(Trigger Warning: ಈ ಸತ್ಯ ಪರಿಶೀಲನೆಯು ಹಿಂಸೆ ಮತ್ತು ಆತ್ಮಹತ್ಯೆಯ ಉಲ್ಲೇಖಗಳನ್ನು ಒಳಗೊಂಡಿದೆ. ವಿಷಯದ ಸೂಕ್ಷ್ಮ ಸ್ವರೂಪದಿಂದಾಗಿ ಹಿಂಸಾತ್ಮಕ ಕೃತ್ಯಕ್ಕೆ ಸಂಬಂಧಿಸಿದ ಚಿತ್ರಗಳು ಅಥವಾ ವೀಡಿಯೊಗಳನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ.)
(ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಆತ್ಮಹತ್ಯಾ ಆಲೋಚನೆಗಳೊಂದಿಗೆ ಹೋರಾಡುತ್ತಿದ್ದರೆ, ದಯವಿಟ್ಟು ಮಾನಸಿಕ ಆರೋಗ್ಯ ವೃತ್ತಿಪರರಿಂದ ಸಹಾಯ ಪಡೆಯಿರಿ ಅಥವಾ ನಿಮ್ಮ ಪ್ರದೇಶದಲ್ಲಿ ಆತ್ಮಹತ್ಯೆ ತಡೆಗಟ್ಟುವಿಕೆ ಸಹಾಯವಾಣಿಯನ್ನು ಸಂಪರ್ಕಿಸಿ.)
ಕನ್ವರ್ ಯಾತ್ರೆ ಜುಲೈ 23 ರಂದು ಸಾವನ್ ಶಿವರಾತ್ರಿಯಂದು ಕೊನೆಗೊಂಡಿದೆ. ಯಾತ್ರೆಯ ಕೊನೆಯ ದಿನದಂದು, ಅಂದರೆ ಜುಲೈ 22 ರಂದು, ಲಕ್ಷಾಂತರ ಭಕ್ತರು ಗಂಗಾಜಲವನ್ನು ಸಂಗ್ರಹಿಸಲು ಹರಿದ್ವಾರವನ್ನು ತಲುಪಿದರು. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಕನ್ವಾರಿಯಾಗಳಿಂದ ತುಂಬಿದ ಟ್ರಕ್‌ಗಳು ರಸ್ತೆಯಲ್ಲಿ ಹಾದುಹೋಗುತ್ತಿವೆ. ಈ ಸಂದರ್ಭ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಓಡಿಹೋಗಿ ಒಂದು ಟ್ರಕ್‌ನ ಕೆಳಗೆ ಮಲಗುತ್ತಾನೆ. ಟ್ರಕ್ ಆ ವ್ಯಕ್ತಿಯ ಮೇಲೆ ಹಾದುಹೋದ ತಕ್ಷಣ, ರಸ್ತೆಯಲ್ಲಿ ಜನರ ಗುಂಪು ಸೇರಲು ಪ್ರಾರಂಭಿಸುತ್ತದೆ.
ಫೇಸ್ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ನಿನ್ನೆ ಸಹರಾನ್‌ಪುರದ ದಿಯೋಬಂದ್‌ನಲ್ಲಿ, ಕನ್ವರ್‌ನನ್ನು ಕರೆದೊಯ್ಯುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದು "ವಾಹಿದ್" ಎಂಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಪೊಲೀಸರಿಗೆ ವೀಡಿಯೊ ಸಿಕ್ಕಾಗ ಗಲಭೆಗಳು ಪ್ರಾರಂಭವಾಗಿದ್ದವು. ಕನ್ವರ್ ಯಾತ್ರೆಯ ವೀಡಿಯೊ ಮಾಡುತ್ತಿದ್ದಾಗ ಒಬ್ಬ ಹುಡುಗನ ಕ್ಯಾಮೆರಾ ಈ ವೀಡಿಯೊವನ್ನು ಸೆರೆಹಿಡಿಯಿತು. ಈ ವೀಡಿಯೊದಲ್ಲಿ ಈ ವ್ಯಕ್ತಿ ಓಡಿಹೋಗಿ ಟ್ರಕ್‌ನ ಚಕ್ರಗಳ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಗಂಭೀರ ಪ್ರಶ್ನೆಯೆಂದರೆ ಆ "ವಾಹಿದ್" ವ್ಯಕ್ತಿ ಯಾರು, ಅವನು ಇದನ್ನು ಏಕೆ ಮಾಡಿದನು?? ಅವನಿಗೆ ಇದನ್ನು ಮಾಡಲು ಯಾರು ಹೇಳಿದರು??. ಇದು ಕನ್ವರ್ ಯಾತ್ರೆಯನ್ನು ನಿರಂತರವಾಗಿ ದೂಷಿಸುವ ಪಿತೂರಿಯ ಒಂದು ಭಾಗವಾಗಿದೆ. ಹಿಂದೂಗಳನ್ನು ಭಯೋತ್ಪಾದಕರು ಎಂದು ಘೋಷಿಸಲು ಯಾರು ಪ್ರಯತ್ನಿಸುತ್ತಿದ್ದಾರೆ? ಈ ಪ್ರಶ್ನೆಯನ್ನು ಆಳವಾಗಿ ಯೋಚಿಸಿದರೆ, ಉತ್ತರವು ಸ್ವತಃ ಸಿಗುತ್ತದೆ.’