಸಿ ಪೋಸ್ ಕೊಡುತ್ತಿರುವ ವೀಡಿಯೊವನ್ನು ಹಲವಾರು ಮಾಧ್ಯಮಗಳು ಪ್ರಕಟಿಸಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ನಟಿ ವಾಮಿಕಾ ಗಬ್ಬಿ ಅವರ ಡಿಜಿಟಲ್ ಎಡಿಟ್ ಮಾಡಿದ ವೀಡಿಯೊವನ್ನು ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಣಿಗಳನ್ನು ಮಾರಾಟ ಮಾಡುವ ಮೂಲಕ ಪ್ರಸಿದ್ಧರಾದ ಮೊನಾಲಿಸಾ ಭೋಂಸ್ಲೆ ಎಂದು ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.