Fact Check: ಸಂಗೀತ ಮಾಂತ್ರಿಕ ಇಳಯರಾಜ ಅವರಿಗೆ ದೇವಾಲಯ ಪ್ರವೇಶ ನಿರಾಕರಿಸಿರುವುದು ನಿಜವೇ?
ಶ್ರೀವಿಲ್ಲಿಪುತ್ತೂರ್ ಆಂಡಾಳ್ ದೇವಸ್ಥಾನದ ಒಳಗೆ ಇಳಯರಾಜ ಅವರನ್ನು ಬಿಟ್ಟಿಲ್ಲ ಎಂಬ ಸುದ್ದಿ ಎಲ್ಲ ಕಡೆಗಳಲ್ಲಿ ಹರಿದಾಡಿದೆ. ತಮ್ಮ ಜಾತಿಯ ಕಾರಣಕ್ಕೆ ಅವಮಾನಕ್ಕೆ ಒಳಗಾಗಿದ್ದಾರೆ ಎಂಬ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.
By Vinay Bhat Published on 18 Dec 2024 3:02 PM GMTClaim: ಸಂಗೀತ ಮಾಂತ್ರಿಕ ಇಳಯರಾಜ ಅವರಿಗೆ ದೇವಾಲಯ ಪ್ರವೇಶ ನಿರಾಕರಿಸಲಾಗಿದೆ.
Fact: ಇಳಯರಾಜ ಅವರಿಗೆ ದೇವಸ್ಥಾನಕ್ಕೆ ಹೂಮಾಲೆ ಹಾಕಿ ಸ್ವಾಗತಿಸಲಾಯಿತು. ಸಂಪ್ರದಾಯದ ಪ್ರಕಾರ, ಅರ್ಥಮಂಟಪದ ಬಳಿ ಪ್ರವೇಶವಿಲ್ಲದ ಕಾರಣ ಅವರ ಪ್ರವೇಶವನ್ನು ನಿರ್ಬಂಧಿಸಲಾಯಿತು.
ಖ್ಯಾತ ಸಂಗೀತ ಸಂಯೋಜಕ ಹಾಗೂ ರಾಜ್ಯಸಭಾ ಸದಸ್ಯ ಇಳಯರಾಜ ಅವರು ಡಿಸೆಂಬರ್ 15, 2024 ರಂದು ತಮಿಳುನಾಡಿನ ಶ್ರೀವಿಲ್ಲಿಪುತ್ತೂರು ಆಂಡಾಳ್ ದೇವಸ್ಥಾನಕ್ಕೆ ಭೇಟಿ ನೀಡಿದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಜೊತೆಗೆ ಶ್ರೀವಿಲ್ಲಿಪುತ್ತೂರ್ ಆಂಡಾಳ್ ದೇವಸ್ಥಾನದ ಒಳಗೆ ಇಳಯರಾಜ ಅವರನ್ನು ಬಿಟ್ಟಿಲ್ಲ ಎಂಬ ಸುದ್ದಿ ಎಲ್ಲ ಕಡೆಗಳಲ್ಲಿ ಹರಿದಾಡಿದೆ. ತಮ್ಮ ಜಾತಿಯ ಕಾರಣಕ್ಕೆ ಅವಮಾನಕ್ಕೆ ಒಳಗಾಗಿದ್ದಾರೆ ಎಂಬ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು 18 ಡಿಸೆಂಬರ್ 2024 ರಂದು ಇಳಯರಾಜ ಅವರು ದೇವಸ್ಥಾನಕ್ಕೆ ಭೇಟಿ ನೀಡುವ ವೀಡಿಯೊವನ್ನು ಹಂಚಿಕೊಂಡು, ‘‘ಸಂಗೀತ ಮಾಂತ್ರಿಕ ಇಳಯರಾಜ ಅವರಿಗೆ ದೇವಾಲಯ ಪ್ರವೇಶ ನಿರಾಕರಿಸಲಾಗಿದೆ. ಮೂಲತಃ ದಲಿತರಾದ ಇಳಯರಾಜ ಹಲವಾರು ದೇವರ ಹಾಡುಗಳಿಗೆ ಸಂಗೀತದ ಜೀವ ಕೊಟ್ಟವರು. ವಿಶಿಷ್ಠವಾದ ಸಂಗೀತ ಸಂಯೋಜನೆಯ ಮೂಲಕ ಜಗತ್ ಪ್ರಸಿದ್ದರಾಗಿರುವ ಅವರು, ಇದೀಗ ಬ್ರಾಹ್ಮಣರಿಂದ ಅಸ್ಪೃಶ್ಯತೆಯನ್ನು ಅನುಭವಿಸಿದ್ದಾರೆ.’’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಮತ್ತೊಂದು ಪೋಸ್ಟ್ನಲ್ಲಿ ‘‘ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶ್ರೀವಿಲ್ಲಿಪುತೂರ್ ಆಂಡಾಳ್ ದೇವಾಲಯದಲ್ಲಿ ತಮ್ಮ ಜಾತಿಯ ಕಾರಣಕ್ಕೆ ಅವಮಾನಕ್ಕೆ ಒಳಗಾಗಿದ್ದಾರೆ. ದೇವಾಲಯದ ಒಳಗೆ ಹೋದಾಗ ಇಲ್ಲಿಗೆ ನಿಮಗೆ ಪ್ರವೇಶವಿಲ್ಲ ಎಂದು ಅವರನ್ನು ಅಲ್ಲಿದ್ದ ಪುರೋಹಿತರು ಹೊರಗೆ ನಿಲ್ಲಿಸಿ ಪೂಜಾ ವಿಧಾನ ನಡೆಸಿದ್ದಾರೆ.’’ ಎಂದು ಬರೆಯಲಾಗಿದೆ.
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ಅನ್ನು ನೀವು ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟಿರ್ ಪರಿಶೋದಿಸಿದಾಗ ವೈರಲ್ ಆಗುತ್ತಿರುವ ಹೇಳಿಕೆಯಲ್ಲಿ ನಿಜವಿಲ್ಲ ಎಂಬುದು ತಿಳಿದುಬಂದಿದೆ. ಇಳಯರಾಜ ದಲಿತ ಎಂಬ ಕಾರಣಕ್ಕೆ ಶ್ರೀವಿಲ್ಲಿಪುತ್ತೂರು ಆಂಡಾಳ್ ದೇವಸ್ಥಾನಕ್ಕೆ ಪ್ರವೇಶವನ್ನು ನಿರಾಕರಿಸಲಾಗಿಲ್ಲ. ಅವರಿಗೆ ಹೂಮಾಲೆ ಹಾಕಿ ಸ್ವಾಗತಿಸಲಾಯಿತು. ದೇವಸ್ಥಾನದ ಅರ್ಥಮಂಟಪ ದಾಟಿ ಹೋಗದಂತೆ ಇಳಯರಾಜ ಅವರ ಬಳಿ ಕೋರಲಾಗಿದೆ.
