Fact Check: ಕೋಲ್ಕತ್ತಾದಲ್ಲಿ ಮುಸ್ಲಿಂ ಹುಡುಗಿಯನ್ನು ಹಿಂದೂ ಹುಡುಗರು ಅಪಹರಿಸಿ ಅತ್ಯಾಚಾರ ಮಾಡಿದ್ದು ನಿಜವೇ?, ಇಲ್ಲ ಇದು ಸ್ಕ್ರಿಪ್ಟೆಡ್ ವೀಡಿಯೊ
ಈ ದೃಶ್ಯ ಸಿಸಿಟಿವಿ ಮಾದರಿಯಲ್ಲಿ ಸೆರೆಯಾಗಿದೆ. ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು ಹಿಂದೂ ಹುಡುಗರು ಮುಸ್ಲಿಂ ಹುಡುಗಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.
By Vinay Bhat Published on 8 Feb 2025 2:43 PM ISTClaim: ಕೋಲ್ಕತ್ತಾದಲ್ಲಿ ಹಿಂದೂ ಹುಡುಗರು ಮುಸ್ಲಿಂ ಹುಡುಗಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾರೆ.
Fact: ಹಕ್ಕು ಸುಳ್ಳು. ಕೋಲ್ಕತ್ತಾದಲ್ಲಿ ಅಥವಾ ಭಾರತದಲ್ಲಿ ಈ ರೀತಿಯ ಯಾವುದೇ ಘಟನೆ ನಡೆದಿಲ್ಲ. ಇದು ಬಾಂಗ್ಲಾದೇಶದಲ್ಲಿ ಸ್ಕ್ರಿಪ್ಟ್ ಮಾಡಿದ ವೀಡಿಯೊ ಆಗಿದೆ.
Disclaimer: This article contains references to sensitive topics, including sexual violence and abduction, which may be distressing to some readers. Reader discretion is advised.
ಬುರ್ಖಾ ಧರಿಸಿದ ಮಹಿಳೆಯನ್ನು ಮೂರು ಯುವಕರು ಬಲವಂತವಾಗಿ ಕರೆದುಕೊಂಡು ಹೋಗುತ್ತಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ಸಿಸಿಟಿವಿ ಮಾದರಿಯಲ್ಲಿ ಸೆರೆಯಾಗಿದೆ. ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು ಹಿಂದೂ ಹುಡುಗರು ಮುಸ್ಲಿಂ ಹುಡುಗಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಫೆಬ್ರವರಿ 6, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಮುಸ್ಲಿಮೇತರರೊಂದಿಗೆ ಸ್ನೇಹ ಬೆಳೆಸುವುದರ ಮತ್ತು ಅವರನ್ನು ನಂಬುವುದರ ಫಲಿತಾಂಶ ಈ ವೀಡಿಯೋ ಕೋಲ್ಕತ್ತಾದ ದೊಡ್ಡ ಕಾಲೇಜಿನ ಹಿಂದಿನ ಸಿಸಿಟಿವಿ ಕ್ಯಾಮರಾದಿಂದ ಬಂದಿದೆ. ಮುಸ್ಲಿಂ ಹುಡುಗಿ ಗುಲ್ ಫಾಶನ್ ತನ್ನ ಗೆಳೆಯ ಅಂಕಿತ್ ಜೊತೆ 2 ವರ್ಷಗಳಿಂದ ಹರಾಮ್ ಸಂಬಂಧದಲ್ಲಿ ವಾಸಿಸುತ್ತಿದ್ದಳು, ಹುಡುಗಿ ಗರ್ಭಿಣಿಯಾದಾಗ, ಹುಡುಗ ಹುಡುಗಿಯನ್ನು ಭೇಟಿಯಾಗಲು ಆಹ್ವಾನಿಸಿದನು, ನಂತರ ಅವಳ ಇಬ್ಬರು ಸ್ನೇಹಿತರಾದ ಅಭಿನು ಮತ್ತು ರಾಜು ಅವರು ಹುಡುಗಿಯನ್ನು ಕರೆತಂದರು ಶಾಲೆಯ ಹಿಂದೆ ಹುಡುಗಿ ಅವಳನ್ನು ಸ್ಕಾರ್ಪಿಯೋ ಕಾರಿನಲ್ಲಿ ಕರೆದೊಯ್ದಳು. ಹುಡುಗಿಯ ಮೇಲೆ ಮೂರು ದಿನಗಳ ಕಾಲ ಅತ್ಯಾಚಾರ ನಡೆಸಲಾಯಿತು ಮತ್ತು ನಂತರ ಆಕೆಯ ದೇಹವು ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಧರ್ಮದಿಂದ ಮತ್ತು ಪ್ರಪಂಚದಿಂದಲೂ. ದೇವರೇ ನಿಮ್ಮ ಸಹೋದರಿಯರನ್ನು ಮತ್ತು ಹೆಣ್ಣು ಮಕ್ಕಳನ್ನು ರಕ್ಷಿಸಲಿ. ಇದು ಅಲೆದಾಡುವ ಮತ್ತು ದಾರಿತಪ್ಪಿದ ಮುಸ್ಲಿಂ ಹೆಣ್ಣುಮಕ್ಕಳಿಗೆ ಒಂದು ಪಾಠ ಮತ್ತು ಅವರ ಹೆತ್ತವರಿಗೆ ಮತ್ತು ಇಡೀ ಮುಸ್ಲಿಂ ಸಮುದಾಯಕ್ಕೆ ಒಂದು ಎಚ್ಚರಿಕೆ. ಅಲ್ಲಾ ಮುಸ್ಲಿಂ ಮಹಿಳೆಯರು ಮತ್ತು ಹುಡುಗಿಯರನ್ನು ಮುಸ್ಲಿಮೇತರ ಪುರುಷರು ಮತ್ತು ಮಹಿಳೆಯರು, ಹುಡುಗರು ಮತ್ತು ಹುಡುಗಿಯರ ಸ್ನೇಹ ಮತ್ತು ಮೋಹದಿಂದ ರಕ್ಷಿಸಲಿ. ಪ್ರಲೋಭನೆಯಿಂದ ಅವರನ್ನು ರಕ್ಷಿಸು ಮತ್ತು ಮುಸ್ಲಿಮರ ಗೌರವವು ಅವರು ತಮ್ಮ ಸಹೋದರಿಗಾಗಿ ಏನು ಮಾಡುತ್ತಾರೆ ಎಂಬುದನ್ನು ನೋಡಲು ಯೋಗ್ಯವಾಗಿದೆ’’ ಎಂದು ಬರೆದುಕೊಂಡಿದ್ದಾರೆ. (ಆರ್ಕೈವ್)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ತಿಳಿದುಬಂದಿದೆ. ಕೋಲ್ಕತ್ತಾದಲ್ಲಿ ಅಥವಾ ಭಾರತದಲ್ಲಿ ಈ ರೀತಿಯ ಯಾವುದೇ ಘಟನೆ ನಡೆದಿಲ್ಲ. ಇದು ಬಾಂಗ್ಲಾದೇಶದಲ್ಲಿ ಸ್ಕ್ರಿಪ್ಟ್ ಮಾಡಿದ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ, ಕೋಲ್ಕತ್ತಾದಲ್ಲಿ ಇತ್ತೀಚೆಗೆ ಅಂತಹ ಯಾವುದಾದರು ಘಟನೆ ನಡೆದಿದೆಯೇ ಎಂದು ಪರಿಶೀಲಿಸಲು ವೈರಲ್ ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ಹೆಸರುಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಸರ್ಚ್ ಮಾಡಿದ್ದೇವೆ. ಆದರೆ, ಈ ಹೇಳಿಕೆಯನ್ನು ದೃಢೀಕರಿಸುವ ಯಾವುದೇ ವರದಿಗಳು ನಮಗೆ ಸಿಗಲಿಲ್ಲ.