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಈ ಹೇಳಿಕೆ ದಾರಿತಪ್ಪಿಸುವಂತಿದೆ ಎಂದು ಕಂಡುಬಂದಿದೆ. ಈ ಘಟನೆ ಇತ್ತೀಚಿನದಲ್ಲ. ಇದು 2017 ರಲ್ಲಿ ನಡೆದ ಘಟನೆಯಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಗೂಗಲ್ ಲೆನ್ಸ್ ಸಹಾಯದಿಂದ ವೀಡಿಯೊದ ಪ್ರಮುಖ ಚೌಕಟ್ಟುಗಳನ್ನು ಹುಡುಕಿದೆವು. ಆಗ ಜುಲೈ 2017 ರಲ್ಲಿ ಅನೇಕ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಇದೇ ವೀಡಿಯೊ ಅಪ್‌ಲೋಡ್ ಆಗಿರುವುದನ್ನು ನಾವು ಕಂಡುಕೊಂಡೆವು. ಇಲ್ಲಿಯೂ ಸಹ, ಇದು ದಿಯೋಬಂದ್‌ನಿಂದ ಬಂದಿದೆ ಎಂದು ಹೇಳಲಾಗಿದೆ.
ಕೀವರ್ಡ್‌ಗಳೊಂದಿಗೆ ಹುಡುಕಿದಾಗ, 2017 ರಲ್ಲಿ ನಡೆದ ಈ ಘಟನೆಯ ಕುರಿತು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ನಮಗೆ ಹಲವು ಸುದ್ದಿ ವರದಿಗಳು ಸಿಕ್ಕವು. ಜುಲೈ 18, 2017 ರಂದು ಲೈವ್ ಹಿಂದೂಸ್ಥಾನ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ‘‘ಈ ಘಟನೆ ಜುಲೈ 18, 2017 ರಂದು ಉತ್ತರ ಪ್ರದೇಶದ ದಿಯೋಬಂದ್‌ನಲ್ಲಿ ಸಂಭವಿಸಿದೆ. ವಾಹಿದ್ ಎಂಬ ಯುವಕ ಕನ್ವಾರಿಯಾಗಳ ವಾಹನದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಡೀ ಘಟನೆಯನ್ನು ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಯಾವುದೇ ಕಾನೂನು ಕ್ರಮವಿಲ್ಲದೆ ಯುವಕನ ಶವವನ್ನು ಅಂತ್ಯಕ್ರಿಯೆ ಮಾಡುವುದಾಗಿ ಕುಟುಂಬ ಸದಸ್ಯರು ಹೇಳಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ.
ವರದಿಗಳ ಪ್ರಕಾರ , ಈ ಘಟನೆ ದಿಯೋಬಂದ್‌ನ ಲಹಸ್ವರ ಬಳಿಯ ಸಹರಾನ್‌ಪುರ-ಮುಜಾಫರ್‌ನಗರ ರಾಜ್ಯ ಹೆದ್ದಾರಿಯ ಮೇಲ್ಸೇತುವೆಯ ಕೆಳಗೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ 36 ವರ್ಷದ ವ್ಯಕ್ತಿಯ ಹೆಸರು ವಾಹಿದ್, ಅವರು ದಿಯೋಬಂದ್‌ನಲ್ಲಿ ವಾಸಿಸುತ್ತಿದ್ದರು.
ಘಟನೆಯ ನಂತರ, ಟ್ರಕ್ ಅನ್ನು ನಿಲ್ಲಿಸಿ ಕನ್ವಾರಿಯಾ ಕುಟುಂಬವನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಆದಾಗ್ಯೂ, ಪೊಲೀಸರು ವಿಚಾರಣೆಯ ನಂತರ ಅವರನ್ನು ಬಿಡುಗಡೆ ಮಾಡಿದರು. ವಾಹಿದ್ ಅವರ ಕುಟುಂಬವು ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಅವರ ಅಂತ್ಯಕ್ರಿಯೆಯನ್ನು ಸಹ ನಡೆಸಿತು. ಅವರ ಪ್ರಕಾರ, ವಾಹಿದ್ ಮಾನಸಿಕವಾಗಿ ಅಸ್ವಸ್ಥರಾಗಿದ್ದರು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, 2017 ರಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಕನ್ವಾರಿಯಾಗಳ ಟ್ರಕ್ ಅಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವೀಡಿಯೊವನ್ನು 2025 ರ ಕನ್ವರ್ ಯಾತ್ರೆಯ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.