ನಿಜಾಂಶ ತಿಳಿಯಲು ನಾವು ಕೀವರ್ಡ್ ಸಹಾಯದಿಂದ ಗೂಗಲ್ನಲ್ಲಿ ಹುಡುಕಿದಾಗ, ಈ ಘಟನೆಗೆ ಸಂಬಂಧಿಸಿದ ಹಲವಾರು ಸುದ್ದಿ ಲೇಖನಗಳು ನಮಗೆ ಸಿಕ್ಕವು. ಟಿವಿ9 ಕನ್ನಡ ಕೂಡ 17 ಡಿಸೆಂಬರ್ 2024 ರಂದು ಈ ಬಗ್ಗೆ ಸಂಕ್ಷಿಪ್ತ ವರದಿ ಮಾಡಿರುವುದು ನಮಗೆ ಸಿಕ್ಕಿದೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ವಿರುದುನಗರ ಜಿಲ್ಲೆಯ ಶ್ರೀವಿಲ್ಲಿಪುತ್ತೂರಿನ ಆಂಡಾಳ್ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಳಯರಾಜ ಭಾಗವಹಿಸಿದ್ದರು. ಅವರಿಗೆ ಹೂಮಾಲೆ ಹಾಕಿ ಸ್ವಾಗತಿಸಲಾಯಿತು. ದೇವಸ್ಥಾನದ ಅರ್ಥಮಂಟಪ ದಾಟಿ ಹೋಗದಂತೆ ಇಳಯರಾಜ ಅವರ ಬಳಿ ಕೋರಲಾಗಿದೆ. ದೇವಸ್ಥಾನದ ಸಂಪ್ರದಾಯದ ಪ್ರಕಾರ ಅರ್ಚಕರು, ಮಠಾಧೀಶರು ಸೇರಿದಂತೆ ಅಧಿಕೃತ ಸಿಬ್ಬಂದಿಗೆ ಮಾತ್ರ ಅರ್ಥಮಂಟಪದ ಬಳಿ ಪ್ರವೇಶವಿದೆ. ಶಿಷ್ಟಾಚಾರದ ಕಾರಣದಿಂದ ಇಳಯರಾಜ ಅವರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ’’ ಎಂದು ಬರೆಯಲಾಗಿದೆ.
ಇಂಡಿಯನ್ ಎಕ್ಸ್‌ಪ್ರೆಸ್ 17 ಡಿಸೆಂಬರ್ 2024 ರಂದು ಪ್ರಕಟಿಸಿದ ವರದಿ ಪ್ರಕಾರ, ‘‘ಶ್ರೀ ಆಂಡಾಳ್ ಜೀಯರ್ ಮಠದ ಶ್ರೀ ಶತಕೋಪ ರಾಮಾನುಜ ಜೀಯರ್, ಶ್ರೀ ತ್ರಿದಂಡಿ ಶ್ರೀಮನ್ನಾರಾಯಣ ರಾಮಾನುಜ ಚಿನ್ನ ಜೀಯರ್ ಸ್ವಾಮಿ ಮತ್ತು ಹಿಂದೂ ಧರ್ಮ ಮತ್ತು ದತ್ತಿ ಇಲಾಖೆಯ ಜಂಟಿ ಆಯುಕ್ತ ಕೆ ಸೆಲ್ಲತುರೈ ಅವರು ಇಳಯರಾಜ ಅವರನ್ನು ಹೂಮಾಲೆ ಹಾಕಿ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮುನ್ನ ಇಳಯರಾಜ ಅವರು ಕೆಲವು ಅರ್ಚಕರ ಜೊತೆ ಆಂಡಾಳ್ ಸನ್ನಿಧಿ (ಅಭಯಾರಣ್ಯ), ನಂದನವನಂ (ದೇವಾಲಯದ ಉದ್ಯಾನ), ಪೆರಿಯ ಪೆರುಮಾಳ್ ಸನ್ನಿಧಿ ಸೇರಿದಂತೆ ದೇವಸ್ಥಾನದ ಮುಖ್ಯ ಜಾಗಕ್ಕೆ ತೆರಳಿದರು’’ ಎಂದು ಬರೆಯಲಾಗಿದೆ.
ಹಿಂದೂ ಧರ್ಮ ಮತ್ತು ದತ್ತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಬರೆದುಕೊಂಡಿದ್ದು, ‘‘ಆಂಡಾಳ್ ಸನ್ನಿಧಿಯಲ್ಲಿ ಭಕ್ತರು ಸಾಮಾನ್ಯವಾಗಿ ಅರ್ಧಮಂಟಪದ ಹೊರಗಿನ ಮಂಟಪವಾಗಿರುವ ವಸಂತ ಮಂಟಪದಿಂದ ಪ್ರಾರ್ಥನೆ ಸಲ್ಲಿಸುತ್ತಾರೆ. ಇದು ಗರ್ಭಗುಡಿಯೊಳಗೆ ಹೋಗುವ ಮಧ್ಯವರ್ತಿ ಸ್ಥಳ. ಇಳಯರಾಜ ಅವರು ಹಿರಿಯ ಅರ್ಚಕರೊಂದಿಗೆ ಅರ್ಥಮಂಟಪದ ಪ್ರವೇಶ ದ್ವಾರ ತಲುಪಿದಾಗ ವಸಂತ ಮಂಟಪದ ಆಚೆಗೆ ಪ್ರವೇಶವಿಲ್ಲ ಎಂದು ಅರ್ಚಕರು ತಿಳಿಸಿದರು. ಹೀಗಾಗಿ ಇಳಯರಾಜ ಅವರು ಅಲ್ಲೇ ತಮ್ಮ ಪ್ರಾರ್ಥನೆ ಸಲ್ಲಿಸಿದರು.’’ ಎಂದು ಹೇಳಿದ್ದಾರೆ.