ಬಳಿಕ ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಬಾಂಗ್ಲಾದೇಶದ ಲಾಫಿಂಗ್ ಚಾಟ್ 2 ಎಂಬ ಫೇಸ್‌ಬುಕ್ ಪುಟದಲ್ಲಿ ಇದೇ ವೀಡಿಯೊ ಅಪ್ಲೋಡ್ ಆಗಿರುವುದು ಕಂಡುಬಂತು. ಈ ವೀಡಿಯೊವನ್ನು 21 ಜನವರಿ 2025 ರಂದು ಅಪ್‌ಲೋಡ್ ಮಾಡಲಾಗಿದೆ. ಇದಕ್ಕೆ ‘ಲವ್ ಪ್ರಮೋಸಲ್ ಒಪ್ಪದ ಕಾರಣ ಹುಡುಗಿಯನ್ನು ಎತ್ತಿಕೊಂಡು ಹೋದರು’ ಎಂದು ಕ್ಯಾಪ್ಶನ್ ನೀಡಲಾಗಿದೆ.
ಈ ಫೇಸ್‌ಬುಕ್ ಪುಟದಲ್ಲಿ ಅಪ್ಲೋಡ್ ಮಾಡಿದ ಈ ವೀಡಿಯೊಕ್ಕೆ 4.2 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ, ಅಲ್ಲದೆ 22 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದೆ. ಹೀಗಾಗಿ ಈ ಪೇಜ್ ಅನ್ನು ನಾವು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಆಗ ಇದೇ ವೈರಲ್ ವೀಡಿಯೊದಲ್ಲಿರುವ ಸ್ಥಳದಲ್ಲಿ ಚಿತ್ರೀಕರಿಸಲಾದ ಮತ್ತೊಂದು ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ. ಇದನ್ನು ಅವರ ಪುಟದಲ್ಲಿ 17 ಜನವರಿ 2025 ರಂದು ಅಪ್‌ಲೋಡ್ ಮಾಡಲಾಗಿದೆ.
ನಾವು ಈ ಫೇಸ್‌ಬುಕ್ ಪೇಜ್ನ ಬಯೋವನ್ನು ಪರಿಶೀಲಿಸಿದಾಗ, ‘‘ನಮ್ಮ ವೀಡಿಯೊಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು. ಇದು ಕೇವಲ ಮನರಂಜನೆಗಾಗಿ ಮಾತ್ರ. ಈ ಪುಟವನ್ನು ಅನುಸರಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮನ್ನು ರಂಜಿಸಲು ನಾವು ಶ್ರಮಿಸುತ್ತಿದ್ದೇವೆ’’ ಎಂದು ಬರೆದಿರುವುದು ಕಂಡುಬಂತು. ಹೀಗಾಗಿ ಇದು ಸ್ಕ್ರಿಪ್ಟ್ ಮಾಡಿದ ವೀಡಿಯೊ ಎಂಬುದು ಸೂಚಿಸುತ್ತದೆ.
ನಂತರ ನಾವು ಈ ಫೇಸ್‌ಬುಕ್ ಪೇಜ್ನಲ್ಲಿರುವ ಇತರ ವೀಡಿಯೊಗಳನ್ನು ಸಹ ಪರಿಶೀಲಿಸಿದ್ದೇವೆ. ಆಗ ವೈರಲ್ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿಗಳೇ ಇತರ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳಲ್ಲಿ ಕಾಣಿಸಿಕೊಂಡಿರುವುದನ್ನು ನೋಡಿದೆವು. ಈ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ಈ ಫೇಸ್‌ಬುಕ್ ಪುಟದ ನಿರ್ವಾಹಕರನ್ನು ಸಂಪರ್ಕಿಸಿದ್ದೇವೆ. ಅವರಿಂದ ರಿಪ್ಲೇ ಬಂದ ತಕ್ಷಣ ಅಪ್ಡೇಟ್ ಮಾಡುತ್ತೇವೆ.
ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದ ಒಂದು ಸ್ಕ್ರಿಪ್ಟೆಡ್ ವೀಡಿಯೊವನ್ನು ಕೋಲ್ಕತ್ತಾದಲ್ಲಿ ಹಿಂದೂಗಳು ಮುಸ್ಲಿಂ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ನೈಜ ಘಟನೆ ಎಂಬಂತೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ತೀರ್ಮಾನಿಸುತ್ತೇವೆ.