ನೇಪಾಳದಲ್ಲಿ ಮಸೀದಿಯನ್ನು ಕೆಡವಲಾಗಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವೀಡಿಯೊ 11 ಸೆಕೆಂಡುಗಳಷ್ಟು ಉದ್ದವಾಗಿದ್ದು, ಮಸೀದಿಯ ಮೇಲೆ ಕಾರ್ಯನಿರ್ವಹಿಸುತ್ತಿರುವ ಜೆಸಿಬಿ ಟ್ರಕ್ ಅದರ ಗುಮ್ಮಟ ಮತ್ತು ಹಲವಾರು ಭಾಗಗಳನ್ನು ಕೆಡವುತ್ತಿರುವುದನ್ನು ತೋರಿಸುತ್ತದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ನೇಪಾಳದ ಧನುಷಾದ ಸಖುವಾದಲ್ಲಿರುವ ಮಸೀದಿಯನ್ನು ಧ್ವಂಸ ಮಾಡಿದ್ದಾರೆ. ನೇಪಾಳದ ಹಿಂದೂಗಳು ಕಲ್ಲು ತೂರಾಟಕ್ಕೆ ಒಂದೇ ಶಿಕ್ಷೆ ಅಕ್ರಮ ಮಸೀದಿಯನ್ನು ಕೆಡವುವುದು ಎಂದು ತಿಳಿದಿದ್ದಾರೆ. ನೇಪಾಳದ ಹಿಂದೂಗಳು ಶಾಂತಿ ರಾಯಭಾರಿಗಳಿಗೆ ಪ್ರತಿಕ್ರಿಯಿಸಲು ಕಲಿತಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ನೇಪಾಳದದ್ದಲ್ಲ, ಬದಲಿಗೆ ಇತ್ತೀಚೆಗೆ ನೆಲಸಮಗೊಂಡ ಪಾಕಿಸ್ತಾನದ ಸಿಯಾಲ್‌ಕೋಟ್‌ನ ದಸ್ಕಾದ ನೂರ್ ಮಸೀದಿ ಆಗಿದೆ.
ನೇಪಾಳದಲ್ಲಿ ಮಸೀದಿಯನ್ನು ಕೆಡವಲಾಗುತ್ತಿದೆ ಎಂದು ಹೇಳಲಾಗುತ್ತಿರುವ ಈ ವೈರಲ್ ವೀಡಿಯೊವನ್ನು ತನಿಖೆ ಮಾಡುವಾಗ, ವೀಡಿಯೊದಲ್ಲಿ "ನೂರ್ ಮಸೀದಿ ದಸ್ಕಾ" ಎಂಬ ಪಠ್ಯ ಕಂಡುಬಂದಿದೆ. ನಾವು ಈ ಸ್ಥಳವನ್ನು ಹುಡುಕಿದಾಗ, ಇದು ಪಾಕಿಸ್ತಾನದ ಸಿಯಾಲ್ಕೋಟ್‌ನ ದಸ್ಕಾದಲ್ಲಿರುವ ಮಸೀದಿ ಆಗಿದೆ.
ಬಳಿಕ ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ವಿಪಿಎನ್ ಆನ್ ಮಾಡಿ ಹುಡುಕಿದ್ದೇವೆ. ಈ ಸಂದರ್ಭ ಅನೇಕ ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಇದೇ ವೈರಲ್ ವೀಡಿಯೊ ಅಪ್ಲೋಡ್ ಆಗಿರುವುದು ಕಂಡುಬಂತು. ಇದು ಪಾಕಿಸ್ತಾನದ ಸಿಯಾಲ್ಕೋಟ್‌ನ ನೂರ್ ಮಸೀದಿ ದಸ್ಕಾ ಎಂಬ ಮಾಹಿತಿ ಇದರಲ್ಲಿದೆ.