ಇನ್ನು ಇವೆಲ್ಲವೂ ವದಂತಿ ಎಂದು ಸ್ವತಃ ಇಳಯರಾಜ ಅವರೇ ತಳ್ಳಿ ಹಾಕಿದ್ದಾರೆ. ಇಳಯರಾಜ ತಮ್ಮ ಎಕ್ಸ್ ಖಾತೆಯಲ್ಲಿ, ‘‘ನನ್ನ ವಿಚಾರದಲ್ಲಿ ಕೆಲವರು ವದಂತಿ ಹಬ್ಬಿಸಿದ್ದಾರೆ. ನಾನು ಯಾವುದೇ ಸಮಯದಲ್ಲಿ ಅಥವಾ ಸ್ಥಳದಲ್ಲಿ ನನ್ನ ಸ್ವಾಭಿಮಾನವನ್ನು ಬಿಟ್ಟುಕೊಡುವವನಲ್ಲ. ನಡೆದಿರದ ಘಟನೆಯನ್ನು ನಡೆದಿರುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಅಭಿಮಾನಿಗಳು ಹಾಗೂ ಜನರು ಈ ರೀತಿಯ ವದಂತಿಯನ್ನು ನಂಬಬಾರದು’’ ಎಂದು ಬರೆದುಕೊಂಡಿದ್ದಾರೆ.
என்னை மையமாக வைத்து சிலர் பொய்யான வதந்திகளைப் பரப்பி வருகிறார்கள். நான் எந்த நேரத்திலும், எந்த இடத்திலும் என்னுடைய சுய மரியாதையை விட்டுக் கொடுப்பவன் அல்ல, விட்டுக்கொடுக்கவும் இல்லை. நடக்காத செய்தியை நடந்ததாகப் பரப்புகின்றார்கள். இந்த வதந்திகளை ரசிகர்களும், மக்களும் நம்ப வேண்டாம்.
— Ilaiyaraaja (@ilaiyaraaja) December 16, 2024
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಸಂಗೀತ ನಿರ್ದೇಶಕ ಇಳಯರಾಜ ಅವರನ್ನು ದೇವಸ್ಥಾನ ಪ್ರವೇಶಿಸದಂತೆ ತಡೆಯಲಾಗಿದೆ ಎಂಬ ಹೇಳಿಕೆ ಸತ್ಯಕ್ಕೆ ದೂರವಾದೂದು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇಳಯರಾಜ ಅವರಿಗೆ ಹೂಮಾಲೆ ಹಾಕಿ ಸ್ವಾಗತಿಸಲಾಯಿತು. ಆದರೆ, ದೇವಸ್ಥಾನದ ಸಂಪ್ರದಾಯದ ಪ್ರಕಾರ ಅರ್ಚಕರು, ಮಠಾಧೀಶರು ಸೇರಿದಂತೆ ಅಧಿಕೃತ ಸಿಬ್ಬಂದಿಗೆ ಮಾತ್ರ ಅರ್ಥಮಂಟಪದ ಬಳಿ ಪ್ರವೇಶವಿದ್ದ ಕಾರಣ ಅಲ್ಲಿಗೆ ಅವರ ಪ್ರವೇಶವನ್ನು ನಿರ್ಬಂಧಿಸಲಾಯಿತು.