ಈ ಮಾಹಿತಿಯ ಆಧಾರದ ಮೇಲೆ, ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದಾಗ, ಪಾಕಿಸ್ತಾನದ ಸುದ್ದಿ ಆಧಾರಿತ ಉರ್ದು ಪಾಯಿಂಟ್‌ನ ಯೂಟ್ಯೂಬ್ ಖಾತೆಯಿಂದ ಜನವರಿ 7 ರಂದು ಅಪ್‌ಲೋಡ್ ಮಾಡಲಾದ ವೀಡಿಯೊ ವರದಿಯನ್ನು ಕಂಡುಕೊಂಡೆವು. ವೀಡಿಯೊ ವರದಿಯು ವೈರಲ್ ವೀಡಿಯೊದ ದೃಶ್ಯಗಳನ್ನು ಒಳಗೊಂಡಿತ್ತು. ಅತಿಕ್ರಮಣ ವಿರೋಧಿ ಅಭಿಯಾನದ ಸಮಯದಲ್ಲಿ ಹಳೆಯ ನೂರ್ ಮಸೀದಿಯನ್ನು ಸಹ ಕೆಡವಲಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ.
ತನಿಖೆಯ ಸಮಯದಲ್ಲಿ, ಪಾಕಿಸ್ತಾನದ ಸಿಯಾಲ್‌ಕೋಟ್ ಪೊಲೀಸರು ಎಕ್ಸ್ ಬಳಕೆದಾರರೊಬ್ಬರ ಪೋಸ್ಟ್ಗೆ ನೀಡಿದ ಉತ್ತರವನ್ನು ಸಹ ನಾವು ಕಂಡುಕೊಂಡಿದ್ದೇವೆ. ಬಳಕೆದಾರರು ನೂರ್ ಮಸೀದಿಯ ಧ್ವಂಸದ ಬಗ್ಗೆ ಪೋಸ್ಟ್ ಮಾಡಿದ್ದರು. ಇದಕ್ಕೆ ಪೊಲೀಸರು, "ದಸ್ಕಾದ ಕಾಲೇಜು ರಸ್ತೆಯಲ್ಲಿರುವ ಜಾಮಿಯಾ ಮಸೀದಿಯ ಕೆಲವು ಭಾಗಗಳನ್ನು ಜಿಲ್ಲಾಡಳಿತ ಪುನರ್ನಿರ್ಮಿಸುತ್ತಿದೆ. ಈ ಮಸೀದಿಯನ್ನು ಪುನರ್ನಿರ್ಮಾಣಕ್ಕಾಗಿ ಬಲಿಕೊಡಲಾಗುತ್ತಿದೆ ಎಂದು ಆಡಳಿತವು ಫ್ಲೆಕ್ಸ್ ಹಾಕಿದೆ" ಎಂದು ಸಿಯಾಲ್‌ಕೋಟ್ ಪೊಲೀಸರು ಪ್ರತಿಕ್ರಿಯಿಸಿದರು.
ಪಾಕಿಸ್ತಾನದ ದಸ್ಕಾದ ನೂರಿ ಮಸೀದಿ ಧ್ವಂಸ ಮಾಡುತ್ತಿರುವ ಬಗ್ಗೆ ಅನೇಕ ವೀಡಿಯೊಗಳು ಯೂಟ್ಯೂಬ್‌ನಲ್ಲಿ ಕಾಣಬಹುದು. ಇದರಲ್ಲಿ ವೈರಲ್ ವೀಡಿಯೊದ ದೃಶ್ಯಾವಳಿ ಕೂಡ ಇದೆ. ಅದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ನೇಪಾಳದಲ್ಲಿ ಮಸೀದಿಯನ್ನು ಕೆಡವಲಾಗುತ್ತಿದೆ ಎಂದು ತೋರಿಸುವ ವೈರಲ್ ವೀಡಿಯೊ ವಾಸ್ತವವಾಗಿ ಪಾಕಿಸ್ತಾನದ್ದಾಗಿದೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ.